ಕರಾರು ಉಲ್ಲಂಘಿಸಿದವರಿಗೆ ಹೆಚ್ಚಿನ ದಂಡ, ಜೈಲು ಶಿಕ್ಷೆಯಿಂದ ವಿನಾಯಿತಿ: ಕೃಷ್ಣ ಬೈರೇಗೌಡ
ಬೆಳಗಾವಿ: ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ಕರ್ನಾಟಕ ಬಾಡಿಗೆ (ತಿದ್ದುಪಡಿ) 2025 ವಿಧೇಯಕದ ಮೇಲೆ ದೀರ್ಘ ಚರ್ಚೆ ನಡೆಸಿ ಅನುಮೋದನೆ ನೀಡಲಾಗಿದೆ.
ವಿಧೇಯಕವನ್ನು ಸದನದ ಸದಸ್ಯರ ಚರ್ಚೆಗೆ ಮುಂದಿಟ್ಟು ವಿವರಣೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಇದೊಂದು ಸರಳ ವಿಧೇಯಕ. ಇದರಲ್ಲಿರುವುದು ದೇಶದ ಹಳೆಯ ಕಾನೂನು. ಬಹುತೇಕ ರಾಜ್ಯಗಳಲ್ಲಿ ಹೋಲಿಕೆ ಇರುವ ಕಾನೂನು. ಈ ಹಿಂದೆ ಕೇಂದ್ರ ಸರ್ಕಾರ ಮಾದರಿ ವಿಧೇಯಕವನ್ನು ರೂಪಿಸಿದ ನಂತರ ಅದನ್ನು ಎಲ್ಲಾ ರಾಜ್ಯಗಳೂ ಒಂದೇ ಮಾದರಿಯಲ್ಲಿ ಅಳವಡಿಸಿಕೊಂಡಿದ್ದವು. ಆದರೆ, ಪ್ರಸ್ತುತ ಈ ವಿಧೇಯಕದಲ್ಲಿ ಕೆಲವು ಸರಳ ತಿದ್ದುಪಡಿಗಳನ್ನು ತರಲಾಗಿದೆ” ಎಂದರು.
“ಮೂಲ ವೀಧೇಯಕದಲ್ಲಿ ಉಲ್ಲಂಘನೆಯಾದರೆ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ಇಂತಹ ಸಣ್ಣಪುಟ್ಟ ತಪ್ಪಿಗೆ ಜೈಲು ಶಿಕ್ಷೆ ಸರಿಯಲ್ಲ ಎಂಬ ಚರ್ಚೆ ಇದೀಗ ದೇಶದಾದ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತಿದ್ದುಪಡಿಯ ಕರಡನ್ನು ಸಿದ್ದಪಡಿಸಿ ನಮಗೆ ಕಳಿಸಿಕೊಟ್ಟಿದೆ. ನಾವು ಈ ತಿದ್ದುಪಡಿ ಮೂಲಕ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷೆಯ ರೂಪದಲ್ಲಿ ದಂಡ ಶುಲ್ಕ ಅಧಿಕವಾಗಬಹುದು ಆದರೆ, ಜೈಲಿಗೆ ಹೋಗುವ ಅಂಶವನ್ನು ತೆಗೆದುಹಾಕಲಾಗಿದೆ” ಎಂದು ತಿಳಿಸಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನೂ ತಪ್ಪಿಸಬೇಕು ಎಂಬ ಸಲಹೆಗೆ ಪ್ರತಿಕ್ರಿಯೆ ನೀಡಿದ ಅವರು, “ಇವತ್ತಿಗೂ ಸಣ್ಣಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತವರನ್ನೂ ರಕ್ಷಿಸಲು ಈ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕಾನೂನನ್ನು ಅನುಷ್ಠಾನ ಮಾಡಿದರೆ, ಜನರಿಗೂ ಅರಿವು ಮೂಡಿಸಿದರೆ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನು ಗಣನೀಯವಾಗಿ ತಡೆಯಬಹುದು” ಎಂದು ಅಭಿಪ್ರಾಯಪಟ್ಟರು.




