ಬೆಂಗಳೂರು: 2018 ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದ್ದರೂ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರ ರಚನೆಗೊಂಡಿತು. ಅಧಿಕಾರ ಲಾಲಸೆಗೆ ಬಿದ್ದ ಬಿಜೆಪಿ, ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರ ಕುದುರೆ ವ್ಯಾಪಾರ ಮಾಡಿ, ಹಣ-ಅಧಿಕಾರದ ಆಮಿಷದಿಂದ ಖರೀದಿಸಿದ ಶಾಸಕರನ್ನು ಮುಂಬೈನ ಐಷಾರಾಮಿ ಹೋಟೆಲ್ ನಲ್ಲಿ ಸಕಲ ಸೌಕರ್ಯವನ್ನು ನೀಡಿ ಕೂಡಿಹಾಕಿತು. ಬಳಿಕ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿತು ಎಂದು ಕೆಪಿಸಿಸಿ ಹೇಳಿದೆ.
ಬಿಜೆಪಿ ಶಾಸಕಾಂಗ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ತಮಗೆ ಸಚಿವ ಸ್ಥಾನ ನೀಡದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು ಎಂಬ ವರದಿಗಳ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಡಿರುವ ಮಾತುಗಳ ವಿಡಿಯೋ ಒಂದನ್ನು ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಪಿಸಿಸಿ, ಇದು ಬಿಜೆಪಿಯ ವ್ಯವಸ್ಥಿತ ಪಿತೂರಿ, ಆಪರೇಷನ್ ಕಮಲದ ಹೆಸರಿನಲ್ಲಿ ದೊಡ್ಡ ಪ್ರಮಾಣದ ಮನಿ ಲಾಂಡ್ರಿಂಗ್ ನಡೆದಿದೆ, ಇದಕ್ಕಾಗಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲಾಗಿದೆ, ಹಣ-ಅಧಿಕಾರದ ಆಮಿಷವೊಡ್ಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಪಕ್ಷ ನಿರಂತರವಾಗಿ ವಾದಿಸುತ್ತಲೇ ಬಂದಿತ್ತು. ಇದಕ್ಕೆ ಸಾಕಷ್ಟು ಪುರಾವೆಗಳನ್ನು ನೀಡಿತ್ತು. ಆದರೆ ಬಿಜೆಪಿ ಮಾತ್ರ ಇದೆಲ್ಲವನ್ನೂ ನಿರಾಕರಿಸುತ್ತಲೇ ಬಂದಿದೆ. “ಬಿಜೆಪಿಯನ್ನು ನಂಬಬೇಡಿ, ನಿಮಗೆ ದ್ರೋಹ ಮಾಡುತ್ತದೆ, ನಿಮ್ಮ ರಾಜಕೀಯ ಜೀವನವೇ ಇದರಿಂದ ಹಾಳಾಗುತ್ತದೆ” ಎಂದು ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರಿಗೂ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಇದನ್ನು ಅವರಾರು ಕೇಳಿಸಿಕೊಳ್ಳದ ಸ್ಥಿತಿಗೆ ಬಿಜೆಪಿ ತಂದಿತ್ತು ಎಂದಿದೆ.
ಆದರೆ ಈಗ ಆ ಆರೋಪಗಳಿಗೆ ಬಿಜೆಪಿಯಿಂದಲೇ ಪುರಾವೆ ದೊರೆತಿದೆ. ಆಪರೇಷನ್ ಕಮಲದ ಸಂತ್ರಸ್ತರು ಸತ್ಯ ಬಾಯಿ ಬಿಟ್ಟಿದ್ದಾರೆ. 17 ಜನ ಬಾಂಬೆ ಬಾಯ್ಸ್ ಗಳಲ್ಲಿ ಕೆಲವರಿಗೆ ಅನ್ಯಾಯವಾಗಿದೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಹೆಚ್. ವಿಶ್ವನಾಥ್ ಒಂದೆಡೆ ಹೇಳಿದ್ದರೆ, ಮತ್ತೊಂದೆಡೆ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್, “ನಿಮ್ಮನ್ನು ನಂಬಿದಕ್ಕೆ ನಾನು ಬೀದಿಗೆ ಬರುವಂತಾಯಿತು, ಇನ್ನೆಂದೂ ಜೀವನದಲ್ಲಿ ಬಿಜೆಪಿಯನ್ನು ನಂಬುವುದಿಲ್ಲ. ನಂಬಲು ಕೂಡ ಇದು ಅನರ್ಹ ಪಕ್ಷ” ಎಂದು ತಮ್ಮ ಸಿಟ್ಟು ಕಾರಿಕೊಂಡಿದ್ದಾರೆ ಎಂದಿದೆ.
ಬಿಜೆಪಿಗೆ ಜನರು ಆಶೀರ್ವಾದ ಮಾಡಿರಲಿಲ್ಲ, ಬಹುಮತ ಪಡೆದು ಅದು ಅಧಿಕಾರಕ್ಕೆ ಬಂದಿಲ್ಲ. ಅಕ್ರಮ ಹಣದ ಮೂಲಕ ಶಾಸಕರನ್ನು ಖರೀದಿಸಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ. ಹೀಗೆ ಹಣ ಕೊಟ್ಟು ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದ ಸರ್ಕಾರ ಖರ್ಚು ಮಾಡಿದ ದುಪ್ಪಟ್ಟು ಹಣವನ್ನು ಮರಳಿ ಗಳಿಸುವುದಷ್ಟೇ ಅವರ ಉದ್ದೇಶ ಆಗಿರುತ್ತದೆಯೇ ಹೊರತು, ಜನರ ಪರವಾಗಿ ಕೆಲಸ ಮಾಡುವುದಲ್ಲ ಎಂದಿದೆ.
ಈ ಕಾರಣಕ್ಕಾಗಿಯೇ ಅಧಿಕಾರದಲ್ಲಿ ಇರುವಷ್ಟು ವರ್ಷಗಳ ಕಾಲ 40%, 50%, 100% ಕಮಿಷನ್ ದಂಧೆ, ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ, ಕೊರೊನ ಹೆಣದ ಮೇಲೆ ಹಣ ಮಾಡುವಂತ ಅಕ್ರಮ ಕೆಲಸಗಳನ್ನಷ್ಟೇ ಮಾಡುತ್ತಾ ಬಂದಿದೆ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗದಂತಹ ವಿಚಾರಗಳು ಚರ್ಚೆ ಬರದಿರಲಿ ಎಂಬ ಕಾರಣಕ್ಕೆ ಹಿಜಾಬ್, ಸಾವರ್ಕರ್, ಮತಾಂತರ ನಿಷೇಧದಂತಹ ಭಾವನಾತ್ಮಕ ವಿಚಾರಗಳನ್ನು ಜನರ ನಡುವೆ ಎಳೆದು ತರುತ್ತಿದೆ. 3 ವರ್ಷಗಳಲ್ಲಿ ಈ ಅಕ್ರಮ ಸರ್ಕಾರ ಭ್ರಷ್ಟಾಚಾರ ಮಾಡಿದ್ದು, ಕೋಮು ಗಲಭೆಗಳನ್ನು ಮಾಡಿಸಿದ್ದನ್ನು ಬಿಟ್ಟರೆ ಒಂದೇ ಒಂದು ಜನಪರವಾದ ಕೆಲಸವನ್ನು ಮಾಡಿಲ್ಲ ಎಂದಿದೆ.
ಇಂತಹ ನೀಚ, ಜನ ವಿರೋಧಿ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಅಕ್ರಮ ಸರ್ಕಾರಕ್ಕೆ ಒಂದೇ ಒಂದು ನಿಮಿಷವೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಕೂಡಲೇ ರಾಜ್ಯಪಾಲರು ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದಿದೆ.




