ಬೆಂಗಳೂರು: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಮೊದಲ ಆರೋಪಿ ಪ್ರಾಧ್ಯಾಪಕರಾಗಿದ್ದ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ ಮಠದ ಹುದ್ದೆಗಳ ನೇಮಕಾತಿಗೆ ಕೆಲವರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದಕ್ಕೆ ಬ್ಲಾಕ್ ಮೇಲ್ ಸಂಚು ರೂಪಿಸಿದ್ದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಮೃತ್ಯುಂಜಯ ಸ್ವಾಮೀಜಿ ಸಮಯ ಕಾದು ಬಸವಲಿಂಗ ಸ್ವಾಮೀಜಿಯನ್ನು ಮಟ್ಟ ಹಾಕಲು ಸಂಚು ಮಾಡಿ ಹನಿಟ್ರ್ಯಾಪ್ ಬಲೆಗೆ ಕೆವಡಿ ಬಸವಲಿಂಗ ಸ್ವಾಮೀಜಿಯವರನ್ನು ತಮಗೆ ಬೇಕಾದಂತೆ ಬಾಗಿಸಲು ಬಳಸಿಕೊಂಡಿದ್ದು ಆತ್ಮಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ತನ್ನ ಬಳಿ ಇನ್ನೊಂದು ಸಿಡಿ ಎಂದು ಹೇಳಿಕೊಂಡಿದ್ದ ಪ್ರಕರಣದ ಮತ್ತೋರ್ವ ಆರೋಪಿ ಮಹದೇವಯ್ಯ, ‘ಕೇಳಿದಷ್ಟು ಹಣ ನೀಡದಿದ್ದರೆ ತಮ್ಮ ಬಳಿ ಇರುವ ವಿಡಿಯೋ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಷ್ಟೊಂದು ಮೊತ್ತದ ಹಣ ಹೊಂದಿಸಲು ಸಾಧ್ಯವಾಗದೆ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಪೊಲೀಸರು ಅನುಮಾನ ವ್ತಕ್ತಪಡಿಸಿದ್ದಾರೆ.
ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಡಾ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಹಾಗೂ ಮಹದೇವಯ್ಯ ಅವರನ್ನು ಪೊಲೀಸರು ಮಾಗಡಿ ಎಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿಗಳನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೋರಿದರು.
ಹನಿಟ್ರ್ಯಾಪ್ ಸಂಚು ರೂಪಿಸಿದ ಮುಖ್ಯ ಆರೋಪಿ ಕಣ್ಣೂರು ಮಠದ ಡಾ ಮೃತ್ಯುಂಜಯ ಸ್ವಾಮೀಜಿ, ನಿವೃತ್ತ ಶಿಕ್ಷಕ ಹಾಗೂ ವಕೀಲ ಮಹದೇವಯ್ಯ, ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಯುವತಿ ದೊಡ್ಡಬಳ್ಳಾಪುರದ ನೀಲಾಂಬಿಕೆ (ಚಂದು) ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಲು ರಾಮನಗರ ಪೊಲೀಸರು ನಿರ್ಧರಿಸಿದ್ದಾರೆ. ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲು ನ್ಯಾಯಾಧೀಶರಿಗೆ ಪೊಲೀಸರು ಮನವಿ ಮಾಡಲಿದ್ದಾರೆ.
ಸದ್ಯಕ್ಕೆ ಈ ಮೂವರೂ ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಮೃತ್ಯುಂಜಯ ಸ್ವಾಮೀಜಿ ಹಾಗೂ ಮಹದೇವಯ್ಯ ಅವರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಲಾಗಿದೆ. ನೀಲಾಂಬಿಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ನ್ಯಾಯಾಲಯ ಈ ಆರೋಪಿಗಳನ್ನು ಪೊಲೀಸರ ವಶಕ್ಕೆ ಕೊಟ್ಟು, ಪೊಲೀಸ್ ವಿಚಾರಣೆ ಮುಂದುವರಿದರೆ ಮತ್ತಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ನಡೆಯುತ್ತಿರುವಾಗ ಯಾವ ಕೇಸ್ ಬಗ್ಗೆಯೂ ನಾನು ಮಾತನಾಡುವುದಿಲ್ಲ. ತನಿಖೆ ಬಗ್ಗೆ ಗೌಪ್ಯತೆ ಏನೂ ಇಲ್ಲ ಎಂದರು.
ಈ ನಡುವೆ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಆರೋಪಿ ನೀಲಾಂಬಿಕೆ ಮತ್ತು ಇತರರು ಇನ್ನಷ್ಟು ಸನ್ಯಾಸಿಗಳನ್ನು ಇದೇ ರೀತಿ ಹನಿಟ್ರ್ಯಾಪ್ ಬಲೆಗೆ ಕೆಡವಿರುವ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ನೀಲಾಂಬಿಕೆ ಹಲವು ಸ್ವಾಮೀಜಿಗಳ ಜೊತೆ ಅನ್ಯೋನ್ಯವಾಗಿದ್ದರು. ದೊಡ್ಡಬಳ್ಳಾಪುರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ ನೀಲಾಂಬಿಕೆ, ಚಿಕ್ಕವಯಸ್ಸಿನಿಂದಲೂ ಸಿದ್ದಗಂಗಾ ಮಠದ ಜೊತೆ ಒಡನಾಟ ಇಟ್ಟುಕೊಂಡಿದ್ದರು. ಸಿದ್ದಗಂಗಾ ಮಠಕ್ಕೆ ಬರುವ ಹಲವು ಸ್ವಾಮೀಜಿಗಳನ್ನ ಪರಿಚಯ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
ನೀಲಾಂಬಿಕೆಯ ಮಾವ ಸಿದ್ದಗಂಗಾ ಮಠದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮಠಕ್ಕೆ ಹೋಗಿ-ಬಂದು ಮಾಡುವುದು ಸುಲಭವಾಗಿತ್ತು. ತನ್ನೊಂದಿಗೆ ಸಲುಗೆಯಿಂದ ಇದ್ದ ಮತ್ತಷ್ಟು ಸ್ವಾಮೀಜಿಗಳ ವಿಡಿಯೊ ಮಾಡಿ ಕಣ್ಣೂರು ಶ್ರೀಗಳಿಗೆ ಈಕೆ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ.
ಇದೇ ಮಾದರಿಯ ವಿಡಿಯೊಗಳನ್ನು ಇಟ್ಟುಕೊಂಡು ಇನ್ನಷ್ಟು ಸ್ವಾಮಿಗಳನ್ನು ಈ ತಂಡ ಬ್ಲ್ಯಾಕ್ಮೇಲ್ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ ಎನ್ನಲಾಗಿದೆ.




