ಭ್ರಷ್ಟ ಅಧಿಕಾರಿ ಬೇರೆ ಯಾರೂ ಅಲ್ಲ, ಅದು ಪಿ. ಹರಿಶೇಖರನ್: ರವಿಕೃಷ್ಣಾರೆಡ್ಡಿ

4 years ago

ಬೆಂಗಳೂರು: ಪಿ. ಹರಿಶೇಖರನ್, IPS. ADGP, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ. ಅಕ್ರಮ ಮತ್ತು ಅಪರಾಧ ಕೃತ್ಯಗಳ ಮೂಲಕ ಅನ್ಯರ ಆಸ್ತಿಯನ್ನು ಕಬಳಿಕೆ ಮಾಡಿರುವ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ರಾಜ್ಯ CID ಇಲಾಖೆ, ಈ ಹಗರಣದ ಕಿಂಗ್‌ಪಿನ್ ಎಂದು ಹೇಳಲಾಗುತ್ತಿರುವ ಭ್ರಷ್ಟ IPS ಅಧಿಕಾರಿಯನ್ನು ವಿಚಾರಣೆ ಮಾಡಲು ಮತ್ತು ಬಂಧಿಸಲು ಯಾಕೆ ಹಿಂದೆಮುಂದೆ ನೋಡುತ್ತಿದೆ? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಪ್ರಶ್ನಿಸಿದ್ದಾರೆ.

ವಿಶ್ವಾಸನೀಯ ಮೂಲಗಳಿಂದ ನಮಗೆ ದೊರಕಿರುವ ಮಾಹಿತಿಯ ಪ್ರಕಾರ, ನೆನ್ನೆಯ ವರದಿಯಲ್ಲಿ “ಅನಾಮಧೇಯ”ನಾಗಿ ಉಲ್ಲೇಖವಾಗಿರುವ ಭ್ರಷ್ಟ ಅಧಿಕಾರಿ ಬೇರೆ ಯಾರೂ ಅಲ್ಲ, ಅದು ಪಿ. ಹರಿಶೇಖರನ್. ಇವರು ಬಹುಶಃ ರಾಜ್ಯದ ಹತ್ತು ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಉನ್ನತ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಗಳೇ ಇಂತಹ ನೀಚ ಮತ್ತು ಅಪರಾಧ ಕೃತ್ಯಗಳಲ್ಲಿ ತೊಡಗಿದರೆ ಈ ನಾಡನ್ನು ಕಾಪಾಡುವವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಮತ್ತು, ಇಂತಹ ಹಿರಿಯ ಅಧಿಕಾರಿಗಳೇ ಭ್ರಷ್ಟಾಚಾರ ಮತ್ತು ಅಕ್ರಮಗಳಲ್ಲಿ ತೊಡಗಿದ್ದಾಗ, ಪೊಲೀಸ್ ಇಲಾಖೆಯ ಕಿರಿಯ ಅಧಿಕಾರಿಗಳಿಗೆ ಅವರನ್ನು ವಿಚಾರಣೆ ಮಾಡಲು ಹೇಗೆ ತಾನೇ ಧೈರ್ಯ ಬರುತ್ತದೆ? ಈ ಪ್ರಕರಣದಲ್ಲಿಯೂ ಇದೇ ಆಗಿರುವುದು ಎಂದಿದ್ದಾರೆ.

ಹಲವು ಮೂಲಗಳಿಂದ ನಮಗೆ ಬಂದಿರುವ ಮಾಹಿತಿಗಳ ಪ್ರಕಾರ ಈ ಹರಿಶೇಖರನ್ ಪರಮಭ್ರಷ್ಟ ಮತ್ತು ಸಾಕಷ್ಟು ಅಕ್ರಮ ಆಸ್ತಿಯನ್ನು ಮಾಡಿದ್ದಾರೆ. ACB ಈ ಕೂಡಲೇ ಆದಾಯಮೀರಿದ ಆಸ್ತಿ ಪ್ರಕರಣದಲ್ಲಿ ಇವರ ಮೇಲೆ ದಾಳಿ ಮಾಡಬೇಕು. ಆದರೆ ACBಯ ಮುಖ್ಯಸ್ಥನೇ ಪರಮಭ್ರಷ್ಟ ಮತ್ತು ಆತನ ಮೇಲೆ ಹತ್ತು ವರ್ಷಗಳ ಹಿಂದೆಯೇ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ CBI ದಾಳಿ ನಡೆದಿತ್ತು. ಏನೂ ಆಗಲಿಲ್ಲ ಎಂದಿದ್ದಾರೆ.

ಇವೆಲ್ಲವುಗಳ ಹಿನ್ನೆಲೆಯಲ್ಲಿ ಇಂದು KRS ಪಕ್ಷದ ನಿಯೋಗವು CID ಇಲಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ, ಈ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕ ಪೊಲೀಸರಿಗೆ ತಕ್ಕುದಾದ ಧೈರ್ಯದಿಂದ ತನಿಖೆ ಮಾಡುವಂತೆ, ಹಾಗೆಯೇ, ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನು ಸಹ ಭೇಟಿ ಮಾಡಿ ಅವರನ್ನೂ ಸಹ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಿದೆ ಎಂದಿದ್ದಾರೆ.

ಇದರ ಜೊತೆಗೆ KRS ಪಕ್ಷವು ಮುಂದಿನ ಒಂದೆರಡು ದಿನಗಳಲ್ಲಿ ಈ ಪಿ. ಹರಿಶೇಖರನ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುವ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಕಚೇರಿಯ (ಅಲಸೂರು ಕೆರೆ) ಮುಂದೆ #ತಮಟೆಚಳವಳಿ ಮಾಡಲಿದೆ. ಮತ್ತು, ಈ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ ಮತ್ತು ಆತನನ್ನು ವಿಚಾರಣೆ ಮಾಡಲು ಧೈರ್ಯ ತೋರಿಸದ CID’ಯ ಪುಕ್ಕಲುತನ ಮತ್ತು ಕರ್ತವ್ಯಲೋಪವನ್ನು ರಾಜ್ಯ ಉಚ್ಛ ನ್ಯಾಯಾಲಯದ ಗಮನಕ್ಕೆ ತರುವ ಅಥವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವ ಕುರಿತು ನ್ಯಾಯವಾದಿಗಳ ಜೊತೆ ಚರ್ಚೆ ಮಾಡಿ ಪಕ್ಷ ತೀರ್ಮಾನಿಸಲಿದೆ ಎಂದಿದ್ದಾರೆ.

ಭ್ರಷ್ಟರೇ, ಎಚ್ಚರ. ಭ್ರಷ್ಟ J.C.B ಪಕ್ಷಗಳ ಸಹಯೋಗದಲ್ಲಿ ನೀವು ಮಾಡಿದ ಲೂಟಿ ಮತ್ತು ಕುಕೃತ್ಯಗಳು ಇನ್ನು ಮುಂದೆ ನಡೆಯುವುದಿಲ್ಲ. ಈ ಕೂಡಲೇ ನಿಮ್ಮ ಅಕ್ರಮಗಳನ್ನು ನಿಲ್ಲಿಸಿ; ಒಳ್ಳೆಯ ಮನುಷ್ಯರಾಗಿ. ಇಲ್ಲವಾದರೆ ಮಾನ-ಮರ್ಯಾದೆ ಕಳೆದುಕೊಂಡು ಜೈಲಿಗೆ ಹೋಗಲು ಸಿದ್ಧರಾಗಿ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ. KRS ಪಕ್ಷದ ಈ ನಿರಂತರ ಮತ್ತು ನ್ಯಾಯಪರ ಹೋರಾಟಗಳಿಗೆ ರಾಜ್ಯದ ಜನತೆ ಎಂದಿನಂತೆ ಬೆಂಬಲಿಸುತ್ತಾರೆ ಮತ್ತು ಜೊತೆಗೆ ನಿಲ್ಲುತ್ತಾರೆ ಎನ್ನುವ ವಿಶ್ವಾಸ ನಮ್ಮದು ಎಂದಿದ್ದಾರೆ.

Leave a Reply