ದೆಹಲಿ: ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭೆ ಸದಸ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಳೆದ 21 ವರ್ಷಗಳ ನಂತರ ಗಾಂಧಿ ಕುಟುಂಬದವರನ್ನು ಹೊರತುಪಡಿಸಿದ ಹೊಸಬರು ಅಧ್ಯಕ್ಷ ಹುದ್ದೆಗೇರಿದಂತಾಗಿದೆ. ಕರ್ನಾಟಕದ ( ಎಸ್.ನಿಜಲಿಂಗಪ್ಪ ) ಎರಡನೇ ಮತ್ತು ದಲಿತ ಸಮುದಾಯದ ಎರಡನೇ (ಡಾ.ಬಾಬು ಜಗಜೀವನ್ ರಾಂ) ಎಐಸಿಸಿ ಅಧ್ಯಕ್ಷ ಹುದ್ದೆಗೆ ಏರಿದ ಶ್ರೇಯಸ್ಸನ್ನು ಅವರು ಪಡೆದಿದ್ದಾರೆ.

ಎರಡು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದರು. 7897 ಮತ್ತು ಶಶಿ ತರೂರ್ 1072 ಮತಗಳನ್ನು ಪಡೆದರು.
ನಿರ್ಗಮಿತ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಖರ್ಗೆಯಬರ ದೆಹಲಿಯ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಖುದ್ದಾಗಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಖರ್ಗೆಯವರ ಪತ್ನಿ ರಾಧಾಬಾಯಿ, ಪುತ್ರ ಪ್ರಿಯಾಂಕ್ ಖರ್ಗೆ ಮತ್ತು ಪ್ರಿಯಾಂಕಾ ಗಾಂಧಿ ಇದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಸಚಿನ್ ಪೈಲಟ್, ಮಲ್ಲಿಕಾರ್ಜುನ ಖರ್ಗೆಯವರು ದೊಡ್ಡ ಅಂತರದಿಂದ ಗೆದ್ದಿದ್ದಾರೆ; ಇದು ಪ್ರಜಾಪ್ರಭುತ್ವದ ಗೆಲುವು. ನಾನು ಅವರನ್ನು ಅಭಿನಂದಿಸಿದ್ದೇನೆ. ನನಗೆ ಅವರ ಅಪಾರ ಅನುಭವದಲ್ಲಿ ನಂಬಿಕೆ ಇದೆ. 9,000 ಪ್ರತಿನಿಧಿಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸಿದ್ದರು. ಇಂತಹ ಘಟನೆ ಯಾವುದೇ ಪಕ್ಷದಲ್ಲಿ ನಡೆದಿಲ್ಲ. ವಿರೋಧಿ ಪಕ್ಷಗಳು ಒತ್ತಡಕ್ಕೆ ಸಿಲುಕಿವೆ ಎಂದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಅನೇಕ ವರ್ಷಗಳ ನಂತರ ಎಐಸಿಸಿ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದು ಮಲ್ಲಿಕಾರ್ಜುನ ಖರ್ಗೆಯವರು ಭಾರೀ ಅಂತರದಿಂದ ಜಯಗಳಿಸಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ಮುನ್ನಡೆಯಲಿದೆ. ದೇಶದ ಫ್ಯಾಸಿಸ್ಟ್ ಮನಸ್ಥಿತಿಯನ್ನು ದೂರವಾಗಿಸಲಿದೆ ಎಂದರು.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೆಮ್ಮೆಪಡಬೇಕಾದ ಕ್ಷಣ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಶಕ್ಇಯುತವಾಗಲಿದೆ. ಮತ್ತು ಅವರ ನೇತೃತ್ವದಲ್ಲಿ ನಮ್ಮ ಪಕ್ಷ ಒಗ್ಗೂಡಲಿದೆ ಎಂದರು.
ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಖರ್ಗೆಯವರಿಗೆ ಅಭಿನಂದನೆ ಸಲ್ಲಿಸಿದ್ದು, ಮಲ್ಲಿಕಾರ್ಜುನ ಖರ್ಗೆಯವರೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಭಾರತದ ಪ್ರಜಾಪ್ರಭುತ್ವದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತಾರೆ. ಖರ್ಗೆಯವರ ಅಪಾರ ಅನುಭವ ಮತ್ತು ಸೈದ್ಧಾಂತಿಕ ಬದ್ಧತೆ ಪಕ್ಷದ ಸೇವೆಗೆ ಬಳಕೆಯಾಗಲಿದೆ ಎಂದಿದ್ದಾರೆ.




