ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ ಸಹಕಾರ ಬ್ಯಾಂಕ್ ಗಳು ರಾಜಕೀಯ ಕೇಂದ್ರಗಳಾಗುತ್ತಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಸಹಕಾರಿ ವಲಯದ ಈ ಬ್ಯಾಂಕುಗಳು ಆಡಳಿತ ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಕೇಂದ್ರಗಳಂತಾಗುತ್ತಿವೆ. ಇದು ತಪ್ಪಿ, ರೈತ ಸ್ನೇಹಿ ಮತ್ತು ಭ್ರಷ್ಟಾಚಾರ ಮುಕ್ತ ಸಹಕಾರಿ ಕೇಂದ್ರಗಳಾಗಿ ಕಾರ್ಯನಿರ್ವಸುವಂತೆ ಮಾಡಲಿ ಎಲ್ಲರೂ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ನಗರದ ಪಿಎಲ್ ಡಿ ಬ್ಯಾಂಕ್ ನೂತನ ಕಟ್ಟಡ ರೈತಭವನ ಉದ್ಘಾಟಿಸಿದ ನಂತರ ಭಾನುವಾರ ಅವರು ಮಾತನಾಡಿ, ಸಹಕಾರಿ ಬ್ಯಾಂಕುಗಳು ಅಧಿಕಾರದಲ್ಲಿರುವ ಪಕ್ಷಗಳ ಕೈಗೊಂಬೆಗಳಂತೆ ದುರುಪಯೋಗ ಮಾಡಲಾಗುತ್ತಿದೆ. ಇದನ್ನು ಹೋಗಲಾಡಿಸಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳ ಅಗತ್ಯವಿದೆ ಎಂದರು.
ಸಹಕಾರಿ ರಂಗವನ್ನು ರಾಜಕೀಯ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಮಿತ್ ಶಾ ಸಮರ್ಥರಿದ್ದಾರೆ. ಅವರಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಹಕಾರ ಕ್ಷೇತ್ರ ನಿರ್ಮಾಣ ಸಾಧ್ಯ ಎಂದರು.
ಕಳೆದ 83 ವರ್ಷಗಳಿಂದ ನಗರದಲ್ಲಿ ಪಿಎಲ್ ಡಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಇಷ್ಟು ಸುದೀರ್ಘ ಅವಧಿಗೆ ಬ್ಯಾಂಕನ್ನು ಮುನ್ನೆಡೆಸಿದ ಹಿಂದಿನ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಬೇಕು. ಪಿಎಲ್ ಡಿ ಬ್ಯಾಂಕು ರೈತರ ಪಾಲಿಗೆ ಕಾಮಧೇನುವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 5 ಸಾವಿರ ಎಕರೆ ಪ್ರದೇಶದ ದ್ರಾಕ್ಷಿ ಬೆಳೆಗಾರರು ಬ್ಯಾಂಕಿನಲ್ಲಿ ವಹಿವಾಟು ನಡೆಸುತ್ತಿದ್ದಾರೆ. ರೈತರ ಅಭಿವೃದ್ಧಿಯಲ್ಲಿ ಪಿಎಲ್ ಡಿ ಬ್ಯಾಂಕ್ ಪಾತ್ರ ಮಹತ್ವದ್ದಾಗಿದೆ. ಗಾಂಧೀಜಿ ಕಂಡ ಗ್ರಾಮಸ್ವರಾಜ್ಯ ಕನಸು ಸಹಕಾರಿ ಕ್ಷೇತ್ರದ ಮೂಲಕ ನನಸಾಗುತ್ತಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಸುಮಾರು 2.5 ಕೋಟಿ ಜನರು ರಾಜ್ಯದಲ್ಲಿ ತೊಡಗಿದ್ದಾರೆ. 180 ಪಿಎಲ್ ಡಿ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿವೆ. ಸ್ತ್ರೀ ಶಕ್ತಿ ಸಂಘಗಳಿಗೆ ಸಿಎಂ ವಿಶೇಷ ಅನುದಾನ ನೀಡುತ್ತಿದ್ದಾರೆ. ಈ ಸಂಘಗಳು ಇದೇ ಬ್ಯಾಂಕಿನ ಮೂಲಕ ವಹಿವಾಟು ನಡೆಸಿದರೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಮುಗಿಸಿದ ಕಾರಣ ಸ್ತ್ರೀ ಶಕ್ತಿ ಸಂಘಗಳ ಮಾದರಿಯಲ್ಲಿ ಯುವಕರಿಗೆ ಅವಕಾಶ ಕಲ್ಪಿಸುವ ನೂತನ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಾರಿಗೊಳಿಸುತ್ತಿದ್ದಾರೆ. ಯುವಕರಿಗೆ ಆರ್ಥಿಕ ಚೈತನ್ಯ ನೀಡಿ ಸಬಲೀಕರಣ ಮಾಡುವುದು ಈ ಯೋಜನೆಯ ಉದ್ಧೇಶವಾಗಿದೆ ಎಂದರು.
ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಬ್ಯಾಂಕುಗಳಿದ್ದವು. ಬಡವ ಖಾತೆ ತೆರೆಯಲೂ ಸಾಧ್ಯವಾಗದ ಸ್ಥಿತಿ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಜನಧನ್ ಯೋಜನೆ ಮೂಲಕ 50 ಕೋಟಿ ಭಾರತೀಯರಿಗೆ ಬ್ಯಾಂಕ್ ಖಾತೆ ಮಾಡಿಕೊಟ್ಟಿದ್ದಾರೆ. ಕೇವಲ ಖಾತೆ ಮಾಡಿಸಿದ್ದು ಮಾತ್ರವಲ್ಲ, ಕೃಷಿ ಸಮ್ಮಾನ್ ಯೋಜನೆಯಡಿ ವಾರ್ಷಿಕ 10 ಸಾವಿರ ರೂ.ಗಳನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದರು.
ಈ ಹಿಂದೆ 54 ವರ್ಷ ಆಡಳಿತ ನಡೆಸಿದವರಿಗೆ ಪ್ರತ್ಯೇಕ ಸಹಕಾರ ಸಚಿವಾಲಯ ಮಾಡಬೇಕೆಂಬ ಯೋಚನೆಯೇ ಬರಲಿಲ್ಲ. ಮೋದಿಯವರು ಸಹಕಾರ ಇಲಾಖೆ ಮಾಡಿ, ಸಮರ್ಥ ನಾಯಕರಾದ ಅಮಿತ್ ಶಾ ಅವರ ಹೆಗಲಿಗೆ ವಹಿಸಿದ್ದಾರೆ. ಏಕೀಕರಣ ಮಾದರಿಯಲ್ಲಿ ಬ್ಯಾಂಕ್ ಗಳ ಸರಳೀಕರಣ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲಗಳು ಲಭ್ಯವಾಗಲಿವೆ ಎಂದರು.
ಈಗಾಗಲೇ ಹಾಲು ಒಕ್ಕೂಟ ಪ್ರತ್ಯೇಕವಾಗಿದೆ. ಎಂಡಿ ನೇಮಕ ಮತ್ತು ಅಧಿಕಾರಿಗಳ ನೇಮಕವಾಗಿದೆ. ಇದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲೆಯಲ್ಲಿ 5 ಲಕ್ಷ ಲೀಟರ್ ಹಾಲು ಉತ್ಪಾದನೆಯಿದ್ದು, ಹಾಲು ಉತ್ಪಾದಕ ಸಂಘಗಳೂ ಕೋಲಾರಕ್ಕಿಂತ ಹೆಚ್ಚಿವೆ. ಹಾಗಾಗಿ ಪ್ರತ್ಯೇಕ ಒಕ್ಕೂಟವಾಗಲು ಎಲ್ಲ ಅರ್ಹತೆ ಹೊಂದಿದೆ ಎಂದರು.
ಬ್ಯಾಂಕ್ ಗೆ ಒಳ್ಳೆಯ ಕಟ್ಟಡವಾಗಿದ್ದರೂ ಇದರ ಹಿಂದಿನ ಶ್ರಮ ಹೆಚ್ಚಿದೆ. ಸದಸ್ಯರು ಮತ್ತು ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಿದ ಕಾರಣ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಬ್ಯಾಂಕ್ ಬಡವರ ಪರ ಕಾರ್ಯ ನಿರ್ವಹಿಸುತ್ತಿದೆ. ಬಡವರ ಆದಾಯ ದ್ವಿಗುಣ ಮಾಡುವುದು ಪ್ರಧಾನಿಯವರ ಕನಸು, ನೇಗಿಲ ಮೇಲಿದೆ ಧರ್ಮ ಎಂಬ ಕುವೆಂಪು ಮಾತಿನಂತೆ ರೈತನ ಹಿತ ಕಾಯುವ ಕೆಲಸ ಬ್ಯಾಂಕು ಮಾಡಬೇಕು ಎಂದರು.
ಬ್ಯಾಂಕಿನ ಕಟ್ಟಡಕ್ಕೆ ರೈತ ಭವನ ಹೆಸರು ಅರ್ಥಪೂರ್ಣವಾಗಿದೆ, ರೈತರು ನನ್ನ ಕಟ್ಟಡ ಎಂದು ಹೆಮ್ಮೆ ಪಡಬೇಕು, ಇದು ನಮ್ಮೆಲ್ಲರ ಕಟ್ಟಡ, ರೈತರ ಪ್ರತೀಕ ಈ ರೈತ ಭವನ, ಇದು ರಾಜಕೀಯೇತರ ಭವನವಾಗಬೇಕು, ಷೇರುದಾರರ ಸಂಖ್ಯೆ ಹೆಚ್ಚಾಗಬೇಕು. ಮುಂದಿನ ಐದು ವರ್ಷದಲ್ಲಿ 10 ಸಾವಿರ ರೈತರು ಷೇರುದಾರರಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ಎಲ್ಲರೂ ಮಾಲೀಕರೇ ಆಗಿದ್ದು, ನಮ್ಮ ಬ್ಯಾಂಕು ಎಂದು ಅಪೇಕ್ಷೆ ಪಡಬೇಕು ಎಂದರು.
ಉತ್ತರ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರ ಉತ್ತಮವಾಗಿದೆ. ದಕ್ಷಿಣದಲ್ಲಿ ಇದು ಇನ್ನೂ ಜನಸ್ನೇಹಿಯಾಗಬೇಕು. ಸಕ್ಕರೆ ಕಾರ್ಖಾನೆಗಳು ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿವೆ. ಹಾಲು ಉತ್ಪಾದಕರು ವೈದ್ಯಕೀಯ ಕಾಲೇಜು ನಡೆಸುತ್ತಿದ್ದಾರೆ. ಸಹಕಾರಿ ಕ್ಷೇತ್ರ ಬೆಳೆದರೆ ರೈತರೂ ಬೆಳೆಯುತ್ತಾರೆ, ರೈತ ಬಲಗೊಂಡರೆ ಮಾತ್ರ ದೇಶ ಬಲವಾಗಲು ಸಾಧ್ಯ. ರೈತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದರು.
ರೈತನ ಏಳಿಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿವೆ. ರೈತರು, ರೈತರ ಮಕ್ಕಳ ಅನುಕೂಲಕ್ಕಾಗಿ ಸರ್ಕಾರಗಳು ಶ್ರಮಿಸುತ್ತಿವೆ. ಜಿಲ್ಲೆಯ ರೈತರಿಗೆ ನೀರಾವರಿ ಅಗತ್ಯವಿದ್ದು, ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿದೆ. ಕ್ಷೇತ್ರದ ಎಲ್ಲ ಕೆರೆಗಳೂ ಡಿಸೆಂಬರ್ ವೇಳೆಗೆ ತುಂಬಿಸಲಾಗುವುದು. ಎತ್ತಿನಹೊಳೆಗೆ ಇನ್ನೂ ಒಂದು ಸಾವಿರ ಕೋಟಿ ಹೆಚ್ಚುವರಿ ಹಣ ನೀಡಲು ಮುಖ್ಯಂತ್ರಿಗಳು ಒಪ್ಪಿದ್ದು, ಶೀಘ್ರವೇ ಎತ್ತಿನಹೊಳೆ ನೀರು ಜಿಲ್ಲೆಗೆ ಬರಲಿದೆ ಎಂದರು.
ಎತ್ತಿನಹೊಳೆ ಯೋಜನೆ ರೂಪಿಸಿದ ನೀರಾವರಿ ಸಚಿವರೇ ಈಗ ಮುಖ್ಯಮಂತ್ರಿಗಳಾಗಿದ್ದಾರೆ. ಹಾಗಾಗಿ ಎತ್ತಿನಹೊಳೆ ಮೂಲಕ ಈ ಭಾಗದ ಜನರ ಅನೇಕ ವರ್ಷಗಳ ನೀರಿನ ಬೇಡಿಕೆ ಈಡೇರಿಸಲಾಗುವುದು. ಬೇಸಿಗೆ ಅರಿವಿಲ್ಲದೆ ಈ ವರ್ಷ ಕಳೆದಿದ್ದೇವೆ. ನೀರಿನ ಅಭಾವ ಬಹುತೇಕ ತೀರಿದೆ. ಇನ್ನೂ ನೀರಿನ ಅಭಾವ ಇರುವ ಚಿಂತಾಮಣಿ ಮತ್ತು ಬಾಗೇಪಲ್ಲಿ ಕ್ಷೇತ್ರಗಳ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ಎರಡನೇ ಹಂತದ ಎಚ್ ಎನ್ ವ್ಯಾಲಿ ಕಾಮಗಾರಿಗೆ 60 ಕೋಟಿ ಮಂಜೂರಾಗಿದೆ ಎಂದರು.



