ದಲಿತರ ಸಾಧನೆ ಮಾಧ್ಯಮಗಳಲ್ಲಿ ವರದಿಯಾಗದು ಏಕೆ?

4 years ago

ದಲಿತರ ಮನೆಯಲ್ಲಿ ತಿಂಡಿ ತಿಂದದ್ದನ್ನು ಮುಖಪುಟದಲ್ಲಿ ಸುದ್ದಿ ಮಾಡುವ ಜಾತಿವಾದಿ ಮಾಧ್ಯಮಗಳು ಅದೇ ದಲಿತರ ಮನೆಯ ಮಗಳು ಅಶ್ವಿನಿ.ಕೆ.ಪಿ ರವರು “ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ” ಗೆ ಸದಸ್ಯೆಯಾಗಿ ಆಯ್ಕೆಯಾಗಿರುವುದನ್ನು ಪ್ರಕಟ ಮಾಡಲು ಹಿಂಜರಿಯುತ್ತವೆ.

UNHRC. “United nations human rights council” ಗೆ ಸದಸ್ಯರಾಗಿ ಆಯ್ಕೆಯಾದ ಭಾರತದ ಮೊದಲ ಪ್ರಜೆ ಸಹೋದರಿ ಅಶ್ವಿನಿ.ಕೆ.ಪಿ ರವರು. ಇದು ಯಾವುದೇ Main stream ಮೀಡಿಯಾದಲ್ಲಿ ಪ್ರಕಟವಾಗಲಿಲ್ಲ. ಪ್ರಜಾವಾಣಿಯಂತಹ ಸೆಕ್ಯುಲರ್ ಪತ್ರಿಕೆ ಕೂಡ ಅಶ್ವಿನಿ.ಕೆ.ಪಿ Ashwini K P ರವರ ಈ ಸಾಧನೆಯನ್ನು ಪ್ರಕಟಿಸುವ ಆಸಕ್ತಿ ತೋರಲಿಲ್ಲ. ಪ್ರಕಟ ಮಾಡಿದರೂ ಒಂದು ಸಣ್ಣ ಮೂಲೆಯಲ್ಲಿ ವಿಷಯವನ್ನು ಕಾಟಾಚಾರಕ್ಕೆ ಹಾಕಿದಂತೆ ಹಾಕಲಾಗಿದೆ.. ಮೌಂಟ್ ಕಾರ್ಮೆಲ್ ನಲ್ಲಿ ಪದವೀ ಪಡೆದು, ಸೇಂಟ್ ಜೋಸೆಫ್ ನಲ್ಲಿ ಮಾಸ್ಟರ್ಸ್ ಮಾಡಿ, JNU ನಲ್ಲಿ Master of philosophy ಮತ್ತು South Asian studies ವಿಷಯವನ್ನು ಆಯ್ದುಕೊಂಡು ದಲಿತ ಮಾನವ ಹಕ್ಕುಗಳ ಮೇಲೆ PHD ಯನ್ನು ಪಡೆದಿದ್ದಾರೆ. ಮಾನವ ಹಕ್ಕುಗಳ ಬಗ್ಗೆ ಸುಮಾರು 150 ದೇಶಗಳಲ್ಲಿ ಕೆಲಸ ಮಾಡುತ್ತಿದ್ದ ‘Amnesty international’ ಸಂಸ್ಥೆಯಲ್ಲಿಯೂ ತಮ್ಮ ಸೇವೆ ಸಲ್ಲಿಸಿರುತ್ತಾರೆ. ಇವೆಲ್ಲದರ ಆಧಾರದ ಮೇಲೆ ಪ್ರಪಂಚದ ಒಟ್ಟು 12 ಜನರನ್ನು Shortlist ಮಾಡಲಾಗಿತ್ತು ಅದರಲ್ಲಿ ಭಾರತದಿಂದ ಸ್ವತಂತ್ರ ಪ್ರಜೆಯಾಗಿ ಹಾಗೂ UNHRC ಗೆ ಭಾರತದಿಂದ ಮೊಟ್ಟ ಮೊದಲು ಆಯ್ಕೆಯಾಗಿರುವುದು ಇಡೀ ದೇಶಕ್ಕೆ ಹೆಮ್ಮೆಯ ವಿಷಯ. ಪ್ರಾಯಶಃ ಅಶ್ವಿನಿ.ಕೆ.ಪಿ ರವರು ದಲಿತರಾಗಿರದೆ ಮೇಲ್ವರ್ಗಕ್ಕೆ ಸೇರಿದ ಮಹಿಳೆಯಾಗಿದ್ದಿದ್ದರೆ ನಮ್ಮ ಜಾತಿವಾದಿ/ಮನುವಾದಿ ಮಾಧ್ಯಮಗಳು 24 ಗಂಟೆಗಳ ಕಾಲ ಸುದ್ದಿ ಮಾಡುತ್ತಿದ್ದರು. ಯಶ್ ಹೆಂಡತಿ ಗರ್ಭಿಣಿ ಆದ ವಿಷಯ, ಮೋದಿ ಎನ್ ತಿಂಡಿ ತಿಂದ್ರು ಎನ್ನುವ ವಿಷಯ, ಇನ್ಯಾರದ್ದೋ ವೈಯಕ್ತಿಕ ವಿಷಯಗಳನ್ನು ವಿನಾಕಾರಣ ಚಿತ್ರಿಸುವ/ಪ್ರಕಟಿಸುವ ಈ ಮಾಧ್ಯಮಗಳು ಇಡೀ ಭಾರತವೇ ಹೆಮ್ಮೆ ಪಡಬೇಕಾದ ಇಂಥಹ ವಿಷಯವನ್ನು ಗಣನೆಗೆ ತೆಗೆದುಕೊಳ್ಳದಿರುವುದು ವಿಪರ್ಯಾಸ..

ಭಾರತದ ಬಹುಪಾಲು ಮಾಧ್ಯಮಗಳು ಮನುವಾದಿಗಳ ಕೈಯಲ್ಲಿರುವಾಗ ಇದನ್ನೆಲ್ಲ ನಿರೀಕ್ಷೆ ಮಾಡುವುದೇ ತಪ್ಪು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಹೋದರಿ ಅಶ್ವಿನಿ ರವರು ಆಯ್ಕೆಯಾಗಿರುವುದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಎನ್ನುವುದನ್ನೂ ಗಮನದಲ್ಲಿಟ್ಟುಕೊಂಡು, ಈ ದೇಶದಲ್ಲಿ ಪರಿಶಿಷ್ಟ ಜಾತಿಗಳನ್ನು/ಪಂಗಡವನ್ನು/ಆದಿವಾಸಿಗಳನ್ನು/ಅಲೆಮಾರಿಗಳನ್ನು ಮಾನವ ಹಕ್ಕುಗಳಿಂದ ವಂಚಿತರನ್ನಾಗಿಸಿ ಅವರು ಮನುಷ್ಯರೇ ಅಲ್ಲ, ಅವರು ಇರುವುದೇ ಸೇವೆ ಮಾಡೋಕೆ, ಜೀತ ಮಾಡೋಕೆ ಎನ್ನುವ ಅಲಿಖಿತ ನಿಯಮವನ್ನು ಸಾವಿರಾರು ವರ್ಷಗಳಿಂದ ಜಾರಿಗೊಳಿಸಿದ್ದ ಮನುಸ್ಮೃತಿಯ ಆರಾಧಕರೇ ಇಂದು ಇಡೀ ದೇಶದ ಅಧಿಕಾರ ವರ್ಗವಾಗಿ, ಮಾಧ್ಯಮ ವರ್ಗವಾಗಿ, ರಾಜಕೀಯ ರಂಗದಲ್ಲಿ ಚುಕ್ಕಾಣಿ ಹಿಡಿದಿರುವಾಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾದವರ ಬಗ್ಗೆ ಅವರಿಗೆ ಪ್ರೀತಿಯಾದರೂ ಹೇಗೆ ಬರಬೇಕು..

‘ದಲಿತರ ಮನೆಯಲ್ಲಿ ತಿಂಡಿ ತಿಂದ ಮುಖ್ಯಮಂತ್ರಿ’ ಎನ್ನುವ ವಿಷಯವನ್ನು ಮುಖಪುಟದಲ್ಲಿ ಪ್ರಕಟಿಸುವ ಮಾಧ್ಯಮಗಳು ಅದೇ ದಲಿತರ ಮನೆಯ ಮಗಳು ವಿಶ್ವಸಂಸ್ಥೆಗೆ ಆಯ್ಕೆಯಾಗಿರುವುದರ ಬಗ್ಗೆ ಪ್ರಕಟಿಸುವುದಿಲ್ಲ. ಮಾಧ್ಯಮಗಳು ರಾಜಕಾರಣಿಗಳ ದಲ್ಲಾಳಿಗಳಾಗಿರುವ ಕಾಲದಲ್ಲಿ ನಾವುಗಳೇ ಮಾದ್ಯಮಗಳಾಗಿ ಬದಲಾಗಬೇಕಾದ ಅನಿವಾರ್ಯ ಎದುರಾಗಿದೆ.. ಅದಕ್ಕಾಗಿಯೇ ನಮ್ಮ ಸಹೋದರಿಗೆ ಅಭಿನಂದನೆಗಳನ್ನು ಸಲ್ಲಿಸಲು ನಿನ್ನೆ ಸಾಯಂಕಾಲ ನಾವು ಈ ದೇಶದ ನಿಜವಾದ ಮೂಲನಿವಾಸಿಗಳು, ಅಂಬೇಡ್ಕರ್ ವಾದಿಗಳು, ಬುದ್ಧ ಬಸವಣ್ಣನವರ ಮಾರ್ಗವನ್ನು ಅನುಸರಿಸುವವರು ಸಹೋದರಿ ಅಶ್ವಿನಿ.ಕೆ.ಪಿ ಅವರ ಮನೆಗೆ ಭೇಟಿ ಕೊಟ್ಟು ಸುಮಾರು ಎರಡು ಮೂರು ಗಂಟೆಗಳ ಕಾಲ ಗಹನವಾದ ಚರ್ಚೆ ಮಾಡಿ, ಸಹೋದರಿ ಅಶ್ವಿನಿ ರವರ ಈ ಸಾಧನೆಗೆ ಕಾರಣರಾದ ಅವರ ತಂದೆ ಪ್ರಸನ್ನ ಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸಿ ಬಂದೆವು..

ವೇದ,ಉಪನಿಷದ್, ರಾಮ,ಕೃಷ್ಣರ ಕಾಲದಲ್ಲಿ ಸ್ವತಃ ಬ್ರಾಹ್ಮಣರ ಮನೆಯ ಹೆಣ್ಣುಮಕ್ಕಳಿಗೂ ಶಿಕ್ಷಣ ಕಲಿಯುವ ಹಕ್ಕು ಇರಲಿಲ್ಲ, ಸಾಮಾಜಿಕ ಸ್ವಾತಂತ್ರ್ಯ ಇರಲಿಲ್ಲ. ಹೆಣ್ಣು ಇರುವುದೇ ಮಕ್ಕಳನ್ನು ಹಡೆಯುವುದಕ್ಕೆ, ಗಂಡನ ಚಾಕರಿ ಮಾಡುವುದಕ್ಕೆ ಎನ್ನುವ ಕಾಲವಿತ್ತು. ನಮ್ಮ ಮೂಲನಿವಾಸಿ ತಾಯಂದಿರು, ಅಕ್ಕಂದಿರನ್ನು ದೇವದಾಸಿಯರನ್ನಾಗಿಸಿ ಗ್ರಾಮದ ಜಮೀನ್ದಾರರು ಮೇಲ್ವರ್ಗದವರು ಅಧಿಕೃತ ಸೂಳೆಯ ಪಟ್ಟ ಕಟ್ಟಿ ಅವರನ್ನು ಭೋಗದ ವಸ್ತುವನ್ನಾಗಿಸಿದ್ದರು. ಗಂಡ ಸತ್ತರೆ ಚಿತೆಗೆ ಆಹುತಿಯಾಗಿ ಸಾಯಬೇಕು ಎನ್ನುವ ಸತಿಸಹಗಮನ ಪದ್ದತಿ ಜಾರಿಯಲ್ಲಿತ್ತು. ಹೆಣ್ಣುಮಕ್ಕಳು ಸ್ತನಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ತೆರಿಗೆ ಕಟ್ಟಬೇಕಿತ್ತು. ಅದೆಷ್ಟೋ ಅತ್ಯಾಚಾರಗಳು, ಅದೆಷ್ಟೋ ಕೊಲೆಗಳು ಲೆಕ್ಕವೇ ಇಲ್ಲ, ಪ್ರಶ್ನಿಸುವ ಧ್ವನಿಯೂ ಇರಲಿಲ್ಲ. ಆ ಕಾಲದಲ್ಲಿ ಯಾವ ದೇವರುಗಳು ನಮ್ಮ ತಾಯಂದಿರು/ಅಕ್ಕಂದಿರ ರಕ್ಷಣೆಗೆ ಧಾವಿಸಲಿಲ್ಲ..

ನಮಗೆ ಶಿಕ್ಷಣ,ಸ್ವಾತಂತ್ರ್ಯ,ಸಮಾನತೆಯನ್ನ ಕೊಟ್ಟಿದ್ದು ಬಾಬಾ ಸಾಹೇಬರು ಬರೆದ ಸಂವಿಧಾನ. ಎಲ್ಲಾ ಬಗೆಯ ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದು ಸಂವಿಧಾನ. ನಮಗೆ ಭೂಮಿಯನ್ನು ಕೊಟ್ಟಿದ್ದು, ಉದ್ಯೋಗವನ್ನು ಕೊಟ್ಟಿದ್ದು, ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಿದ್ದು ಸಂವಿಧಾನ. ಇವತ್ತು ಅದೇ ಬಾಬಾ ಸಾಹೇಬರ ಕುಡಿಯೊಂದು ತನ್ನ ಜೀವನದಲ್ಲಿ ಬಂದ ಎಲ್ಲಾ ಅಡೆತಡೆಗಳನ್ನು, ಅವಮಾನಗಳನ್ನು, ಅಸಹಿಷ್ಣುತೆಯನ್ನು ಮೆಟ್ಟಿ ಸಾಧನೆಯನ್ನು ಮಾಡಿದ್ದಾರೆ. ಬಾಬಾ ಸಾಹೇಬರು ಬಯಸಿದ್ದು ಇದನ್ನೇ. ಕಠಿಣ ಪರಿಶ್ರಮ, ಒಳ್ಳೆಯ ಶಿಕ್ಷಣ, ಒಳ್ಳೆಯ ಓದು, ಸಂವಿಧಾನದ ಅರಿವು ಇದ್ದಾಗ ಮಾತ್ರ ಇಂತಹ ಸಾಧನೆ ಮಾಡಲು ಸಾಧ್ಯ. ಚರ್ಚು, ಮಸೀದಿ, ಮಂದಿರಗಳನ್ನೇ ಗಿರಕಿ ಹೊಡೆಯುತ್ತಾ ಮೌಢ್ಯದ ನೆರಳಿನಿಂದ ಆಚೆ ಬಂದಾಗ ಮಾತ್ರ ನಾವುಗಳು ಹೊರಜಗತ್ತಿಗೆ ತೆರೆದುಕೊಳ್ಳುತ್ತೇವೆ..
ಜೈ ಭೀಮ್..

– ರುದ್ರು ಪುನೀತ್ .ಆರ್.ಸಿ., ಸಾಮಾಜಿಕ ಹೋರಾಟಗಾರರು

Leave a Reply