ಬೆಂಗಳೂರು: ಕರ್ನಾಟಕ ಅಭಿವೃದ್ಧಿಗೆ ಕೊಡುಗೆ ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಸವಿ ನೆನಪಿನಲ್ಲಿ ಆರ್.ಗುಂಡೂರಾವ್ ಫೌಂಡೇಷನ್ ಶಿಕ್ಷಣ, ಆರೋಗ್ಯ, ಪರಿಸರ, ಸ್ವಯಂ ಉದ್ಯೋಗಕ್ಕೆ ಹೆಚ್ಚು ಒತ್ತು ನೀಡಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷರು, ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.
ಆರ್.ಟಿ.ನಗರದಲ್ಲಿ ಮಾಜಿ ಸಿಎಂ ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ನೂತನ ವರ್ಷ 2023ರ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಸಂಬಂಧಿಸಿದಂತೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಮತ್ತು ಬಿ.ಬಿ.ಎಂ.ಪಿ. ಶಾಲೆಗಳನ್ನು ನವೀಕರಣ ಮಾಡಿ ಹೈಟೆಕ್ ಶಾಲೆಗಳಾಗಿ ನಿರ್ಮಿಸಲಾಗಿದೆ. ಪ್ರತಿವರ್ಷ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ ಎಂದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಲಂ ಪ್ರದೇಶ ನಿವಾಸಿಗಳ ಆರೋಗ್ಯ ಸುರಕ್ಷತೆಗಾಗಿ ನಮ್ಮ ಫೌಂಡೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ಪರಿಸರ ಕಾಳಜಿಯಿಂದ ನಮ್ಮ ಕ್ಷೇತ್ರದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಸತತವಾಗಿ ಹಮ್ಮಿಕೊಂಡು ಬರಲಾಗಿದೆ. ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಆರ್.ಗುಂಡೂರಾವ್ ಫೌಂಡೇಷನ್ ವತಿಯಿಂದ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಯಂತ್ರ ಮತ್ತು ಬೀದಿ ಬದಿಯ ವ್ಯಾಪಾರಿಗಳಿಗೆ ತಳ್ಳುವ ಕೈಗಾಡಿಗಳನ್ನು ವಿತರಿಸಲಾಗಿದೆ ಎಂದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತದಂತೆ ಕಾಂಗ್ರೆಸ್ ಪಕ್ಷ ನಡೆಯುತ್ತಿದೆ. ಅದರ ಜೊತೆಯಲ್ಲಿ ಆರ್.ಗುಂಡೂರಾವ್ ಫೌಂಡೇಷನ್ ಸಹಕಾರ ನೀಡುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪೇಟೆ ಉಮೇಶ್, ಡಿ.ಸಿ.ಸಿ. ಸದಸ್ಯ ನಾಗೇಶ್, ಕಾಂಗ್ರೆಸ್ ಪಕ್ಷದ ಮುಖಂಡ ಮೆಡಿಕಲ್ ಕುಮಾರ್, ಸತ್ಯಪ್ಪ, ರಘು, ಕರುಣ ಮೊದಲಾದವರು ಹಾಜರಿದ್ದರು.




