ಮಂಗಳೂರು: ಉಡುಪಿ ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡ ಹಾಗೂ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ದಾಸ್ ಭಂಡಾರಿ (80 ವರ್ಷ) ನಿಧನಕ್ಕೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ)ಸಿಐಟಿಯು ರಾಜ್ಯ ಸಮಿತಿಯು ಭಾವಪೂರ್ಣ ನಮನಗಳನ್ನು ಸಲ್ಲಿಸಿದೆ.
ಕಾಮ್ರೇಡ್ ದಾಸ ಭಂಡಾರಿಯವರು ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಗ್ರಾಮದ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿನ್ನೆ ರಾತ್ರಿ ನಿಧರಾಗಿದ್ದಾರೆ.
ಉಡುಪಿ ಜಿಲ್ಲೆಯ ಸಿಪಿಐ(ಎಂ) ಪಕ್ಷದ ಮಾಜಿ ಜಿಲ್ಲಾ ಸಮಿತಿಯ ಸದಸ್ಯರಾಗಿದ್ದ ಅವರು ಕುಂದಾಪುರ ತಾಲೂಕಿನಲ್ಲಿ ಭೂ ಸುಧಾರಣೆಗಾಗಿ ತೀವ್ರ ಹೋರಾಟ ನಡೆಸಿದ್ದರು.
ಉಡುಪಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರನ್ನು ಗ್ರಾಮ ಮಟ್ಟದಲ್ಲಿ ಸಂಘಟಿಸುವಲ್ಲಿ ದಾಸ ಭಂಡಾರಿಯವರ ಪ್ರಯತ್ನ ಸ್ಮರಣಿಯವಾದುದ್ದು. ಗ್ರಾಮ ಘಟಕಗಳ ಮೂಲಕ ಸಂಘಟಿಸಿ ಅಲ್ಲಿಯೇ ನಾಯಕತ್ವವನ್ನು ಪ್ರೇರೇಪಿಸಿ ಆ ಮೂಲಕ ಸ್ಥಳೀಯ ಸಮಸ್ಯೆಗಳ ಕುರಿತು ಹೋರಾಟ ಸಂಘಟಿಸುವ ಅವರು ಪ್ರಮುಖ ಪಾತ್ರವಹಿಸಿದ್ದರು.
ತೀರ ಅಸಂಘಟಿರಾಗಿದ್ದ ಕಟ್ಟಡ ಕಾರ್ಮಿಕರ ಮನವೊಲಿಸಿ ಅವರಿಗೆ ಸಂಘಟನೆಯ ಅಗತ್ಯವನ್ನು ಮನಗಾಣಿಸಿ ಅವರು ಸಂಘಟಿತರಾಗಿ ತಮ್ಮ ಹಕ್ಕು ಹಾಗೂ ಸೌಲಭ್ಯಗಳಿಗಾಗಿ ಹೋರಾಡುವಂತೆ ಜಾಗೃತಿ ಮೂಡಿಸಿದ್ದರು. ಅದರ ಪರಿಣಾಮವೇ ಇಂದು ಕುಂದಾಪುರ ಹಾಗೂ ಬೈಂದೂರು ತಾಲೂಕುಗಳ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಗಳು ರಾಜ್ಯಕ್ಕೆ ಮಾದರಿಗಳಾಗಿವೆ. ಇದರ ಹಿಂದೆ ದಾಸ ಭಂಡಾರಿಯವರ ಪ್ರಾಮಾಣಿಕತೆ, ಬದ್ಧತೆ ಮತ್ತು ಅವರು ಅಳವಡಿಸಿಕೊಂಡಿದ್ದ ದುಡಿಯುವ ವರ್ಗದ ಚಿಂತನೆಗಳು ಪ್ರಮುಖ ಪಾತ್ರವಹಿಸಿವೆ.
ದಾಸ ಭಂಡಾರಿಯವರ ನಿಧನ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕ ಚಳವಳಿಗೆ ಮತ್ತು ರಾಜ್ಯದ ದುಡಿಯುವ ವರ್ಗದ ಚಳವಳಿಗೆ ಅಪಾರ ನಷ್ಟ ಉಂಟುಮಾಡಿದೆ. ಅವರ ಮಡದಿ ಹಾಗೂ ಅವರ ಮಕ್ಕಳು ಹಾಗೂ ಅವರ ಬಂಧುಗಳಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಅತೀವ ಸಂತಾಪವನ್ನು ಹೇಳಲು ಬಯಸುತ್ತದೆ ಮತ್ತು ಕಾಮ್ರೇಡ್ ದಾಸ ಭಂಡಾರಿಯವರ ಆದರ್ಶಗಳನ್ನು ಸಂಘಟನೆಯ ಎಲ್ಲ ಹಂತಗಳಲ್ಲಿ ಅಳವಡಿಸಿಕೊಂಡು ಮುನ್ನಡೆಸುವ ಪ್ರಯತ್ನ ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ)ಸಿಐಟಿಯು) ರಾಜ್ಯ ಸಮಿತಿ ಹೇಳಿದೆ.




