ಮೈಸೂರಿನ ಡ್ರಗ್ಸ್‌ ಫ್ಯಾಕ್ಟರಿ ಕುರಿತ ತನಿಖೆ ಚುರುಕು

9 months ago

ಬೆಂಗಳೂರು: ಮಹಾರಾಷ್ಟ್ರ ಪೊಲೀಸರ ನೆರವಿನೊಂದಿಗೆ ಪತ್ತೆಹಚ್ಚಲಾಗಿರುವ ಮೈಸೂರಿನ ಡ್ರಗ್ಸ್‌ ಫ್ಯಾಕ್ಟರಿ ಕುರಿತ ತನಿಖೆ ತೀವ್ರಗೊಳಿಸಿರುವ ಕರ್ನಾಟಕ ಪೊಲೀಸರು ಇದೊಂದು ಅಂತರಾಷ್ಟ್ರೀಯ ಮಟ್ಟದ ದಂಧೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಮೈಸೂರು ನಗರ ಹೊರ ವಲಯದ ಡ್ರಗ್ಸ್‌ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದ್ದ ಮಾದಕ ವಸ್ತುಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳು ಮಾತ್ರವಲ್ಲದೆ ದೇಶದ ಇತರ ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು. ಅಲ್ಲದೆ ವಿದೇಶಗಳಿಗೂ ರವಾನೆಯಾಗುತ್ತಿತ್ತು ಎಂಬ ಅಂಶ ಪತ್ತೆಯಾಗಿದೆ.

ಡ್ರಗ್ಸ್ ಕಾರ್ಖಾನೆ ಮೇಲೆ ಮಹಾರಾಷ್ಟ್ರ ಪೊಲೀಸರು ಶನಿವಾರ ರಾತ್ರಿ ದಾಳಿ ನಡೆಸಿ ವಶಪಡಿಸಿಕೊಂಡ ಎಂಡಿಎಂಎ ಮಾದಕ ವಸ್ತುವಿನ ಮೌಲ್ಯ 381.96 ಕೋಟಿ ರೂ. ಎನ್ನುವುದು ಮತ್ತೊಮ್ಮೆ ಬೆಚ್ಚಿ ಬೀಳುವಂತಾಗಿದೆ.

ಬನ್ನಿ ಮಂಟಪದ ರಿಂಗ್‌ ರಸ್ತೆಯ ಬಳಿಯ ಗ್ಯಾರೇಜ್‌ ಮೇಲೆ ಮೈಸೂರಿನ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ ಮಹಾರಾಷ್ಟ್ರ ಪೊಲೀಸರು, 187.97 ಕೆ.ಜಿ. ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದರು. ಪ್ರಕರಣದಲ್ಲಿ ಮುಂಬಯಿಯ ಅಂಧೇರಿಯ ಫಿರೋಜ್‌ ಮೌಲಾ ಶೇಕ್‌, ಗುಜರಾತ್‌ನ ಸೂರತ್‌ ನಿವಾಸಿ ಶೇಕ್‌ ಆದಿಲ್‌, ಬೈರೋಚ್‌ನ ಸೈಯದ್‌ ಮೆಹಫೂಜ್‌ ಅಲಿ ಸೇರಿದಂತೆ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.

ಸೈಯದ್‌ ರಸಾಯನ ವಿಜ್ಞಾನ ವಿಷಯದಲ್ಲಿ ಡಿಪ್ಲೊಮಾ ಮಾಡಿದ್ದ ಎಂದು ಮುಂಬಯಿ ವಲಯ ಡಿಸಿಪಿ ದತ್ತ ನಾಲ್ವಡೆ ಮುಂಬಯಿಯಲ್ಲಿ ಮಾಹಿತಿ ನೀಡಿದ್ದಾರೆ. ಘನ ರೂಪ ಸೇರಿದಂತೆ ದ್ರವ ರೂಪದಲ್ಲಿದ್ದ ಬರೋಬ್ಬರಿ 187.97 ಕೆ.ಜಿ. ತೂಕದ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಇದರೊಂದಿಗೆ ಮಾದಕ ವಸ್ತು ತಯಾರಿಕೆಗೆ ಬಳಕೆಯಾಗುತ್ತಿದ್ದ ರಾಸಾಯನಿಕ ವಸ್ತುಗಳೊಂದಿಗೆ ಓವೆನ್‌, ಹೀರ್ಸ್, ಕಂಟೈರ್ಸ್, ಡಿಸ್ಟಿಲೇಷನ್‌ ಉಪಕರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೈಸೂರಿನಲ್ಲಿ ಭಾರೀ ಪ್ರಮಾಣದಲ್ಲಿ ತಯಾರಾಗುತ್ತಿದ್ದ ಮಾದಕ ವಸ್ತುವನ್ನು ಮಹಾರಾಷ್ಟ್ರ, ಗುಜರಾತ್‌ಗೆ ಪೂರೈಕೆ ಮಾಡಲಾಗುತ್ತಿತ್ತು ಎಂಬ ಅಂಶ ಪೊಲೀಸರ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ದ್ರವ ರೂಪದಲ್ಲಿದ್ದ ಮಾದಕ ವಸ್ತುವನ್ನು ಪೌಡರ್‌ ಮಾಡುವ ಗುರಿ ಹೊಂದಿದ್ದರು. ಮಾರಾಟಕ್ಕಾಗಿ ಬೇರೆ ಜನರನ್ನೊಳಗೊಂಡ ತಂಡವಿದ್ದು, ಈ ಜಾಲದ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಶೆಡ್‌ ಪಕ್ಕದಲ್ಲೇ ಇರುವ ಟೀ ಅಂಗಡಿಗೆ ಮಾತ್ರ ತಂಡದಲ್ಲಿದ್ದ ಯುವಕನೊಬ್ಬ ಬಂದು ಆಗಾಗ ಟೀ ತೆಗೆದುಕೊಂಡು ಹೋಗುತ್ತಿದ್ದ. ಮತ್ಯಾರೂ ಶೆಡ್‌ನಿಂದ ಹೊರಕ್ಕೆ ಬರುತ್ತಿರಲಿಲ್ಲ. ಶೆಡ್‌ನೊಳಗೆ ಗಾಳಿ, ಬೆಳಕು ಬಾರದಂತೆ ಮುಚ್ಚಲಾಗಿತ್ತು. ಸ್ಥಳೀಯರಿಗೆ ಗ್ಯಾರೇಜ್‌ನಲ್ಲಿ ಎಷ್ಟು ಜನ ಇದ್ದಾರೆ ಎಂಬುದರ ಬಗ್ಗೆ ಮಾಹಿತಿಯೇ ಇರಲಿಲ್ಲ.

ಕಳೆದ ಜು. 25ರಂದು ಸಲೀಂ ಇಮ್ತಿಯಾಜ್‌ ಶೇಖ್‌ ಅಲಿಯಾಸ್‌ ಸಲೀಂ ಲಂಗಡನನ್ನು ಬಾಂದ್ರಾ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಯಿತು. ತನಿಖೆ ನಡೆಸಿದಾಗ ಎಂಡಿಎಂಎ ಮಾದಕ ವಸ್ತು ಮೈಸೂರಿನಿಂದ ಸರಬರಾಜು ಮಾಡುತ್ತಿರುವುದು ತಿಳಿಯಿತು. ಬಳಿಕ ವಿಶೇಷ ತಂಡವನ್ನು ರಚಿಸಿ ಮೈಸೂರಿಗೆ ಕಳುಹಿಸಲಾಯಿತು. ಮೈಸೂರಿನಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ ಪತ್ತೆ ಹಚ್ಚಲಾಗಿದೆ ಎಂದು ಮುಂಬಯಿ ಡಿಸಿಪಿ ದತ್ತ ನಾಲ್ವಡೆ ತಿಳಿಸಿದ್ದಾರೆ.

20 ದಿನಗಳ ಹಿಂದೆ ಮಹೇಶ್‌ ಎಂಬುವವರಿಗೆ ಸೇರಿದ್ದ ಜಾಗವನ್ನು 20 ಸಾವಿರಕ್ಕೆ ಬಾಡಿಗೆಗೆ ಪಡೆದಿದ್ದ ಅಜ್ಮಲ್, ಆರೋಪಿಗಳಿಗೆ 2 ಲಕ್ಷಕ್ಕೆ ನೀಡಿದ್ದ. ಅಜ್ಮಲ್‌ನನ್ನೂ ಬಂಧಿಸಲಾಗಿದೆ.
ಈ ಕಾರ್ಖಾನೆಯಲ್ಲಿ ತಯಾರಾದ ಮಾದಕ ವಸ್ತುವನ್ನು ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯ ಮೂಲಕ ಅತ್ಯಂತ ಸುಲಭವಾಗಿ ಸಾಕಣೆ ಮಾಡಲಾಗುತ್ತಿತ್ತು. ಹೆದ್ದಾರಿಯಲ್ಲಿ ಯಾರೂ ಕೂಡ ಯಾವುದೇ ವಾಹನಗಳನ್ನು ತಪಾಸಣೆ ಮಾಡುವುದಿಲ್ಲ ಇದನ್ನು ಬಳಸಿಕೊಂಡ ಧಂದೆಕೋರರು ಸುಲಭವಾಗಿ ಈ ಮೂಲಕ ಸಾಗಾಣಿಕೆ ಮಾಡುತ್ತಿದ್ದರು ಎಂದು ಪೋಲೀಸ್ ಮೂಲಗಳಿಂದ ತಿಳಿದುಬಂದಿದೆ.

Leave a Reply