ಪ್ರವಾದಿ ಮಹಮ್ಮದರ ಜಯಂತಿಗೆ ಟಿಪ್ಪು ಸುಲ್ತಾನರ ಕಟೌಟ್ ಹಾಕುವುದೇ? ನಾನ್ಸೆನ್ಸ್!

22 hours ago

ಪ್ರವಾದಿ ಮಹಮ್ಮದರ ಜಯಂತಿಗೆ ಟಿಪ್ಪು ಸುಲ್ತಾನರ ಕಟೌಟ್ ಹಾಕುವುದೇ? ನಾನ್ಸೆನ್ಸ್!

ಇಂತಹ ಅವಿವೇಕಿ ಮೂರ್ಖರ ಕಿವಿಹಿಂಡಿ ಬುದ್ಧಿ ಹೇಳುವ ಹಿರಿಯರಿಲ್ಲವೇ ಅಲ್ಲಿ? ಅಥವಾ ಇವರ ಮಾತನ್ನು ಹುಡುಗರು‌ ಕೇಳುತ್ತಿಲ್ಲವೇ? ಇವೆರಡರಲ್ಲಿ ಯಾವುದೇ ಒಂದು ಕಾರಣವಿದ್ದರೂ ಸರಿಯೇ, ಇದು ಮುಸ್ಲಿಂ ಸಮುದಾಯದ “ಬಟ್ಟೆಗೆ ತಗುಲಿದ ಬೆಂಕಿ”ಯೇ ಸರಿ.

ಜಾತಿ ಧರ್ಮಗಳ ತೋರುಗಾಣಿಕೆ “ಕ್ರೇಜ್” ಆಗುವುದು ಮೇವಿನ ಬಣವೆಗಳ ನಡುವೆ ಬೆಂಕಿ ಕಾಯಿಸಿಕೊಳ್ಳುವ “ಹಿತ”ದಷ್ಟೇ ಅಪಾಯಕರ.

ಯುವಕರು ಎಚ್ಚರದಿಂದಿರಬೇಕು. ಅದರಲ್ಲೂ ಈ ಕಾಲದಲ್ಲಿ ಮುಸ್ಲಿಂ ಯುವಕರಿಗೆ ಹೆಚ್ಚು ಎಚ್ಚರವಿರಬೇಕು. ಅದರಲ್ಲೂ ಧರ್ಮದ ವಿಷಯದಲ್ಲಿ ಸಾವಿರಪಟ್ಟು. ಅಂಥದ್ದರಲ್ಲಿ ಈ ಪರಿ ಸಾರ್ವಜನಿಕವಾಗಿ ಅವಿವೇಕ ಪ್ರದರ್ಶಿಸಿದವರನ್ನು ಆಯಾ ಪ್ರದೇಶದ ಜನರೇ ಬೈದು ಬುದ್ಧಿ ಹೇಳಿ ಕಟ್ಟಿಹಾಕಬೇಕು. ಒಂದೂರು ಮಾತ್ರಕ್ಕೆ ಹೇಳುತ್ತಿಲ್ಲ. ಯಾವ ಊರಲ್ಲೇ ಆಗಲಿ ಹೀಗಾಗಬಾರದು.

ಅಷ್ಟಕ್ಕೂ! ಪ್ರವಾದಿಗಳ ಜನ್ಮದಿನ ಊರ ಬೀದಿಗಳಲ್ಲಿ ಮೈಕು ಹಚ್ಚಿಕೊಂಡು ಮೆರವಣಿಗೆಯಾದರೂ ಯಾಕೆ ಹೊರಡಬೇಕು? ಉಪದೇಶ (ಬಯಾನ್) ಹೇಳಲು ಯಾಕೆ ವೃಥಾ ಅರಚಬೇಕು? ಬೇಕಿಲ್ಲ… ಈ ಪರಿಯ ಕೂಗಾಟ ಘೋಷಣೆ, ಹಾಡು, ಸಂಭ್ರಮಗಳ ಮೂಲಕ ಅವರಿಗೆ ಭಕ್ತಿ – ಗೌರವ ಸಲ್ಲುವುದೇ?

ಧರ್ಮ ಮನಸ್ಸಿನಲ್ಲಿರಬೇಕು, ಆಚರಣೆ ಮನೆಯಲ್ಲಿರಬೇಕು. ಬೇಕೆಂದರೆ ಆಯಾ ಧಾರ್ಮಿಕ ಕಟ್ಟಡ – ಆವರಣದ ಒಳಗೆ. ಬೀದಿಗೆ ಬಂದು – ತಂದು ಪ್ರದರ್ಶಿಸುತ್ತೇವೆಂದರೆ ಅದು ಡಾಂಭಿಕತೆ.‌

ಕಬೀರ್ ಹೇಳುತ್ತಾರೆ; ಇರುವೆಯ ಹೆಜ್ಜೆಯ ಸದ್ದೂ “ಆತನಿಗೆ” ಕೇಳಿಸುತ್ತದೆ.

– ಪೀರ್ ಬಾವಾಜಿ, ಸಾಮಾಜಿಕ ಹೋರಾಟಗಾರ

Leave a Reply