ಕೆ.ಸಿ.ವೀರೇಂದ್ರ, ಕು‌ಸುಮಾ ವಿರುದ್ಧ ಇಡಿ ದಾಳಿ

8 months ago

ಚಿತ್ರದುರ್ಗ: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಅಳಿಯ ಹಾಗೂ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ಅವರಿಗೆ ಜಾರಿ ನಿರ್ದೇಶನಾಲಯ ಬಿಸಿ ಮುಟ್ಟಿಸಿದೆ.

ಗೇಮಿಂಗ್ ಆ್ಯಪ್ ಹಾಗೂ ಅಕ್ರಮ ಆಸ್ತಿಪಾಸ್ತಿ ಪತ್ತೆ ಹಿನ್ನೆಲೆಯಲ್ಲಿ ಶಾಸಕ ವೀರೇಂದ್ರ ಅವರನ್ನು ಕೋಲ್ಕೊತ್ತಾ ಇಡಿ ಅಧಿಕಾರಿಗಳು ಸಿಕ್ಕೀಂನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಮತ್ತೊಂದೆಡೆ ಇತ್ತ ಶಾಸಕ ವೀರೇಂದ್ರ ಹಾಗೂ ಅವರ ಸಹೋದರರ, ಚಳ್ಳಕೆರೆಯಲ್ಲಿರುವ 4 ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶಾಸಕ ಕೆ ಸಿ ವೀರೇಂದ್ರ ಹಾಗೂ ಕೆ.ಸಿ.ನಾಗರಾಜ, ಕೆ.ಸಿ.ತಿಪ್ಪೇಸ್ವಾಮಿ ನಿವಾಸದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ. 20ಕ್ಕೂ ಹೆಚ್ಚು ಖಾಸಗಿ ವಾಹನದಲ್ಲಿ ಬಂದಿರುವ 40ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮನೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಹಿಂದೆ 2016ರ ಡಿಸೆಂಬರ್ 11ರಂದು ಕೆ ಸಿ ವೀರೇಂದ್ರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ವಿರೇಂದ್ರ ಮನೆಯ ಬಾತ್ ರೂಂನಲ್ಲಿ 5 ಕೋಟಿ ರೂ.ಗೂ ಹೆಚ್ಚು ಹಣ, 30 ಕೆಜಿಗೂ ಹೆಚ್ಚು ಚಿನ್ನ ಪತ್ತೆ ಆಗಿತ್ತು.

ಕೆ ಸಿ ವಿರೇಂದ್ರ ಒಡೆತನದ ಕಂಪನಿಗಳಿಂದ ಗೇಮಿಂಗ್ ಆ್ಯಪ್ ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿತ್ತು. ವಿರೇಂದ್ರಗೆ ಸೇರಿದ ರತ್ನ ಗೋಲ್ಡ್, ರತ್ನ ಮಲ್ಟಿ ಸೋರ್ಸ್, ಪಪ್ಪಿ ಟೆಕ್ನಾಲಜಿ, ರತ್ನ ಗೇಮಿಂಗ್ ಸಲ್ಯೂಷನ್ಸ್ ಸೇರಿ ಇತರೆ ಕಂಪನಿಗಳಿಂದ ಅಕ್ರಮ ಆರೋಪ ಹಿನ್ನೆಲೆ ದಾಳಿ ನಡೆದಿದೆ. ಒಟ್ಟಾರೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ, ಬೆಂಗಳೂರು, ಗೋವಾ ಸೇರಿ 17 ಕಡೆ ದಾಳಿ ನಡೆದಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಶಾಸಕ ಕೆ ಸಿ ವಿರೇಂದ್ರ ವ್ಯವಹಾರಿಕಾ ಸಭೆಯ ಹಿನ್ನೆಲೆಯಲ್ಲಿ ಸಿಕ್ಕಿಂಗೆ ತೆರಳಿದ್ದು ಅಲ್ಲಿ ಅವರನ್ನು ಕೋಲ್ಕೊತ್ತಾದ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವೀರೇಂದ್ರ ಪಪ್ಪಿ ಅವರು ತಮ್ಮ ವಿವಿಧ ಕಂಪನಿಗಳಾದ ‘ರತ್ನ ಗೇಮಿಂಗ್ ಸಲ್ಯೂಷನ್ಸ್, ರತ್ನ ಗೋಲ್ಡ್ ಕಂಪನಿ, ರತ್ನ ಮಲ್ಟಿ ಸೋರ್ಸ್ ಕಂಪನಿ, ಪಪ್ಪಿ ಟೆಕ್ನಾಲಜೀಸ್ ಕಂಪನಿ, ಪಪ್ಪಿ ಟೂರ್ಸ್ & ಟ್ರಾವೆಲ್ಸ್ ಮತ್ತು ಪಪ್ಪಿ ಬೇರ್ ಬಾಕ್ಸ್’ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸಿದ್ದಾರೆ ಎಂದು ಇ.ಡಿ. ಆರೋಪಿಸಿದೆ.

ಸಿಕ್ಕಿಂನಲ್ಲಿ ಪಪ್ಪಿ ಅವರನ್ನು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಇ.ಡಿ. ಅಧಿಕಾರಿಗಳ ತಂಡ ಸಿಕ್ಕಿಂಗೆ ತೆರಳಿದ್ದು, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಿದೆ 

ವೀರೇಂದ್ರ ಪಪ್ಪಿ ಜೊತೆ ಆರ್ಥಿಕ ವಹಿವಾಟು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರ ನಿವಾಸಗಳ ಮೇಲೂ ಇ.ಡಿ ದಾಳಿ ನಡೆಸಿದೆ.

ಕುಸುಮಾ ಅವರ ಅನ್ನಪೂರ್ಣೇಶ್ವರಿ ನಗರ ಮುದ್ದನಪಾಳ್ಯದ ನಿವಾಸ ಹಾಗೂ ಚಂದ್ರಾ ಲೇ ಔಟ್‌ನಲ್ಲಿರುವ ಕಚೇರಿ ಮೇಲೂ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಶಾಸಕ ವೀರೇಂದ್ರ ಪಪ್ಪಿ ಹನುಮಂತರಾಯಪ್ಪ ಪುತ್ರಿ ವ್ಯಾಪಾರ ವಹಿವಾಟು ನಡೆಸಿದ್ದಾರೆಂಬ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. 2 ಇನ್ನೋವಾ ಕಾರಿನಲ್ಲಿ ಬಂದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಭದ್ರತಾ ಅಧಿಕಾರಿಗಳನ್ನು ಕರೆತಂದಿದ್ದರು.

ಹವಾಲಾ ಕಿಂಗ್‌ಪಿನ್‌ ಎಂದೇ ಗುರುತಿಸಿಕೊಂಡಿದ್ದ ಸುಮಂದರ್‌ ಸಿಂಗ್‌ ಅವರ ಮೇಲೂ ಇ.ಡಿ. ದಾಳಿ ನಡೆಸಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪಣಜಿಯಲ್ಲಿ ಮೆಜೆಸ್ಟಿಕ್‌ ಪ್ರೈಡ್‌ ಕೆಸಿನೋ ನಡೆಸುತ್ತಿರುವ ಸುಮಂದರ್‌ ಸಿಂಗ್‌ ತೆರಿಗೆ ವಂಚನೆ ಮಾಡಿದ್ದರೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave a Reply