ಡಿಟೋನೇಟರ್ ಸೇರಿ ಸ್ಪೋಟಕಗಳು ಪತ್ತೆ ತನಿಖೆಗೆ ಆರು ವಿಶೇಷ ತಂಡಗಳ ರಚನೆ

9 months ago

ಬೆಂಗಳೂರು: ನಗರದ ಹೃದಯ ಭಾಗದ ಅತ್ಯಂತ ಜನಸಂದಣಿ ಪ್ರದೇಶ ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಮುಂಭಾಗ ಪ್ಲಾಸ್ಟಿಕ್ ಚೀಲದಲ್ಲಿ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ಗಳ ಸೇರಿ ಸ್ಪೋಟಕಗಳು ಪತ್ತೆ ತನಿಖೆಗೆ ಆರು ವಿಶೇಷ ತಂಡಗಳ ರಚನೆ ಮಾಡಲಾಗಿದೆ.

ಪ್ರಕರಣ ದಾಖಲಿಸಿರುವ ಕಳಾಸಿಪಾಳ್ಯ ಪೊಲೀಸರು ಒಳಗೊಂಡ ಆರು ವಿಶೇಷ ತಂಡಗಳು ಪ್ರಕರಣದ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಿವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಸಿಸಿಬಿ,ಗುಪ್ತದಳ, ಎಟಿಸಿ ತಂಡದಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.ಪತ್ತೆಯಾದ ಜಿಲೆಟಿನ್ ಕಡ್ಡಿ ಜೊತೆಗೆ ಡಿಟೋನೆಟರ್ಗಳನ್ನು ತಪಾಸಣೆ ನಡೆಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದ ಶೌಚಾಲಯದ ಸಮೀಪ ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಫೋಟಕ ಪತ್ತೆಯಾಗಿತ್ತು. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದ್ದವು.

ಈ ವೇಳೆ ಒಂದು ಬ್ಯಾಂಗ್ ನಲ್ಲಿ 6 ಜಿಲೆಟಿನ್ ಕಡ್ಡಿಗಳ ಜೊತೆಗೆ ಕೆಲವು ಡಿಟೋನೆಟರ್ಗಳು ಕೂಡ ಪತ್ತೆಯಾಗಿದ್ದವು. ವ್ಯಕ್ತಿಯೊಬ್ಬ ಈ ಬ್ಯಾಗ್‌ನ ಜೊತೆ ಕುಳಿತಿರುವುದು ಕಂಡುಬಂದಿದ್ದು, ಬಂಡೆ ಒಡೆಯುವ ಕೆಲಸಗಾರರು ಬಿಟ್ಟುಹೋಗಿರುವ ಶಂಕೆ ಉಂಟಾಗಿದೆ.

ಉದ್ದೇಶಪೂರ್ವಕವಾಗಿ ಬಿಟ್ಟು ಹೋಗಿದ್ದಾರೆಯೇ ಅಥವಾ ಮರೆತು ಹೋಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಡಿಸಿಪಿ ಗಿರೀಶ್  ತಿಳಿಸಿದರು.

ಎರಡು ದಿನಗಳ ಹಿಂದೆ ಬೆಳಗ್ಗೆ 10 ಗಂಟೆ ಸುಮಾರಿಗೆ ಓರ್ವ ವ್ಯಕ್ತಿ ಶೌಚಾಲಯಕ್ಕೆಂದು ಬಂದು ಕೈಯಲ್ಲಿದ್ದ ಚೀಲವನ್ನು ಶೌಚಾಲಯದ ಮುಂಭಾಗದಲ್ಲೇ ಇಟ್ಟು ಹೋಗಿದ್ದ. ಆದರೆ ಮಧ್ಯಾಹ್ನ 2 ಗಂಟೆವರೆಗೆ ಚೀಲ ಅಲ್ಲೇ ಇದ್ದು, ಯಾರೂ ಕೂಡ ಗಮನಿಸಿರಲಿಲ್ಲ. ಬಳಿಕ ಚೀಲ ಗಮನಿಸಿದ ಶೌಚಾಲಯದ ಸಿಬ್ಬಂದಿ ಬಸ್ ನಿಲ್ದಾಣದ ಸೆಕ್ಯೂರಿಟಿಗಳಿಗೆ ಮಾಹಿತಿ ನೀಡಿದ್ದು, ಸೆಕ್ಯೂರಿಟಿ ಸಿಬ್ಬಂದಿ ಪೊಲೀಸರಿಗೆ ಸಂದೇಶ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸ್ಫೋಟಕಗಳು ಪತ್ತೆಯಾಗಿವೆ.

Leave a Reply