ಭೂ ರಹಿತ ರೈತರು, ದಲಿತರು ಹಾಗೂ ಅಲೆಮಾರಿ ಸಮುದಾಯದವರಿಗೆ ಇಲ್ಲದ ತುಂಡುಭೂಮಿ
RSS ಪ್ರೇರಿತ ಸಂಸ್ಥೆಗಳಿಗೆ ಬೇಕಾಬಿಟ್ಟಿಯಾಗಿ ಭೂಮಿ ಹಂಚಿಕೆ: ಡಾ.ಎಚ್.ಸಿ.ಮಹದೇವಪ್ಪ
ಮೈಸೂರು: ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣದ ನಂತರದಲ್ಲಿ ಇಲ್ಲಿ ಆಡಳಿತ ನಡೆಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು “ಉಳುವವನೇ ಭೂಮಿ ಒಡೆಯ” ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿ ಭೂಮಿಯೇ ಇಲ್ಲದೇ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಭೂಮಿಯನ್ನು ನೀಡುವ ಕೆಲಸ ಮಾಡಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.
ರಾಜ್ಯ ಸರ್ಕಾರ ಸಂಘಪರಿವಾರದ ಬೆಂಬಲಿಗರು ಅಥವಾ ಮನಸ್ಥಿತಿ ಇರುವ ವ್ಯಕ್ತಿ, ಸಂಘಸಂಸ್ಥೆಗಳಿಗೆ ಇತ್ತೀಚಿನ ದಿನಗಳಲ್ಲಿ ಭೂಮಿಯನ್ನು ಹಂಚಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಮಹದೇವಪ್ಪ, ಈ (ಭೂಮಿ ಹಂಚಿಕೆಯ) ಕೆಲಸ ಪರಿಣಾಮವೇ ಭಾರತದಲ್ಲಿ ಕ್ರಮೇಣ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ರೈತರ ಸ್ವಾವಲಂಬನೆಯ ಬದುಕೂ ಕೂಡಾ ಸಾಧ್ಯವಾಗಿದೆ ಎಂಬುದು ಭೂಮಿಯನ್ನು ಪಡೆದು ಬದುಕುತ್ತಿರುವ ಬಹಳಷ್ಟು ಜನರಿಗೆ ತಿಳಿದಿರುವ ಸಂಗತಿ ಎಂದಿದ್ದಾರೆ.
ಆದರೆ ಇದೀಗ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗರು ಕೋಟಿಗಟ್ಟಲೇ ಬೆಲೆ ಬಾಳುವ ಸರ್ಕಾರಿ ಜಮೀನು, ಗೋಮಾಳ ಇತ್ಯಾದಿಗಳನ್ನು RSS ಪ್ರೇರಿತ ವಿವಿಧ ಸಂಘ ಸಂಸ್ಥೆಗಳಿಗೆ ನಿರಂತರವಾಗಿ ನೀಡುತ್ತಿದ್ದು ಅವುಗಳ ಜಿಲ್ಲಾವಾರು ಶಾಖೆಗಳ ಮೂಲ ಸೌಕರ್ಯ ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದ್ದು ಇದೀಗ ತಮಿಳು ನಾಡಿನಲ್ಲಿ ನೂರಾರು ಎಕರೆಯಲ್ಲಿ ಇಶಾ ಎಂಬ ಧಾರ್ಮಿಕ ಕೇಂದ್ರವನ್ನು ಹೊಂದಿರುವ ಸದ್ಗುರು ಹೆಸರಿನ ವ್ಯಕ್ತಿಗೂ ಕೂಡಾ ದೇವನಹಳ್ಳಿ ಸಮೀಪ ಹತ್ತಾರು ಎಕರೆ ಭೂಮಿಯನ್ನು ನೀಡಿರುವ ಬಗ್ಗೆ ಮಾಹಿತಿ ಇದೆ ಎಂದಿದ್ದಾರೆ.
ಭೂ ರಹಿತ ರೈತರು, ದಲಿತರು ಹಾಗೂ ಅಲೆಮಾರಿ ಸಮುದಾಯದ ಎಷ್ಟೋ ಮಂದಿ ತುಂಡು ಭೂಮಿಗಾಗಿ ಅರ್ಜಿ ಸಲ್ಲಿಸಿ ಇನ್ನೂ ಕಾಯುತ್ತಾ ಇದ್ದರೂ ಕೂಡಾ ಅವರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದೇ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟು ಕೈಚೆಲ್ಲಿರುವ ಸರ್ಕಾರ RSS ಪ್ರೇರಿತ ಸಂಸ್ಥೆಗಳಿಗೆ ಮಾತ್ರ ಬೇಕಾಬಿಟ್ಟಿಯಾಗಿ ಭೂಮಿಯನ್ನು ಹಂಚಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇನ್ನು ಅರಣ್ಯ ಹಾಗೂ ಮಣ್ಣು ರಕ್ಷಣೆಯ ಅಭಿಯಾನ ಮಾಡುವ ಸದ್ಗುರು ಎಂಬ ಹೆಸರಿನ ಈತ ಅದೇ ಭೂಮಿಯನ್ನು ಪಡೆದುಕೊಂಡಿರುವುದು ಹಾಸ್ಯಾಸ್ಪದ ಸಂಗತಿ ಆಗಿದೆ ಎಂದಿದ್ದಾರೆ.
ಬಾಬಾ ಸಾಹೇಬರು ಹೇಳಿದಂತೆ ಸರ್ಕಾರದ ಜಮೀನು ಆದಷ್ಟು ಸರ್ಕಾರದ ಬಳಿಯೇ ಇದ್ದಾಗ ಮಾತ್ರ ಸರ್ಕಾರವೂ ಸುಭದ್ರವಾಗಿರುತ್ತದೆ ಮತ್ತು ಅದರಿಂದ ಬಡವರಿಗೂ ಸಹಾಯ ಮಾಡಲು ಸಾಧ್ಯವಾಗುತ್ತದೆ! ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




