ರಾಜ್ಯದಲ್ಲಿ ಭಯೋತ್ಪಾದನೆ ಮೂಲೋತ್ಪಾಟನೆಗೆ ಕ್ರಮ: ಆರಗ ಜ್ಞಾನೇಂದ್ರ

3 years ago

ಮಂಗಳೂರು: ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆಯನ್ನು ಮೂಲೋತ್ಪಾಟನೆ ಮಾಡಲು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆಯೂ ಆಳವಾಗಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಾದ ಎಲ್ಲಾ ಪುರಾವೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದರು.

ಈ ಹಿಂದೆ ಬಹಳ ಕಡೆ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದವು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಗೃಹ ಇಲಾಖೆ ಇಂತಹ ಚಟುವಟಿಕೆ ಹತ್ತಿಕ್ಕಲು ಒತ್ತು ನೀಡಿವೆ. ಹಾಗಾಗಿ ಭಯೋತ್ಪಾದನಾ ಕೃತ್ಯಗಳು ಕಡಿಮೆಯಾಗಿವೆ ಎಂದರು.

ಆರೋಪಿಯು ಕೊಯಮುತ್ತೂರು ಕೊಚ್ಚಿನ್, ನಾಗರಕೋಯಿಲ್, ಕನ್ಯಾಕುಮಾರಿ ಮೊದಲಾದ ಕಡೆ ಸುತ್ತಾಡಿದ್ದಾನೆ. ಪೊಲೀಸರ ತಂಡಗಳು ಅಲ್ಲಿಗೂ ತೆರಳಿ ಸಮಗ್ರವಾದ ಮಾಹಿತಿ ಕಲೆ ಹಾಕುತ್ತಿವೆ ಎಂದರು.

ಹಿಂದೆ ಮಂಗಳೂರಿನಲ್ಲಿ ಉಗ್ರಗಾಮಿ ಸಂಘಟನೆಗಳನ್ನು ಬೆಂಬಲಿಸಿ ಗೋಡೆಬರಹ ಬರೆದ ಪ್ರಕರಣದಲ್ಲಿ ಆರೋಪಿ ಮಹಮದ್ ಶಾರಿಕ್ ಬಂಧನಕ್ಕೊಳಗಾಗಿದ್ದ. ಆತನ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ (ಯುಎಪಿ)ಕಾಯ್ದೆ ಆಡಿಯೂ ಪ್ರಕರಣ ದಾಖಲಾಗಿತ್ತು. ಆತನ ಚಲನವಲನಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿತ್ತು ಎಂದರು.

ತೀರ್ಥಹಳ್ಳಿಯಲ್ಲಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದ ಆತ ಒಂದು ದಿನ ಏಕಾಏಕಿ ನಾಪತ್ತೆಯಾದ. ಬಳಿಕ ಪದೇಪದೇ ಸ್ಥಳಗಳನ್ನ ಬದಲಾಯಿಸಿದ್ದಾನೆ. ಗುರುತು ಬದಲಾಯಿಸಿ ತನ್ನನ್ನು ಹಿಂದು ಎಂಬಂತೆ ಬಿಂಬಿಸಿಕೊಂಡು ತಿರುಗಾಡುತ್ತಿದ್ದ. ಅವನು ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಹಾಗಾಗಿ ಆತ ಇಷ್ಟೆಲ್ಲ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದರೂ ಪೊಲೀಸ್ ಇಲಾಖೆಗೆ ಸುಳಿವು ಸಿಕ್ಕಿರಲಿಲ್ಲ ಎಂದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಹಿಂದೂ ಮುಸ್ಲಿಂ ಮತ್ತು ಕ್ರೈಸ್ತರ ನಡುವೆ ಸೌಹಾರ್ದ ಕೆಡಿಸಿ, ಕೋಮು ದ್ವೇಷ ಸೃಷ್ಟಿಸುವುದೇ ಇಂತಹ ಕೃತ್ಯದ ಮೂಲ ಉದ್ದೇಶ ಎಂದರು.

ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ಹಣಕಾಸಿನ ಮೂಲ ಯಾವುದು? ಅವರಿಗೆ ದುಡ್ಡು ಎಲ್ಲಿಂದ ಬರುತ್ತಿತ್ತು ಎಂಬುದನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದೇವೆ. ತನಿಖೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದೇವೆ. ಅದರ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲಾಗದು ಎಂದರು.

ಆರೋಪಿಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಗಳಾದ ಕಂಪ್ಯೂಟರ್, ಫೋನ್ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಂಡಿದ್ದೇವೆ. ಅದಕ್ಕೆ ಪೂರಕವಾಗಿ ಆತನಿಂದ ಕೆಲವು ಮಾಹಿತಿ ಸಂಗ್ರಹಿಸಬೇಕಿದೆ ಎಂದರು.

ಈ ಪ್ರಕರಣದ ತನಿಖೆಯನ್ನು ಎನ್ ಐ ಎಗೆ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಘಟನೆ ನಡೆದ ಮೊದಲ ದಿನದಿಂದಲೂ ಘನ್ ಐ ಎಂ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ತನಿಖಾ ಏಜೆನ್ಸಿಗಳು ನಮ್ಮ ಜೊತೆ ಸಂಪರ್ಕದಲ್ಲಿವೆ. ಆ ಏಜೆನ್ಸಿಗಳು ಕೂಡ ತನಿಖೆ ನಡೆಸುತ್ತಿವೆ ಎಂದರು.

ಮಂಗಳೂರಿನ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಈ ಪ್ರಕರಣ ಸಂಬಂಧ ಒಟ್ಟು ಎಂಟು ಕಡೆಗಳಲ್ಲಿ ಶೋಧ ನಡೆಸಿದ್ದೇವೆ. ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಅವರನ್ನು ಆರೋಪಿಗಳೆಂದು ಇನ್ನೂ ಪರಿಗಣಿಸಿಲ್ಲ ಎಂದರು.

Leave a Reply