ಬ್ಲಾಕ್ಮೇಲ್ ತಂತ್ರಗಳಿಗೆ ಹೆದರುವುದಿಲ್ಲ, ಪ್ರತಿಷ್ಠೆ ಬಿಡಿ

1 day ago

ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಖಡಕ್ ಸಂದೇಶ

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 10 ದಿನಗಳಿಂದ ಹಗಲು-ರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಪಟ್ಟು ಸಡಿಲಿಸಲು ನಿರಾಕರಿಸಿರುವುದಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಇಂತಹ ಬ್ಲಾಕ್ಮೇಲ್ ತಂತ್ರಗಳಿಗೆ ನಾವು ಹೆದರುವುದಿಲ್ಲ; ಸರ್ಕಾರವನ್ನು ಬ್ಲಾಕ್ಮೇಲ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಗುಡುಗಿದ್ದಾರೆ.

ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ. ಅವರು ತಕ್ಷಣವೇ ಹೋರಾಟ ನಿಲ್ಲಿಸಿ ಊರುಗಳಿಗೆ ತೆರಳಬೇಕು. ಆನಂತರ ಅವರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ಲಿಖಿತ ಭರವಸೆ ಅಸಾಧ್ಯ: ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ಭರವಸೆ ಕೊಡಬೇಕು ಎಂಬ ಷರತ್ತನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. 17 ಇಲಾಖೆಗಳಲ್ಲಿ ಇಂತಹ ಬೇಡಿಕೆಗಳಿವೆ, ಎಲ್ಲರಿಗೂ ಲಿಖಿತ ಭರವಸೆ ನೀಡಲು ಸಾಧ್ಯವೇ? ನಾನು ಜಪಾನ್ ಪ್ರವಾಸದಲ್ಲಿದ್ದಾಗಲೂ ವಿಡಿಯೋ ಕಾಲ್ ಮಾಡಿ ಅವರೊಂದಿಗೆ ಮಾತನಾಡಿದ್ದೇನೆ. ಹೆಣ್ಣು ಕುಟುಂಬದ ಕಣ್ಣು ಎಂಬ ಅರಿವು ನನಗಿದೆ. ದಯವಿಟ್ಟು ಪ್ರತಿಷ್ಠೆ ಬಿಡಿ, ಹಠ ಮಾಡಬೇಡಿ. ನನ್ನ ತಾಯಂದಿರು, ಸಹೋದರಿಯರು ನಮ್ಮ ಮೇಲೆ ವಿಶ್ವಾಸವಿಟ್ಟು ಹೋರಾಟ ವಾಪಸ್ ಪಡೆಯಬೇಕು. ಈ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳು, ಸಚಿವ ಸಂಪುಟ ಹಾಗೂ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ನಿಮ್ಮನ್ನು ನೇಮಕ ಮಾಡಿದ ಕೇಂದ್ರ ಸರ್ಕಾರ ಯುಪಿಎ ಅವಧಿಯ ನಂತರ ಗೌರವಧನ ಏರಿಸಿಲ್ಲ. ಅವರ ವಿರುದ್ಧ ಪ್ರತಿಭಟನೆ ಮಾಡದೆ, ನಮ್ಮ ಮೇಲೆ ಮಾತ್ರ ಹೊರೆ ಹಾಕುವುದು ಏಕೆ? ಬಿಜೆಪಿಯವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Leave a Reply