ದಾವಣಗೆರೆ: ನಾಲ್ಕು ದಿನಗಳು ಕಳೆದರೂ ಪತ್ತೆಯಾಗದ ನನ್ನ ತಮ್ಮನ ಮಗನನ್ನು ಸಂಚು ರೂಪಿಸಿ ಅಪಹರಿಸಲಾಗಿದೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಆರೋಪಿಸಿದರು.
ಕೆಲ ದಿನಗಳಿಂದ ನನ್ನ ತಮ್ಮನ ಮಗ ಚಂದ್ರಶೇಖರ್ ನನ್ನು ಹಿಂಬಾಲಿಸುತ್ತಿದ್ದು ಸಂಚು ರೂಪಿಸಿ ಕಳೆದ ಅ.30ರಂದು ಅಪಹರಿಸಲಾಗಿದೆ.ಯಾವ ದುರುದ್ದೇಶದಿಂದ ಅಪಹರಣ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವರು ಉದ್ದೇಶ ಪೂರ್ವಕವಾಗಿಯೇ ಇಂತಹ ಕೃತ್ಯ ಮಾಡಿದ್ದಾರೆ ಎಂದು ದೂರಿದರು.
ಕ್ಷೇತ್ರದ ಜನರು ದೇವರನ್ನು ಕೇಳಿಸುವುದು, ದೇವರಿಗೆ ಪೂಜೆ ಮಾಡುವುದನ್ನೆಲ್ಲ ಮಾಡುತ್ತಿದ್ದಾರೆ. ಆದರೂ ಇಷ್ಟು ದಿನವಾದರೂ ಚಂದ್ರಶೇಖರ್ ಸುಳಿವು ಸಿಗದೇ ಇರುವುದು ಒಂದು ಕಡೆ ಅನುಮಾನ ಬರುತ್ತಿದೆ. ಆದರೆ ಪೊಲೀಸರ ತನಿಖೆ ಬಗ್ಗೆ ನಾನು ಆರೋಪ ಮಾಡುತ್ತಿಲ್ಲ ಎಂದು ಹೇಳಿದರು.
ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ಕಳೆದ 4 ದಿನಗಳಿಂದ ನಾಪತ್ತೆಯಾಗಿರುವುದು ಈಗಾಗಲೇ ಭಾರೀ ಅನುಮಾನ ಹುಟ್ಟಿಸಿದೆ. ಚಂದ್ರಶೇಖರ್ ಕಾರು ಅ.30ರ ರಾತ್ರಿ ಶಿವಮೊಗ್ಗ ಮೂಲಕ ಹೊನ್ನಾಳಿ ಕಡೆ ಬಂದಿತ್ತು. ಆದರೆ ಕಾರು ಹೊನ್ನಾಳಿ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿ ವಿಶೇಷ ತಂಡ ರಚಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




