ಈ ಬಾರಿಯ ಕುವೆಂಪು ಪ್ರಶಸ್ತಿಗೆ ಅತ್ಯುತ್ತಮ ಆಯ್ಕೆ

3 years ago

ಕುಪ್ಪಳ್ಳಿಯ ಕುವೆಂಪು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಈ ಬಾರಿಯ ಪ್ರಶಸ್ತಿಗೆ ಇಮಯಮ್ ಎಂಬ ಕಾವ್ಯನಾಮದಿಂದ ತಮಿಳು ಕಥೆ ಮತ್ತು ಕಾದಂಬರಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ವಿ.ಕೆ. ಅಣ್ಣಾಮಲೈ ಆಯ್ಕೆಯಾಗಿರುವುದು ನಿಜಕ್ಕೂ ಪ್ರಶಸ್ತಿಗೆ ಗೌರವ ತರುವ ವಿಷಯ.

ಡಾ.ಹಂಪನಾ, ಡಾ. ಬಿ.ಎಲ್. ಶಂಕರ್, ಅಗ್ರಹಾರ ಕೃಷ್ಣಮೂರ್ತಿ, ತಮಿಳು ಸೆಲ್ವಿ ಇವರು ಆಯ್ಕೆ ಸಮಿತಿಯ‌ ಸದಸ್ಯರಾಗಿದ್ದರು. ತಮಿಳು ಸಾಹಿತ್ಯದಲ್ಲಿ ಆರು ಕಾದಂಬರಿಗಳು, ಏಳು ಕಥಾ ಸಂಕಲನಗಳನ್ನು ಹೊರತಂದಿರುವ ಅಣ್ಣಾಮಲೈ ತಿರುಚ್ಚಿ ಮೂಲದವರು. ಇವರ ಸಹೋದರ ಈಗಿನ ಡಿ.ಎಂ.ಕೆ. ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿ ಬರೆವಣಿಗೆ ಆರಂಭಿಸಿದ ಅಣ್ಣಾಮಲೈ ಗೆ ಈಗ ಐವತ್ತೆಂಟು ವರ್ಷ. ತಮ್ಮ ಮೊದಲ ಕಾದಂಬರಿ ಕೊವೆರು ಕಾಳುದೈಗಳು ಅಂದರೆ ಘಾಸಿಗೊಂಡ ಪ್ರಾಣಿ ಅಥವಾ ನೋವುಂಡ ಜೀವ ಎಂದು ಕನ್ನಡದಲ್ಲಿ ಹೇಳಬಹುದು. ಈ ಕೃತಿ ಪ್ರೆಂಚ್. ಇಂಗ್ಲೀಷ್ ಸೇರಿದಂತೆ ಭಾರತದ ಹಲವು ಭಾಷೆಗಳಿಗೆ ಅನುವಾದವಾಗಿದೆ.

ಅಣ್ಣಾಮಲೈ ಅವರು ತಮ್ಮ ಕಥೆ ಹಾಗೂ ಕಾದಂಬರಿ ಗೆ ಆಯ್ಕೆ ಮಾಡಿಕೊಳ್ಳುವ ವಸ್ತುಗಳು ಮತ್ತು ಬಳಸುವ ಭಾಷೆಯು ಅಪ್ಪಟ ತಮಿಳು ಗ್ರಾಮೀಣ ಭಾಷೆಯಾಗಿದ್ದು, ಅಲ್ಲಿನ ಜಾನಪದದ ಸೊಗಡನ್ನು ಹೊಂದಿರುವುದು ವಿಶೇಷವಾಗಿದೆ. ಸಾವು ಸೂರು ಅಥವಾ ಕನ್ನಡದಲ್ಲಿ ಸಾವಿನ ಅನ್ನ ಎಂದು ಹೇಳಬಹುದಾದ ಕೃತಿಯಲ್ಲಿ ಹಾಗೂ ಅವರ ಕಥೆಗಳ ಸ್ತ್ರೀ ಪಾತ್ರಗಳಿಗೆ ತಮಿಳು ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನವಿದೆ.

ಒಂದು ರೀತಿಯಲ್ಲಿ ಅಕ್ಷರ ಲೋಕದ ಸ್ವಾಮ್ಯ ಪಡೆದಿದ್ದ‌ ಮೇಲ್ಜಾತಿಯವರ ಕೈಯಲ್ಲಿ ನಿಂತ ನೀರಾಗಿದ್ದ ತಮಿಳು ಕಥನ ಲೋಕಕ್ಕೆ ಎಡಪಂಥೀಯ ನಿಲುವಿನ ಜಯಕಾಂತನ್ ಹೊಸ ‌ದೃಷ್ಟಿಕೋನವನ್ನು ನೀಡಿದರು.ಇವರ ಜೊತೆಗೆ ಪಾಂಡಿಚೆರಿಯ ಪ್ರೆಂಚ್ ಅಧ್ಯಯನ ಕೇಂದ್ರದಲ್ಲಿ ಪ್ರೊಫೆಸರ್ ಆಗಿದ್ದ ಪ್ರಾನ್ಸ್ ಮೂಲದ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ದಲಿತ ಅನಕ್ಷರಸ್ತೆ ಹೆಣ್ಣುಮಗಳ ಆತ್ಮಚರಿತ್ರೆ ಯನ್ನು 1974 ರಲ್ಲಿ ದಾಖಲಿಸಿ ತಮಿಳು ಸಾಹಿತ್ಯ ಸಾಗಬೇಕಾದ ಮಾರ್ಗವನ್ನು ತೋರಿಸಿಕೊಟ್ಟರು.

ಈಗ ವಿ.ಕೆ. ಅಣ್ಣಾಮಲೈ, ಪೆರುಮಾಳ್ ಮುರುಗನ್ ಮತ್ತು ಮೀನಾ ಕಂದಸ್ವಾಮಿ ಮುಂತಾದವರು ತಮಿಳು ಸಾಹಿತ್ಯಕ್ಕೆ ತಮ್ಮ ಶಕ್ತಿಯುತ ಕಥೆ,ಕಾದಂಬರಿ ಮತ್ತು ಕಾವ್ಯದ ಮೂಲಕ ಮಾಂಸ ಮತ್ತು ಮಜ್ಜೆಯನ್ನು ತುಂಬುತ್ತಿದ್ದಾರೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply