ಬೆಂಗಳೂರು: ಕಳೆದ ಮೂರು ದಿನಗಳಿಂದ ಸುರಿದ ಅಬ್ಬರದ ಮಳೆಗೆ ಇಡೀ ಬೆಂಗಳೂರು ನಗರದ ರಸ್ತೆಗಳೆಲ್ಲ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ತುಂಬಿದೆ, ಹಲವು ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿದ್ದು ಸಾರ್ವಜನಿಕರು ಪರದಾಡುತ್ತಿದ್ದಾರೆ. ಯಮಸ್ವರೂಪಿ ರಸ್ತೆ ಗುಂಡಿಗಳು ಜನರ ಜೀವ ಹಿಂಡುತ್ತಿವೆ ಎಂದು ಕೆಪಿಸಿಸಿ ಆತಂಕ ವ್ಯಕ್ತಪಡಿಸಿದೆ.
ಈ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ, ಕಳೆದ ಜೂನ್ ತಿಂಗಳಿನಿಂದಲೇ ರಾಜ್ಯದಲ್ಲಿ ಮಳೆ ಆರಂಭವಾಗಿದ್ದರೂ, ರಸ್ತೆ ಗುಂಡಿಗಳು ಹಾಗೂ ಅವು ತಂದೊಡ್ಡುತ್ತಿರುವ ಅಪಾಯಗಳ ಬಗ್ಗೆ ಕಾಂಗ್ರೆಸ್ ಪಕ್ಷ, ಈ ಅಸಮರ್ಥ ಸರ್ಕಾರದ ಗಮನ ಸೆಳೆದಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ, ಸಾರ್ವಜನಿಕರ ಸಾವು-ನೋವುಗಳನ್ನು ತಪ್ಪಿಸಲಿಲ್ಲ ಎಂದಿದೆ.
ಕಾಂಗ್ರೆಸ್ ಪಕ್ಷ ಜನರ ಪರವಾಗಿ ಧ್ವನಿ ಎತ್ತಿದ್ದರಿಂದಾಗಿ ಹಾಗೂ ಸರ್ಕಾರದ ಮೇಲೆ ಈ ಸಂಬಂಧ ನಿರಂತರ ಒತ್ತಡ ಹೇರಿದ್ದರಿಂದಾಗಿ ನಿದ್ದೆಯಲ್ಲಿದ್ದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡಿದ್ದು, ಮೂರು ದಿನಗಳಾದ ಮೇಲೆ ಮೈಕೊಡವಿ ನಗರ ಪ್ರದಕ್ಷಿಣೆ ಹಾಕಿದ್ದಾರೆ. ಈ ವೇಳೆಗಾಗಲೇ ರಸ್ತೆಗಳೆಲ್ಲ ಈಜುಕೊಳವಾಗಿವೆ, ರಸ್ತೆ ಗುಂಡಿಗಳೆಲ್ಲ ಕೆರೆಗಳಾಗಿವೆ. ಬಿಬಿಎಂಪಿ ವ್ಯಾಪ್ತಿಯ ಕಾಮಗಾರಿಗಳ 50% ಹಣ ಬಿಜೆಪಿಯವರ ಜೇಬು ತುಂಬಿದೆ. ಜನರ ಸಮಸ್ಯೆಗಳು ದುಪ್ಪಟ್ಟಾಗಿವೆ ಎಂದಿದೆ.
ಜನ ವಿರೋಧಿ ಬಿಜೆಪಿ ಸರ್ಕಾರ ಸಾರ್ವಜನಿಕರ ಪಾಲಿಗೆ ಶಾಪವಾಗಿ ರಸ್ತೆ ಗುಂಡಿಗಳಂತೆ ಜನರ ಜೀವ ಹಿಂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.




