ದಿನಭತ್ಯೆ 45 ರೂಪಾಯಿ ಇರಬೇಕೋ ಇಲ್ಲವೇ 40 ರೂಪಾಯಿ ಇರಬೇಕೋ?
ಮದ್ರಾಸ್ ಪ್ರಾಂತ್ಯದಿಂದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದ ಶ್ರೀ ಮುನಿಸ್ವಾಮಿ ಪಿಳ್ಳೈ ಅವರು ಜನ ಪ್ರತಿನಿಧಿಗಳು ಮತ್ತು ಸಂವಿಧಾನ ರಚನಾಸಭೆಯ ಸದಸ್ಯರ ದಿನದ ಭತ್ಯೆಗೆ ಸಂಬಂಧಿಸಿದಂತೆ ತಿದ್ದುಪಡಿಯನ್ನು ಮಂಡಿಸುತ್ತಾರೆ.
“ಇಂದಿನ ಹಣಕಾಸು ಮುಗ್ಗಟ್ಟಿನ ಸ್ಥಿತಿಯಲ್ಲಿ ಸರ್ಕಾರಕ್ಕೆ ಸಹಾಯ ಮಾಡಬೇಕೆಂದು ಇಡೀ ದೇಶದಲ್ಲಿ ಕೂಗೆದ್ದಿದೆ. ಈ ಹಿನ್ನಲೆಯಲ್ಲಿ ಜನರ ಕಾಳಜಿಗೆ ಪೂರಕವಾಗಿ ನಾನು ಪ್ರತಿದಿನ 45 ರೂಪಾಯಿಗಳ ಭತ್ಯೆಯನ್ನು ಪಡೆಯುತ್ತಿರುವ ನಮ್ಮ ಸದಸ್ಯರು ತಮ್ಮ ಭತ್ಯೆಯಲ್ಲಿ 11% ಬಿಟ್ಟರೆ ಅದು 40 ರೂಪಾಯಿ ಆಗುತ್ತದೆ. ಬಹುಶಃ ಇದು ಚಿಕ್ಕತ್ಯಾಗ ಅನಿಸಿದರೂ ಕೂಡಾ ಇದು ದೇಶದ ಜನರಿಗೆ ಮಾದರಿ ಎನಿಸುವ ನಡೆಯಾಗಬಲ್ಲದು ಎಂದು ಹೇಳುತ್ತಾರೆ.
ಆಗ ಬೇರಾರ್ ಪ್ರಾಂತ್ಯದ ಪ್ರತಿನಿಧಿಯಾಗಿದ್ದ ಎಚ್ ಜೆ ಖಾಂಡೇಕರ್ ಅವರು ಮಾತನಾಡುತ್ತಾ
“ಮಾನ್ಯರೇ ನಮ್ಮ ದೇಶವು ಸ್ವತಂತ್ರವಾಗಲು ನಾವು ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದಾಗ ನಾವೆಲ್ಲರೂ ಅಂದರೆ ಲಕ್ಷಾಂತರ ದೇಶ ಬಾಂಧವರು ಸಾಧ್ಯವಿದ್ದ ಎಲ್ಲಾ ತ್ಯಾಗಗಳನ್ನೂ ಮಾಡಿದ್ದೇವೆ. ಆದರೆ ಇದೀಗ ಎಲ್ಲರಲ್ಲೂ ಹಣದ ಅಭಿಲಾಷೆಯು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.
ನಮಗೆ ಸ್ವಾತಂತ್ರ್ಯ ಸಿಕ್ಕಿದೆ ನಿಜ, ಆದರೆ ದೇಶದ ಭದ್ರತೆ ಮತ್ತು ಉತ್ತಮ ಭವಿಷ್ಯದ ದೃಷ್ಟಿಯಿಂದ ನಾವು ಮತ್ತಷ್ಟು ಕಾಲ ತ್ಯಾಗ ಮಾಡದೇ ಹೋದರೆ ನಮ್ಮ ಸ್ವಾತಂತ್ರ್ಯವು ಅಲ್ಪಾಯುವಾಗಿ ಪರಿಣಮಿಸುತ್ತದೆ ಎಂಬ ಭಯ ನನಗಿದೆ. ಸರ್ಕಾರದ ಹಣಕಾಸು ಸ್ಥಿತಿ ದಿನದಿಂದ ದಿನಕ್ಕೆ ಕೈಕೊಡುತ್ತಿರುವ ಕಾರಣ ನಾವೆಲ್ಲರೂ ಅಂದರೆ ಈ ಸಂವಿಧಾನ ರಚನಾ ಸಭೆಯ ಸದಸ್ಯರೆಲ್ಲರೂ ಕೂಡಾ ಕೇವಲ 20 ರೂಪಾಯಿಗಳಷ್ಟು ದಿನಭತ್ಯೆಯನ್ನು ತೆಗೆದುಕೊಳ್ಳಬೇಕು ಎಂದು ನಾನು ಸಲಹೆ ನೀಡುತ್ತೇನೆ ಎನ್ನುತ್ತಾರೆ.
ಬಹುಶಃ ಭಾರತದ ನೈಜ ಸ್ವಾತಂತ್ರ್ಯ ಹೋರಾಟದ ಮನಸ್ಸುಗಳಾಗಿದ್ದ ಅವರಲ್ಲಿದ್ದ ದೇಶದ ಬಗೆಗಿನ ಕಾಳಜಿ ಎಷ್ಟಿತ್ತು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.
– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ




