ಶಿವನ ಜೊತೆ ಯಾವಾಗಲು ನಮ್ಮ ಯೋಗ ಸಂಬಂಧ ಇರುತ್ತದೆ: ಬಸವರಾಜ ಬೊಮ್ಮಾಯಿ

10 months ago

ಸಂತೋಷ್ ಲಾಡ್ ಪಾದರಸದಂತೆ ಓಡಾಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಂತು ಯೋಗ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ‌

ಬೆಂಗಳೂರು: ಎಲ್ಲರಿಗಿಂತ ದೊಡ್ಡ ಯೋಗಿ ಶಿವ. ಶಿವನ ಜೊತೆ ಯಾವಾಗಲು ನಮ್ಮ ಯೋಗ ಸಂಬಂಧ ಇರುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಶ್ವಾಸ ಯೋಗ ಸಂಸ್ಥೆ ಹಾಗೂ ಸಂತೋಷ ಲಾಡ ಫೌಂಡೇಶನ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಯೋಗ ರತ್ನ ಪ್ರಶಸ್ತಿ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಕ್ರೇನ್ ನ ಯೋಗಿನಿ ಒಲೈನಾ ತಾರಾಸೋವಾ ಅವರಿಗೆ ಪ್ರಶಸ್ತಿ ನೀಡಿ ಮಾತನಾಡಿದರು.

ಶ್ವಾಸ ಗುರು ಶ್ರೀ ವಚನಾನಂದ ಸ್ವಾಮೀಜಿ ಅವರು ಕರ್ನಾಟಕದಲ್ಲಿ ಯೋಗದ ದೊಡ್ಡ ಕ್ರಾಂತಿ ಮಾಡಿದ್ದಾರೆ. ಕೇವಲ ಯೋಗಿಗೆ ಸೀಮಿತವಾಗಿದ್ದ ಯೋಗವನ್ನು ಮನೆ ಮನೆಗೆ ತಲುಪಿಸುವ ಕೆಲಸ ವಚನಾನಂದ ಸ್ವಾಮೀಜಿ ಮಾಡುತ್ತಿದ್ದಾರೆ. ಯೋಗ ಜಗತ್ತಿನಲ್ಲಿ ಅವರ ದೊಡ್ಡ ಹೆಸರು ಇರುವುದರಿಂದ ಜಗತ್ತಿನ ಅವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಎಲ್ಲರಿಗಿಂತ ದೊಡ್ಡ ಯೋಗಿ ಶಿವ. ಶಿವನ ಜೊತೆ ಯಾವಾಗಲು ನಮ್ಮ ಯೋಗ ಸಂಬಂಧ ಇರುತ್ತದೆ. ನಾವು ಶ್ವಾಸ ತೆಗೆದುಕೊಂಡಾಗ ಅದು ಪರಮಾತ್ಮನ ಜೊತೆ ಸಂಪರ್ಕ ಹೊಂದುತ್ತದೆ. ಕಷ್ಟ ಪಡುವುದು ಯೋಗವಲ್ಲ. ಸಹಜವಾಗಿ  ಮಾಡುವುದೇ ಯೋಗ, ಟು ಲೀವ್ ವೆರಿ ಲೆಸ್ ಬದುಕು ಎಷ್ಟು ಸಣ್ಣದು ಮಾಡುತ್ತೇವೆಯೊ ಅದು ಸುಂದರವಾಗಿರುತ್ತದೆ ಎಂದರು.

ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳುತ್ತಾರೆ. ಅವರು ಸಾವಿನ ನಂತರ ಬದುಕುವವರು ಸಾಧಕರು ಎಂದು ಹೇಳುತ್ತಾರೆ. ಸ್ವಾಮೀಜಿಗಳು 500 ವರ್ಷ ಬದುಕಿದ್ದರು ಅಂದರೆ ಅವರ ವಿಚಾರಗಳು ಈಗಲು ಇವೆ. ಕಾಲ ಮಿತಿಯನ್ನು ಮೀರಿ ಸಾಧಿಸುವುದೇ ಯೋಗ ಎಂದರು.

ಸಚಿವ ಸಂತೋಷ್ ಲಾಡ್ ಪಾದರಸದಂತೆ ಓಡಾಡುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಬೆಂಬಲವಾಗಿ ನಿಂತು ಯೋಗ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗೋಣ‌ ಎಂದರು.

ಈ ಸಂದರ್ಭದಲ್ಲಿ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ವಾಸ ಗುರು ವಚನಾನಂದಸ್ವಾಮಿ, ಸಚಿವ ಸಂತೋಷ್ ಲಾಡ್, ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Leave a Reply