ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ

13 hours ago

ಪ್ರತಾಪ್ ಸಿಂಹ ದಲಿತ ವಿರೋಧಿ: ಕಾಂಗ್ರೆಸ್

ಬೆಂಗಳೂರು: ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ದಲಿತ ಹೋರಾಟಗಾರರನ್ನು  ಅಪಮಾನಿಸಿರುವ ಹಿನ್ನೆಲೆಯಲ್ಲಿ ಹಾಗೂ ಪೊಲೀಸ್ ಅಧಿಕಾರಿಯನ್ನು ಬೆದರಿಸಿರುವ ಪ್ರಕರಣದಲ್ಲಿ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಹಾಗೂ ಕರಾವಳಿ ಭಾಗದ ಸಂಸ್ಕೃತಿಯನ್ನು ಹಾಗೂ  ಅಭಿವೃದ್ಧಿಯನ್ನು ಟೀಕಿಸಿರುವ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಕೂಡಲೇ ಕರಾವಳಿ ಭಾಗದ ಜನರ ಕ್ಷಮೆ ಕೋರಬೇಕೆಂದು ಹಾಗೂ ವಿಶೇಷ ಅಧಿವೇಶನಕ್ಕೆ ಅಡ್ಡಿಪಡಿಸುತ್ತಿರುವ ಆರ್ ಅಶೋಕ್ ವರ್ತನೆಯನ್ನು  ಖಂಡಿಸಿ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಡ್ಡಿಪಡಿಸಲು ಹಾಗೂ ಕೋಮುಗಲಭೆ ಸೃಷ್ಟಿಸಲು ಪ್ರತಾಪ್ ಸಿಂಹ ಹಾಗೂ ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸಹ ದೂರನ್ನು  ಸಲ್ಲಿಸಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಕೋಮುಗಲಭೆ  ಸೃಷ್ಟಿಸುವ ಒಂದು ಅಂಶದ ಕಾರ್ಯಕ್ರಮವನ್ನು ಬಿಜೆಪಿ ಪಕ್ಷ ಹಮ್ಮಿಕೊಂಡಿದೆ. ಇದರ ಉಸ್ತುವಾರಿಯನ್ನ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ವಹಿಸಿಕೊಂಡಿದ್ದಾರೆ. ಈ ಘಟನೆಗೆ ಉತ್ತೇಜನ ನೀಡಿ ಕಾನೂನು ವ್ಯವಸ್ಥೆ ಹದಗೆಡಿಸಿ ಹಾಗೂ ಕೋಮುಗಲಭೆ ಸೃಷ್ಟಿಸಿ ಪೊಲೀಸ್ ಇಲಾಖೆಗೆ ಸವಾಲು ಹಾಕುವ ಮೂಲಕ ರಾಜ್ಯದಲ್ಲಿ ಅಶಾಂತಿಯನ್ನು  ಸೃಷ್ಟಿಸಿ ಕಾನೂನು ವ್ಯವಸ್ಥೆಗೆ  ಧಕ್ಕೆ ತರುತ್ತಿರುವ ಪ್ರತಾಪ್ ಸಿಂಹನ ವಿರುದ್ಧ ಪ್ರಕರಣ ದಾಖಲಾಗಿದ್ದು ಕೂಡಲೇ ಆತನನ್ನು ಬಂಧಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಮಂಗಳೂರು ನಗರದಲ್ಲಿ ನಡೆದ ವಿಶೇಷ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯ ಸರ್ಕಾರ ಕರಾವಳಿ ಭಾಗದ ಅಭಿವೃದ್ಧಿಗೆ ಹಾಗೂ ಮೀನುಗಾರರ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನು ರೂಪಿಸಿದೆ. ಇದರ ಬಗ್ಗೆ ಅಪಹಾಸ್ಯ ಮಾಡಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿಗಳು ಮೀನು ತಿನ್ನಲು ಹೋಗಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಾರೆ. ಮೀನು ತಿನ್ನುವುದು ತಿನ್ನುವವರ ಹಕ್ಕು, ಅದರ ಬಗ್ಗೆ ಅಪಹಾಸ್ಯ ಮಾಡಿ ಮೀನು ಸಾಗಾಣಿಕೆ ವ್ಯಾಪಾರದ ಬಗ್ಗೆ ಟೀಕೆ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.‌ ಜೊತೆಗೆ, ಈ ಕೂಡಲೇ ರಾಜ್ಯದ ಜನರ ಕ್ಷಮೆಯನ್ನು ಆರ್.ಅಶೋಕ್ ಕೇಳಬೇಕು ಎಂದು ಒತ್ತಾಯಿಸಿದರು.

ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಹಾಗೂ ಜನರ ರಕ್ಷಣೆಗೆ ವಿಶೇಷ ಅಧಿವೇಶನ ಕರೆದರೆ ಅಧಿವೇಶವನ್ನು ಪ್ರಶ್ನೆ ಮಾಡುವುದರ ಮೂಲಕ ಕಸ್ತೂರಿ ರಂಗನ್ ವರದಿ ಸಾಧಕಬಾಧಕ ಚರ್ಚೆಗೂ ಸಹ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ. ಇಂತಹ ಶಾಸಕರು ಹಾಗೂ ವಿರೋಧ ಪಕ್ಷದ ನಾಯಕರು ರಾಜ್ಯದ ಅಭಿವೃದ್ಧಿಗೆ ಹಾಗೂ ಜನರ ಒಳಿತಿಗೆ ಮಾರಕವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಹಾರದಲ್ಲಿ ಮಹಿಳೆಯ ವಿರುದ್ಧ ನಡೆದಿರುವ ದೌರ್ಜನ್ಯ ಹಾಗೂ  ಅತ್ಯಾಚಾರದ ಪ್ರಕರಣದಲ್ಲಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿರೋದು ಬಿಜೆಪಿಯ ಕೇಂದ್ರ ಸರ್ಕಾರದ ಮಹಿಳಾ ವಿರೋಧಿ ನೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಬಿಜೆಪಿ ಸರ್ಕಾರದ ದುರಾಡಳಿದಲ್ಲಿ ಇಂದು ಮಹಿಳೆಯರಿಗೆ ಸುರಕ್ಷತೆ ಇಲ್ಲದಾಗಿದೆ. ಕೇವಲ ಪ್ರಚಾರಕ್ಕಾಗಿ ಮಹಿಳೆಯರನ್ನ ರಕ್ಷಿಸುತ್ತೇವೆ ಎಂದು ಹೇಳುತ್ತಾರೆ. ಮೋದಿ ಇಂದು ನಡೆದಿರುವ ಘೋರ ಘಟನೆಗೆ ವಿಷಾದ ವ್ಯಕ್ತಪಡಿಸುವುದಾಗಲಿ ಅಥವಾ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲು ಸಹ ಸೂಚಿಸದೇ ಇರುವುದು ಅತ್ಯಂತ ದುರಂತ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರಾದ ಜಿ.ಪ್ರಕಾಶ್, ಲಕ್ಷ್ಮೀನಾರಾಯಣ್, ಚಂದ್ರಶೇಖರ್ ಪುಟ್ಟರಾಜು,  ರಂಜೀತ್ ಕುಮಾರ್, ಮಾಧವ ಹನೂರು, ಕಿಶೋರ್, ಅಜಯ್ ಶಾಹೀನ್ ಶರೀಫ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply