Remembering Eleanor Zelliot on her birth anniversary 💙
ಇಂದು ಚಿಂತಕಿ, ಶ್ರೇಷ್ಠ ಅಂಬೇಡ್ಕರ್ ಸ್ಕಾಲರ್ಗಳಲ್ಲಿ ಮೊದಲಿಗರಾದ ಎಲಿನಾರ್ ಝೆಲಿಯಟ್(1926-2016) ಅವರ ಜನ್ಮದಿನ.
ಪಶ್ಚಿಮದಿಂದ ತಮ್ಮ ಉನ್ನತ ಅಧ್ಯಯನಕ್ಕೆಂದು ಭಾರತಕ್ಕೆ ಬಂದು ಈ ದೇಶದ ದಲಿತರ ವಿಮೋಚನೆಗಾಗಿ ಅಂಬೇಡ್ಕರ್ ಅವರು ನಡೆಸಿದ ಹೋರಾಟದಿಂದ ಪ್ರೇರೇಪಣೆ ಪಡೆದು ಅಂಬೇಡ್ಕರ್ ಅವರ ಆಶಯಗಳನ್ನು ವಿಸ್ತರಿಸುವುದಕ್ಕಾಗಿ ಮತ್ತು ಆ ಮೂಲಕ ಜಾತಿವಿನಾಶದ ಚಳುವಳಿಯನ್ನು ಮುನ್ನೆಲೆಗೆ ತರುವುದಕ್ಕಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟವರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಝೆಲಿಯೆಟ್.
ಅಂಬೇಡ್ಕರ್ ಅವರು ತೀರಿಕೊಂಡ ನಂತರ 1960ರ ದಶಕದಲ್ಲಿ ಭಾರತಕ್ಕೆ ಬಂದ ಝೆಲಿಯೆಟ್ ಅಂಬೇಡ್ಕರ್ ಮತ್ತು ತಳಸಮುದಾಯಗಳ ಹೋರಾಟದ ಬಗ್ಗೆ ಅಧ್ಯಯನ ಶುರುಮಾಡಿದರು. ಅರವತ್ತರ ದಶಕದಲ್ಲಿ ಅಂಬೇಡ್ಕರ್ರ ಕುರಿತು ಭಾರತದ ಅಕಡೆಮಿಕ್ ವಲಯಕ್ಕೆ ತೀರ ಅಸಡ್ಡೆ ಇದ್ದ ಕಾಲ. ಅಂಬೇಡ್ಕರ್ ಅವರ ಹೋರಾಟದ ಬಗ್ಗೆಯಾಗಲೀ, ಅಂಬೇಡ್ಕರ್ ಅವರ ಬರಹಗಳಾಗಲೀ ಸಿಗದಿದ್ದ ಕಾಲ. ಆದರೆ ಅಂಬೇಡ್ಕರ್ ಅವರ ಮಹತ್ವವನ್ನು ಅರಿತಿದ್ದ ಝೆಲಿಯೆಟ್ ಅಕಡೆಮಿಕ್ ವಲಯದ ಮೌನವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮೌಖಿಕ ಇತಿಹಾಸದ ಮೊರೆಹೋದರು. ಬಾಬಾಸಾಹೇಬರ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದವರು, ಅಂಬೇಡ್ಕರ್ ಅವರ ಒಡನಾಡಿಗಳಾಗಿದ್ದವರು ದಾಖಲಿಸಿದ್ದನ್ನ ಅಧ್ಯಯನ ಮಾಡಿದರು. ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಪ್ರವಾಸ ಮಾಡುವುದರ ಮೂಲಕ ಅಂಬೇಡ್ಕರ್ ಕುರಿತು ವ್ಯಾಪಕ ಕ್ಷೇತ್ರಕಾರ್ಯ ಮಾಡಿದರು. ದಲಿತ ಸಮುದಾಯದ ಅಕ್ಷರ ತಿಳಿಯದ ಜನ ಅಂಬೇಡ್ಕರ್ ಮತ್ತು ಜಾತಿಪದ್ಧತಿಯ ವಿರುದ್ಧ ಕಟ್ಟಿದ ಹಾಡುಗಳು, ಲಾವಣಿಗಳು, ಕಥೆಗಳನ್ನು ತಮ್ಮ ಅಧ್ಯಯನಕ್ಕೆ ಆಕರಗಳನ್ನಾಗಿ ಬಳಸಿಕೊಂಡರು. 1969 ರಲ್ಲಿ ‘Ambedkar and Mahar Movement’ ಹೆಸರಿನಲ್ಲಿ ಇವರು ತಮ್ಮ ಪ್ರೌಢ ಪ್ರಬಂಧವನ್ನು ಸಲ್ಲಿಸಿದರು. ಅಂಬೇಡ್ಕರ್ ಅವರ ಬದುಕು ಮತ್ತು ಹೋರಾಟದ ಬಗ್ಗೆ ಅಕಡೆಮಿಕ್ ಆಗಿ ಸಂಶೋಧನೆ ನಡೆಸಿ ಇಂಗ್ಲೀಷಿನಲ್ಲಿ ಪಿಎಚ್ಡಿ ಪಡೆದ ಜಗತ್ತಿನ ಮೊಟ್ಟ ಮೊದಲ ವಿದ್ವಾಂಸರಾದರು. ಭಾರತದ ಜಾತಿಗ್ರಸ್ತ ಅಕಡೆಮಿಕ್ ವಲಯದ ನೀಚತನದಿಂದಾಗಿ ಎಪ್ಪತ್ತರ ದಶಕದಲ್ಲಿ ಈ ಪುಸ್ತಕ ಪ್ರಕಟವಾಗಲು ಸಾಧ್ಯವಾಗಿರಲಿಲ್ಲ. ದಶಕಗಳ ನಂತರ ಈ ಕೃತಿ ‘Ambedkar’ World: The Making of Babasaheb and the Dalit Movement’ ಹೆಸರಿನಲ್ಲಿ ಪ್ರಕಟವಾಯಿತು. ಬಾಬಾಸಾಹೇಬರ ಬದುಕು ಮತ್ತು ಜಾತಿವಿನಾಶದ ಹೋರಾಟದ ಬಗ್ಗೆ ಪ್ರಕಟವಾದ ಮೊದಲ ಮಹತ್ವದ ಅಧ್ಯಯನ ಕೃತಿಯಾಗಿ ಇವತ್ತು ಮನ್ನಣೆ ಪಡೆದಿದೆ.
ಝೆಲಿಯೆಟ್ ಕೇವಲ ಅಂಬೇಡ್ಕರ್ ಅವರ ಕುರಿತ ಅಧ್ಯಯನಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಅಸ್ಪೃಶ್ಯ ಸಮುದಾಯಗಳಿಂದ ಬಂದ ಭಕ್ತಿ ಪಂಥದ ಸಂತರು, ಕವಿಗಳು ಹೇಗೆ ಜಾತಿವಿನಾಶದ ಕುರಿತು ಚಿಂತಿಸಿದ್ದರು ಎನ್ನುವುದನ್ನು ಅಧ್ಯಯನ ಮಾಡಿ ಮುನ್ನಲೆಗೆ ತಂದರು. ದಲಿತ ಸಾಹಿತ್ಯವನ್ನು ಇಂಗ್ಲೀಷಿಗೆ ಅನುವಾದ ಮಾಡಿದರು ಆ ಮೂಲಕ ದಲಿತ ಸಾಹಿತ್ಯ ಮತ್ತು ದಲಿತ ಅಧ್ಯಯನವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು ಜಾಗತಿಕ ಮಟ್ಟದಲ್ಲಿ ಅಧ್ಯಯನ ಮತ್ತು ಚರ್ಚೆಯ ಭಾಗವಾಗಿಸಿದರು.
ತಮ್ಮ ಬದುಕಿನುದ್ದಕ್ಕೂ ದಲಿತ ಚಳುವಳಿ ಮತ್ತು ಅಂಬೇಡ್ಕರ್ ಚಿಂತನೆಯ ಬಗ್ಗೆ ನೂರಾರು ಲೇಖನಗಳನ್ನು, ಭಾಷಣಗಳನ್ನು ಮಾಡಿದ ಝೆಲಿಯಟ್ ಅವರ ಕೆಲವು ಆಯ್ದ ಲೇಖನಗಳು ‘From Untouchable to Dalit: Essays on the Ambedkar Movement’ ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ಅಂಬೇಡ್ಕರ್ ಅವರ ಚಿಂತನೆ ಮತ್ತು ಜಾತಿ ವಿನಾಶದ ಚಳುವಳಿಯ ಕುರಿತು ಅಧ್ಯಯನಕ್ಕೆ ಅಪಾರವಾದ ಒಳನೋಟಗಳನ್ನು ಝೆಲಿಯೆಟ್ ತಮ್ಮ ಈ ಲೇಖನಗಳಲ್ಲಿ ಕೊಟ್ಟಿದ್ದಾರೆ. ದಲಿತ ಅಧ್ಯಯನದ ಕುರಿತ ಅವರ ನೂರಾರು ಲೇಖನಗಳು ಇನ್ನೂ ಪುಸ್ತಕರೂಪದಲ್ಲಿ ಪ್ರಕಟವಾಗಿಲ್ಲ. ತಮ್ಮ ಬದುಕಿನುದ್ದಕ್ಕೂ ಭಾರತದ ದಲಿತರು ಮತ್ತು ದಲಿತ ಚಳುವಳಿಯ ಬೆಳವಣಿಗೆಗಳ ಬಗ್ಗೆ ಅಪಾರ ಕುತೂಹಲ ಹೊಂದಿದ್ದ ಝೆಲಿಯಟ್ ಭಾರತದ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಅಂಬೇಡ್ಕರ್ ಕುರಿತು ಅಧ್ಯಯನ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ಪಶ್ಚಿಮದ ಅನೇಕ ವಿಧ್ಯಾರ್ಥಿಗಳನ್ನು ಭಾರತದ ಬಗ್ಗೆ, ಅಂಬೇಡ್ಕರ್ ಮತ್ತು ದಲಿತ ಚಳುವಳಿಯ ಬಗ್ಗೆ ಅಧ್ಯಯನ ಮಾಡಲು ಪ್ರೇರೆಪಿಸಿದರು. ಭಾರತದ ತಳಸಮುದಾಯಗಳ ಹೋರಾಟದ ಬಗ್ಗೆ ಝೆಲಿಯೆಟ್ರಿಂದ ಪ್ರೇರೆಪಿತರಾಗಿ ಭಾರತಕ್ಕೆ ಬಂದ ಇವರ ವಿದ್ಯಾರ್ಥಿಗಳಲ್ಲಿ ಒಬ್ಬರು ‘ನಮ್ಮ ಹೆಮ್ಮೆ’ಯ ಚಿಂತಕಿ ಗೇಲ್ ಓಮ್ವೆಟ್ ಅವರು.
ಅಂಬೇಡ್ಕರ್ ಮತ್ತು ದಲಿತ ಚಿಂತನೆಯನ್ನು ಮಹತ್ವ ಏನು? ಯಾಕೆ ದಲಿತ ಅಧ್ಯಯನ ಜಗತ್ತಿನ ವಿಮೋಚನಾ ಚಳುವಳಿಗಳ ಅಧ್ಯಯನಕಾರರಿಗೆ ಮುಖ್ಯ? ಎನ್ನುವುದನ್ನು ತೋರಿಸಿಕೊಟ್ಟವರು ಝೆಲಿಯೆಟ್. ಜೊತೆಗೆ ಅಂಬೇಡ್ಕರ್ ಮತ್ತು ದಲಿತ ಚಳುವಳಿಯನ್ನು ಹೇಗೆ ಓದಬೇಕು ಮತ್ತು ಬರೆಯಬೇಕು ಎನ್ನುವುದನ್ನು ಕಲಿಸಿಕೊಟ್ಟ ಅಂಬೇಡ್ಕರ್ ಸ್ಕಾಲರಶಿಪ್ನ ಮಹಾಗುರು ಈ ಎಲಿನಾರ್ ಝೆಲಿಯಟ್ ಭಾರತದ ದಲಿತ ಅಧ್ಯಯನದ ದೊಡ್ಡಮ್ಮ(ಭಾರತದ ಕಿರಿಯ ವಿದ್ಯಾರ್ಥಿಗಳಿಂದ ಹೀಗೆ ಕರೆಸಿಕೊಳ್ಳುವುದು ಝೆಲಿಯೆಟ್ಗೆ ತುಂಬಾ ಇಷ್ಟದ ಸಂಗತಿ ಆಗಿತ್ತು)
ಈ ಹೆಮ್ಮೆಯ ತಾಯಿಗೆ ಜೈ ಭೀಮ್ 💙
~ ವಿ.ಎಲ್. ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು



