ದಾವಣಗೆರೆ: ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿದೆ.
ಚಂದ್ರಶೇಖರ್ ಸಾವಿಗೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್ಐಆರ್ನಲ್ಲಿ ಐಪಿಸಿ 302 (ಕೊಲೆ), 201 (ಸಾಕ್ಷ್ಯನಾಶ) ಮತ್ತು 427 (ವಾಹನ ಜಖಂ) ಕಲಂಗಳನ್ನು ದಾಖಲಿಸಲಾಗಿದೆ.
ಮೃತ ಚಂದ್ರಶೇಖರ್ ತಂದೆ ರಮೇಶ್ ನೀಡಿರುವ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ. ಈ ಮೊದಲು ವ್ಯಕ್ತಿ ನಾಪತ್ತೆ ಎಂದು ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತುಂಗಾ ನಾಲೆಯಲ್ಲಿ ಪತ್ತೆಯಾದ ಕಾರಿನ ಹಿಂಬದಿಯ ಸೀಟ್ನಲ್ಲಿ ಚಂದ್ರಶೇಖರ್ ಮೃತ ದೇಹ ಇತ್ತು. ಕೈಕಾಲುಗಳನ್ನು ಕಟ್ಟಿಹಾಕಿ, ಕಿವಿಗಳಿಗೆ ಹಲ್ಲೆ ಮಾಡಲಾಗಿದೆ. ತಲೆಗೆ ಆಯುಧದಿಂದ ಹೊಡೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ದೂರಿನ ವಿವರ: ಎಂ.ಪಿ.ರೇಣುಕಾಚಾರ್ಯ ಕುಟುಂಬಸ್ಥರು ನೀಡಿದ ದೂರಿನಲ್ಲಿ ಚಂದ್ರಶೇಖರ್ ಮೃತದೇಹ ಕಾರಿನ ಹಿಂದಿನ ಸೀಟ್ನಲ್ಲಿತ್ತು. ಅಷ್ಟೇ ಅಲ್ಲದೇ ಚಂದ್ರಶೇಖರ್ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದರು. ನಂತರ ಕಿವಿ, ತಲೆಗೆ ಆಯುಧದಿಂದ ಹಲ್ಲೆ ಸಹ ಮಾಡಲಾಗಿತ್ತು. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಮೃತದೇಹವನ್ನು ಕಾರಿನಲ್ಲಿಟ್ಟು ತುಂಗಾ ಕಾಲುವೆಗೆ ದೂಡಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೃತ ಚಂದ್ರಶೇಖರ್ ಅಕ್ಟೋಬರ್ 30ರಂದು ನಾಪತ್ತೆಯಾಗಿದ್ದರು. ಅಂದು ಸಂಜೆಯಿಂದ ಅವರು ಏನೆಲ್ಲಾ ಮಾಡಿದರು ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅ. 30ರಂದು ಮಹರ್ಶಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡಿದ್ದ ಚಂದ್ರಶೇಖರ್, ಸಂಜೆ 6.28ಕ್ಕೆ ಮನೆಗೆ ಬಂದು ತಂದೆ ರಮೇಶ್ಗೆ ಕರೆ ಮಾಡಿದ್ದರು. ನಂತರ ಚಿಕ್ಕಮಗಳೂರಿನ ಗೌರಿ ಗದ್ದೆಗೆ ಹೋಗುತ್ತೇನೆ ಎಂದು ಹೇಳಿ ಸ್ವತಃ ಕಾರ್ ಡ್ರೈವ್ ಮಾಡಿಕೊಂಡು ಶಿವಮೊಗ್ಗಕ್ಕೆ ತೆರಳಿ ಗೆಳೆಯ ಕಿರಣ್ನನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು.
ಗೌರಿಗದ್ದೆಯಿಂದ ರಾತ್ರಿ 11.15ಕ್ಕೆ ಶಿವಮೊಗ್ಗಕ್ಕೆ ಬಂದು ಕಿರಣ್ನನ್ನು ಇಳಿಸಿದ್ದರು. ಶಿವಮೊಗ್ಗದಿಂದ ಹೊನ್ನಾಳಿ ಕಡೆ ಹೊರಟ ಬಗ್ಗೆ ಉಷಾ ನರ್ಸಿಂಗ್ ಹೋಂ ಸಿಸಿಟಿವಿಯಲ್ಲಿ ಫೂಟೇಜ್ ಸಿಕ್ಕಿದೆ. ನ್ಯಾಮತಿ ಸಮೀಪದ ಸುರಹೊನ್ನೆಯಲ್ಲಿ ಕಾರ್ ದಾಟಿರುವ ದೃಶ್ಯವಿದೆ. ಅ. 31ರ ಬೆಳಿಗ್ಗೆ 6.15ಕ್ಕೆ ಫೋನ್ ಆಫ್ ಆಗಿದೆ. ನ್ಯಾಮತಿಯಿಂದ 10 ಕಿಮೀ ದೂರದ ನಂತರ ಚಂದ್ರ ಅವರ ಫೋನ್ನ ಲೊಕೇಶನ್ ಮತ್ತು ಕಾರು ಪತ್ತೆಯಾಗಿಲ್ಲ. ಆತಂಕದಿಂದ ಚಂದ್ರು ಅವರನ್ನು ಕುಟುಂಬ ಸದಸ್ಯರು ಹುಡುಕಲು ಆರಂಭಿಸಿ, ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದರು. ಕರೆ ವಿವರ ನೋಡಿದಾಗ ಕಿರಣ್ ನಂಬರ್ ಪತ್ತೆಯಾಗಿತ್ತು. ಅವರು ನಾವಿಬ್ಬರೂ ಗೌರಿಗದ್ದೆಗೆ ಹೋಗಿದ್ದು ನಿಜ ಎಂದು ಒಪ್ಪಿಕೊಂಡಿದ್ದರು. ಇದೀಗ ಕಿರಣ್ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಂದ್ರಶೇಖರ್ರ ಮೃತದೇಹ ಸಿಕ್ಕ ಸ್ಥಳಕ್ಕೆ ಇಂದು ಬೆಳಗ್ಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಅ.30ರ ರಾತ್ರಿ 11.58ಕ್ಕೆ ನ್ಯಾಮತಿ ಬಳಿ ಚಂದ್ರು ಕಾರು ಇರುವುದು ಪತ್ತೆಯಾಗಿತ್ತು. ಕಾರು 100 ಕಿಲೋ ಮೀಟರ್ ವೇಗದಲ್ಲಿತ್ತು. ಕಾರಿನ ವಿಡಿಯೋ ನ್ಯಾಮತಿ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಪ್ರಕಾರ ಕಾರು 100 ಕಿಲೋ ಮೀಟರ್ ವೇಗದಲ್ಲಿತ್ತು ಎಂಬುದು ದೃಢವಾಗಿದೆ. ಅ.30 ರಾತ್ರಿ 11.58ಕ್ಕೆ ಪೆಟ್ರೋಲ್ ಬಂಕ್ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ ಎಂದರು.
ರಾತ್ರಿ 12.06ಕ್ಕೆ ಚಂದ್ರಶೇಖರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಮೃತದೇಹ ಸಿಕ್ಕ ಸ್ಥಳಕ್ಕೂ ನ್ಯಾಮತಿಗೂ 10 ಕಿಲೋ ಮೀಟರ್ ಅಂತರವಿದೆ. ಕಾಲ್ ಹಿಸ್ಟರಿ, ಸಿಡಿಆರ್ ಎಲ್ಲವೂ ತನಿಖೆ ಆಗುತ್ತಿದ್ದು, ಇದರೊಂದಿಗೆ ಡಯಾಟಮ್ ಟೆಸ್ಟ್ ಸಹ ನಡೆಸುತಿದ್ದೇವೆ ಎಂದರು.
ಪ್ರಕರಣ ತನಿಖಾ ಹಂತದಲ್ಲಿದೆ. ಹಾಗಾಗಿ ಬಹಿರಂಗವಾಗಿ ಏನೂ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ವರದಿಯನ್ನು ಆದಷ್ಟು ಬೇಗ ಕೊಡುವಂತೆ ಕೇಳಿದ್ದೇವೆ. ನಾವು ಸಾಕ್ಷ್ಯಾಧಾರ ಸಂಗ್ರಹಿಸುತ್ತಿದ್ದೇವೆ, ಅದಕ್ಕೆ ತಜ್ಞರಿದ್ದಾರೆ. ಅವರಿದ್ದಾಗ ನಾವು ಮಾತಾಡಬಾರದು. ಚಂದ್ರಶೇಖರ್ರ ತಂದೆ ದೂರು ಕೊಟ್ಟಿದ್ದಾರೆ ಎಂದರು.
ದಾವಣಗೆರೆ ಎಸ್ಪಿ ರಿಷ್ಯಂತ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಸ್ಥಳಕ್ಕೆ ಹುಬ್ಬಳ್ಳಿ ಮತ್ತು ದಾವಣಗೆರೆಯ ಎಫ್ಎಸ್ಎಲ್ ತಂಡ ಭೇಟಿ ನೀಡಿ ಫಿಸಿಕಲ್ ಎವಿಡೆನ್ಸ್ ಸಂಗ್ರಹಿಸುತ್ತಿದ್ದಾರೆ. ನಿನ್ನೆ ರಾತ್ರಿ ಮರಣೋತ್ತರ ಪರೀಕ್ಷೆ ಆಗಿದೆ. ಎರಡ್ಮೂರು ದಿನದಲ್ಲಿ ವರದಿ ಸಿಗಲಿದೆ. ದೂರು ದಾಖಲು ಆದ ತಕ್ಷಣ ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಸುತ್ತ ಹುಡುಕಾಟ ನಡೆಸಿದ್ದೇವೆ ಎಂದರು.



