ಬೆಂಗಳೂರು: ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕುರಿತ ಡೈಡ್ಯಾಕ್ಟಿಕ್ ಶೃಂಗಸಭೆಯು ತನ್ನ ವರದಿಯನ್ನು ‘ಬೆಂಗಳೂರು ಘೋಷಣ’ ಎನ್ನುವ ಹೆಸರಿನಲ್ಲಿ ಹೊರತರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂಡಿಯಾ ಡೈಡ್ಯಾಕ್ಟಿಕ್ ಅಸೋಸಿಯೇಷನ್ ಇಲ್ಲಿ ಆಯೋಜಿಸಿರುವ ಮೂರು ದಿನಗಳ ಏಷ್ಯಾ ಮಟ್ಟದ ಶೃಂಗಸಭೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಈ ಸಮಾವೇಶ ನಡೆಯುತ್ತಿದೆ. ಶೃಂಗಸಭೆಯು ಮುಂದಿನ ಪೀಳಿಗೆಗಳಿಗೆ ಪರಿಹಾರ ಒದಗಿಸುವ ವೇದಿಕೆ ಆಗಬೇಕು. ಇವುಗಳನ್ನು ಜಾರಿಗೊಳಿಸಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಅವರು ಭರವಸೆ ನೀಡಿದರು.
ಶಿಕ್ಷಣ ನೀತಿ, ಕಲಿಸುವ ವಿಧಾನ ಈಗ ಆಮೂಲಾಗ್ರ ಬದಲಾಗಿದೆ. ಬದಲಾವಣೆಯು ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸುವಂತಿರಬೇಕು. ಶೈಕ್ಷಣಿಕ ವ್ಯವಸ್ಥೆ ಸಹಜ ಕಲಿಕೆಗೆ ಪೂರಕವಾಗಿರಬೇಕು. ನೂತನ ತಂತ್ರಜ್ಞಾನಗಳ ರಚನಾತ್ಮಕ ಬಳಕೆಯ ವಿಧಾನಗಳನ್ನು ರೂಪಿಸಿಕೊಳ್ಳಬೇಕು. ಪ್ರತಿ ದಿನ ಹೊಸ ಆಪ್ ಗಳು ಬರುತ್ತಿದ್ದರೂ ಪರಿಣಾಮಕಾರಿಯಾಗಿಲ್ಲ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಾತನಾಡಿ, ವಿಶ್ವಸಂಸ್ಥೆ ಹೇಳಿರುವ ಸಮಾನ ಮತ್ತು ಸುಸ್ಥಿರ ಬೆಳವಣಿಗೆಯ ಗುರಿ ಸಾಧಿಸಬೇಕು ಎಂದರೆ ಗುಣಮಟ್ಟದ ಶಿಕ್ಷಣವೊಂದೇ ಅಸ್ತ್ರ. ವ್ಯವಸ್ಥೆಯ ಸಂಕೀರ್ಣತೆಯು ಅನೇಕ ಸಮಸ್ಯೆಗಳನ್ನು ಸೃಷ್ಟಿಸಿದೆ. ಇದನ್ನು ಬಗೆಹರಿಸಲು ರಾಜ್ಯದಲ್ಲಿ ಪ ಮೋದಿ ಮತ್ತು ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಉನ್ನತ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತರಲಾಗುತ್ತಿದೆ ಎಂದರು.
ತಂತ್ರಜ್ಞಾನ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯ ಎಂದೂ ಹಿಂದುಳಿದಿಲ್ಲ. ಎನ್ಇಪಿ ಜಾರಿ ಮತ್ತು ಕೌಶಲ್ಯಾಭಿವೃದ್ಧಿ ಕಲಿಕೆಯಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ. ಶಿಕ್ಷಣದಲ್ಲಿ ಯುವಜನರ ಭವಿಷ್ಯದ ಜತೆಗೆ ಸಾಮುದಾಯಿಕ ಹಿತವನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬ್ರೆಜಿಲ್ ಸಹಾಯಕ ಉನ್ನತ ಶಿಕ್ಷಣ ಸಚಿವ ಎಡ್ವರ್ಡೋ ಗೇಮ್ಸ್ ಸಾಲ್ವೆಡೋ, ಸೌದಿ ಅರೇಬಿಯಾದ ಶಿಕ್ಷಣ ಮಹಾನಿರ್ದೇಶಕ ಡಾ.ಅಬ್ದುರ್ ರೆಹಮಾನ್ ಅಲಾಸ್ಮಿ, ವರ್ಲ್ಡ್ ಎಜುಕೇಶನ್ ಫೋರಂನ ನಿರ್ದೇಶಕ ಡಾಮಿನಿಕ್ ಸ್ಯಾವೇಜ್, ಕಾರ್ಯಕ್ರಮ ನಿರ್ದೇಶಕ ಗ್ಯಾವಿನ್ ಡೈಕ್ಸ್ ಸೇರಿದಂತೆ 15 ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಉಪಸ್ಥಿತರಿದ್ದರು.



