ಇಂದಿರಾ ನಕಲಿ ಗಾಂಧಿಯೇ? ಬಿಜೆಪಿ, ಆರ್.ಎಸ್.ಎಸ್. ಹೇಳುವುದರಲ್ಲಿ ಸತ್ಯವೆಷ್ಟು?

5 years ago

“ಕೋವಿಡ್‌ ಸಂಕಷ್ಟದ ನಡುವೆಯೂ ಕಾಂಗ್ರೆಸ್ ಪಕ್ಷದ‌ ಭಾಗವಾಗಿರುವ ಶಿವಸೇನೆಯ ಸಂಜಯ್‌ ರಾವತ್ ಅವರು‌ ಕನ್ನಡಿಗರಿಗೆ ಮುಂಬೈಯಲ್ಲಿ ವ್ಯವಹಾರ ನಡೆಸಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ತಾವೇ ಕನ್ನಡ ನಾಡಿಗಾಗಿ ಶ್ರಮಿಸುತ್ತಿರುವವರು ಎಂದು ಬಿಂಬಿಸಿಕೊಳ್ಳುವ @INCKarnataka ಪಕ್ಷದ ನಾಯಕರು ಇದಕ್ಕೆ ಸಮ್ಮತಿಸುತ್ತಾರೆಯೇ?” ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.

ಶಿವಸೇನೆಯ ಸಂಜಯ್‌ ರಾವತ್ ಅವರು‌ ಕನ್ನಡಿಗರಿಗೆ ಮುಂಬೈಯಲ್ಲಿ ವ್ಯವಹಾರ ನಡೆಸಲು ಬಿಡುವುದಿಲ್ಲ ಎಂಬ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, “ಮೈತ್ರಿಯ ಭಾಗವಾಗಿರುವ ಶಿವಸೇನೆಯ ಸಖ್ಯವನ್ನು ತೊರೆಯಲು @siddaramaiah & @DKShivakumar ಅವರು @INCIndia  ನಾಯಕರಿಗೆ ಒತ್ತಾಯಿಸುವ ಧೈರ್ಯ ತೋರಬಹುದೇ? ಕನ್ನಡಗಿರಿಗೆ ಅವಮಾನ ಮಾಡುತ್ತಿರುವ ಶಿವಸೇನೆಯ ಮೈತ್ರಿಯಿಂದ ಹೊರಬರುವಿರಾ ಅಥವಾ ದೆಹಲಿಯ ನಕಲಿ ಗಾಂಧಿ ಕುಟುಂಬದಿಂದ ಬರುವ ಆದೇಶದಂತೆ ಶಿವಸೇನೆಯ ಮುಂದೆ ತಲೆತಗ್ಗಿಸಿ ನಿಲ್ಲುವಿರಾ!?” ಎಂದು ತಮ್ಮ ಎಂದಿನ ಹಳೆ ಚಾಳಿಯನ್ನೇ ಬಿಜೆಪಿ ಮುಂದುವರೆಸಿದ್ದು, ನಕಲಿ ಗಾಂಧಿ ವಿಚಾರವನ್ನು ಪ್ರಸ್ತಾಪಿಸಿದೆ.

“ನಕಲಿ ಗಾಂಧಿ” ಎಂಬ ಬಿಜೆಪಿಯ ವಾದ ಹಳೆಯದು. ಜವಾಹರ್ ಲಾಲ್ ನೆಹರು ಅವರ ಕುಟುಂಬದ ಹೆಸರು ಇಂದಿರಾ ಗಾಂಧಿಯವರಿಗೆ ಬರಲಿಲ್ಲ. ಭಾರತದಲ್ಲಿ ಹೆಣ್ಣುಮಕ್ಕಳು ಮದುವೆಯಾದ ನಂತರ ಗಂಡನ ಮನೆಗೆ ಹೋಗುವುದು, ಆ ಕುಟುಂಬದ ಭಾಗವಾಗುವುದು, ಆ ಕುಟುಂಬದ ಹೆಸರನ್ನು ಇಟ್ಟುಕೊಳ್ಳುವುದು ವಾಡಿಕೆ.

ಇಂದಿರಾ ಗಾಂಧಿಯವರು ಪಾರ್ಸಿ ಸಮುದಾಯಕ್ಕೆ ಸೇರಿದ ಫಿರೋಜ್ ಗಾಂಧಿಯವರನ್ನು ವಿವಾಹವಾಗಿದ್ದರು. ಅಂದಿನ ಕಾಲಕ್ಕೆ ಪ್ರಖರ ವಿದ್ವತ್ ಉಳ್ಳ ವ್ಯಕ್ತಿ ಫಿರೋಜ್ ಗಾಂಧಿ. ಅವರು ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ರಾಜಕಾರಣಿ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ಸೆರೆವಾಸವನ್ನು ಕೂಡ ಅನುಭವಿಸಿದವರು. ಸ್ವಾತಂತ್ರ್ಯಾ ನಂತರ ಅವರು ಸಂಸದರಾಗಿ ಆಡಳಿತಾರೂಢ ನೆಹರು ಅವರ ಸರ್ಕಾರದ ವಿರುದ್ಧ ಕೆಂಡದಂತಹ ಭಾಷಣಗಳನ್ನು ಮಾಡುತ್ತಿದ್ದರು. ಜೀವವಿಮಾ ಕಂಪನಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿಷಯವನ್ನು ಆಧರಿಸಿ ಸಚಿವರ ತಲೆದಂಡದವರೆಗೂ ಅವರ ಹೋರಾಟ ಮುಂದುವರೆದಿತ್ತು.

ಇಂತಹ ವಿಶಿಷ್ಟ ವ್ಯಕ್ತಿಯಾಗಿದ್ದ ಫಿರೋಜ್ ಅವರನ್ನು ಇಂದಿರಾ ಪ್ರೇಮವಿವಾಹವಾಗಿದ್ದರು. ಅದರ ಪ್ರಕಾರ, ಫಿರೋಜ್ ಗಾಂಧಿ ಹೆಸರಿನಲ್ಲಿರುವ ಗಾಂಧಿ ಇಂದಿರಾ ಅವರ ಹೆಸರಿನ ಜೊತೆಗೆ ಸೇರಿಕೊಂಡಿದೆ. ಆದರೆ, ಬಿಜೆಪಿ ಮತ್ತು ಸಂಘ ಪರಿವಾರದವರು ಇಂದಿರಾ ಅವರು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಆದ್ದರಿಂದಲೇ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ಓಲೈಸುತ್ತದೆ ಎಂದು ಕತೆಯನ್ನೇ ಕಟ್ಟಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಮತ್ತೊಮ್ಮೆ ನಕಲಿ ಗಾಂಧಿ ವಿಚಾರವನ್ನು ಬಿಜೆಪಿ ಹರಿಬಿಟ್ಟಿದೆ.

ಬಿಜೆಪಿ ಮತ್ತು ಸಂಘಪರಿವಾರದ್ದು ಗೋಬೆಲ್ಸ್ ಥಿಯರಿ. ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ಗೋಬೆಲ್ಸ್ ಒಂದು ಸುಳ್ಳನ್ನು ನಿರಂತರವಾಗಿ ಹೇಳುತ್ತ, ಸುಳ್ಳನ್ನೇ ಸತ್ಯ ಮಾಡುತ್ತಿದ್ದ ತಂತ್ರವನ್ನೇ ಸಂಘಪರಿವಾರ ಕಳೆದ 96 ವರ್ಷಗಳಿಂದ ಅನುಸರಿಸುತ್ತ ಬಂದಿದೆ.

27, ಸೆಪ್ಟಂಬರ್, 1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಯಿತು. ಇದು ಕೂಡ ಭಾರತೀಯ ಸೇವಾದಳದ ನಕಲು. ಎನ್.ಎಸ್.ಹರ್ಡೀಕರ್ ಅವರು ನಾಗಪುರದಲ್ಲಿ 28, ಡಿಸೆಂಬರ್, 1923ರಲ್ಲಿ ಸ್ಥಾಪಿಸಿದ್ದರು. ಭಾರತೀಯ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶಿಸ್ತನ್ನು ಮೂಡಿಸುವುದು ಇದರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಕವಾಯತು, ಕಸರತ್ತು ನಡೆಸುವುದು, ಸ್ವಯಂ ಸೇವೆಯ ಮೂಲಕ ಮಹಾತ್ಮ ಗಾಂಧಿಯವರ ಶ್ರಮದಾನ ಇತ್ಯಾದಿಗಳಿಗೆ ಪೂರಕವಾಗಿ ಸೇವಾದಳ ಕೆಲಸ ನಿರ್ವಹಿಸುತ್ತಿತ್ತು. ಈಗಿನ ಆರ್.ಎಸ್.ಎಸ್. ನ ಚಡ್ಡಿ ಮತ್ತು ಲಾಠಿ ಕೂಡ ಸೇವಾದಳದಿಂದಲೇ ಪಡೆದಿರುವುದು. ಆರಂಭದಲ್ಲಿ ಇದರ ಭಾಗವಾಗಿದ್ದವರು ಆರ್.ಎಸ್.ಎಸ್. ಅನ್ನು ಸ್ಥಾಪಿಸಿದರು.

ಇರಲಿ, ಸಂಘಪರಿವಾರ ಮತ್ತು ಬಿಜೆಪಿ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ತಾವು ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತವೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಅಪಾರ ಗೌರವವಿದೆ. ಇಂದಿರಾ ಗಾಂಧಿಯವರು ವಿವಾಹವಾದ ನಂತರ ಅವರ ಕುಟುಂಬದ ಗಾಂಧಿ ಹೆಸರು ತಮ್ಮ ಹೆಸರಿಗೆ ಸೇರಿಕೊಂಡರೆ ನಕಲಿ ಗಾಂಧಿಗಳು ಹೇಗಾಗುತ್ತಾರೆ? ಎಂಬುದನ್ನು ಇದುವರೆಗೆ ಹೇಳಿಲ್ಲ. ಅದೇ ಹಳೆಯ ಸುಳ್ಳನ್ನೇ ಮತ್ತೆ ಮತ್ತೆ ಹೇಳಿಕೊಂಡು ಜನರಿಗೆ ಮೋಸ ಮಾಡುತ್ತದೆ. ಇಂದಿಗೂ ಸಂಘ ಪರಿವಾರ ಮತ್ತು ಬಿಜೆಪಿಗರ ಆಪ್ತ ಚಟುವಟಿಕೆಗಳಲ್ಲಿ ಫಿರೋಜ್ ಗಾಂಧಿಯವರನ್ನು ಮುಸ್ಲಿಂ ಎಂದೇ ಹೇಳಲಾಗುತ್ತದೆ. ಆಮೂಲಕ ಓದು, ತಿಳಿವಳಿಕೆ ಇಲ್ಲದ ಯುವ ಜನಾಂಗವನ್ನು ದಿಕ್ಕುತಪ್ಪಿಸಿ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತದೆ.

ಹಾಗೆ ನೋಡಿದರೆ, ವಾಸ್ತವದಲ್ಲಿ ಸಂಘಪರಿವಾರ, ಬಿಜೆಪಿಗರೇ ನಕಲಿ ಹಿಂದೂಗಳು. ಭಾರತದಲ್ಲಿರುವ ಸಾಮರಸ್ಯವನ್ನು ಹಾಳುಮಾಡಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸವನ್ನು ಇವುಗಳು ನಿರಂತರವಾಗಿ ಮಾಡುತ್ತಿವೆ. ಜೊತೆಗೆ, ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳನ್ನು ಹೇಳುತ್ತಿವೆ. ದೇಶದಲ್ಲಿರುವ ಸೌಹಾರ್ದತೆ, ಭಾವೈಕ್ಯತೆಯನ್ನು ಕದಡುವವರು, ದ್ವೇಷ ಬಿತ್ತುವವರು ದೇಶಪ್ರೇಮಿಗಳಾಗಲು ಸಾಧ್ಯವೇ? ಇವರು ಅಧಿಕಾರಕ್ಕಾಗಿ ದ್ವೇಷಬಿತ್ತುವ ನಕಲಿ ಹಿಂದೂಗಳು ಮತ್ತು ನಕಲಿ ದೇಶಪ್ರೇಮಿಗಳಲ್ಲವೇ?

2025ಕ್ಕೆ ಆರ್.ಎಸ್.ಎಸ್. ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸುತ್ತದೆ. ಇನ್ನಾದರೂ ಸಂಘಪರಿವಾರ ಮತ್ತು ಬಿಜೆಪಿಗರು ಇಂತಹ ಸುಳ್ಳುಗಳನ್ನು ದೇಶದಲ್ಲಿ ಹಬ್ಬಿಸಿ, ದ್ವೇಷ ಹರಡುವುದನ್ನು ನಿಲ್ಲಿಸಬೇಕಲ್ಲವೇ? ಭಾರತೀಯ ಸಂಸ್ಕೃತಿಯ ಭಾಗವಾಗಿರುವ “ಸತ್ಯಮೇವ ಜಯತೇ” ತತ್ವವನ್ನು ಪಾಲಿಸಬೇಕಲ್ಲವೇ?

  • ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply