ವಿಜಯೇಂದ್ರ ಮತ್ತೊಂದು ಅವಧಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗುವುದು ನಿಕ್ಕಿ

12 months ago

ಬೆಂಗಳೂರು: ಭಿನ್ನಮತ ಅಪಸ್ವರ ಸೇರಿದಂತೆ ಹಲವು ಕಾರಣಗಳಿಂದ ಮುಂದೂಡಲಾಗಿದ್ದ ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿರುವ ಹೈಕಮಾಂಡ್ ಅದಕ್ಕೂ ಮುನ್ನ ನಾಯಕರ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಮುಂದಾಗಿದೆ.

ಬಿಜೆಪಿಯ ರಾಜ್ಯದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಪೂರ್ಣಗೊಂಡಿದೆ. ಇನ್ನೇನಿದ್ದರೂ ರಾಜ್ಯ ಅಧ್ಯಕ್ಷರ ಘೋಷಣೆ ಮಾತ್ರ ಬಾಕಿ ಇದೆ. ಬಹುತೇಕ ಎಲ್ಲ ಜಿಲ್ಲೆಗಳ ಅಧ್ಯಕ್ಷರ ಬೆಂಬಲ ಪಡೆದಿರುವ ಹಾಲಿ ಅಧ್ಯಕ್ಷ ವಿಜಯೇಂದ್ರ ಮತ್ತೊಂದು ಅವಧಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ಮುಂದಿನ ವಾರ ಬೆಂಗಳೂರಿಗೆ ಆಗಮಿಸಲಿರುವ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಮತ್ತು ಚುನಾವಣಾ ಮುಖ್ಯಸ್ಥ ಶಿವರಾಜ್ ಸಿಂಗ್ ಚೌಹಾಣ್ ಪಕ್ಷದ ಮುಖಂಡರ ಸಭೆ ಕರೆದು ಅಧಿಕೃತವಾಗಿ ವಿಜಯೇಂದ್ರ ಅವರ ಆಯ್ಕೆಯನ್ನು ಘೋಷಿಸಲಿದ್ದಾರೆ.

ಆದರೆ ಹಲವು ಕಾರಣಗಳಿಂದ ವಿಜಯೇಂದ್ರ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್ ಪರಸ್ಪರ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಇತ್ತೀಚೆಗೆ ವಿಜಯೇಂದ್ರ ಕರೆಯುವ ಯಾವುದೇ ಸಭೆಗೆ ಅಶೋಕ್ ಹಾಜರಾಗುತ್ತಿಲ್ಲ. ಪಕ್ಷದಲ್ಲಿ ಅತ್ಯಂತ ಹಿರಿಯರಾಗಿದ್ದು ವಿಧಾನಸಭೆಯ ವಿಪಕ್ಷದ ನಾಯಕರಾಗಿರುವ ತಮಗೆ ವಿಜಯೇಂದ್ರ ಸೂಪರ್ ಗೌರವ ಕೊಡುತ್ತಿಲ್ಲ ಹಾಗೂ ಪಕ್ಷ ಸಂಘಟನೆಯ ವಿಷಯದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳ ಬಗ್ಗೆ ತಮ್ಮ ಅಭಿಪ್ರಾಯ ಕೇಳುತ್ತಿಲ್ಲ ಎಂದು ಅಸಮಾಧಾನಗೊಂಡಿರುವ ಅಶೋಕ್ ಹೈಕಮಾಂಡ್ ಬಳಿ ತಮ್ಮ ಅಹವಾಲು ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಬ್ಬರಿಗೂ ದೆಹಲಿಗೆ ಬರುವಂತಹ ಸೂಚಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ‌ ಜೆ.ಪಿ.ನಡ್ಡಾ ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಇಬ್ಬರ ಜೊತೆಗೂ ಮಾತುಕತೆ ನಡೆಸಿದ್ದಾರೆ.

ವರಿಷ್ಠರ ಸೂಚನೆ ಮೇರೆಗೆ ಇಬ್ಬರು ದೆಹಲಿಗೆ ಆಗಮಿಸಿದ್ದು ಪ್ರತ್ಯೇಕವಾಗಿ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸುವ ಮುನ್ನ ಈ ಇಬ್ಬರು ನಾಯಕರನ್ನು ಮುಖಾಮುಖಿಯಾಗಿಸಿ ಗೊಂದಲಗಳನ್ನು ಪರಿಹರಿಸಲು ಹೈಕಮಾಂಡ್ ಮುಂದಾಗಿದೆ. 

ಜೊತೆಗೆ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸಂಘಟನಾತ್ಮಕ ವಿಷಯದಲ್ಲಿ ಕೈಗೊಳ್ಳಬೇಕಾದ ತೀರ್ಮಾನಗಳ ಕುರಿತಂತೆ ಹಲವು ಸೂಚನೆಗಳನ್ನು ನೀಡಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಕೋರ್ ಕಮಿಟಿ ನೇಮಕ ಸಮಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷದ ಹೈಕಮಾಂಡ್ ಸೂಚಿಸುವ ನಾಯಕರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿರುವುದಾಗಿ ಪಕ್ಷದ ಉನ್ನತಮೂಲಗಳಿಂದ ತಿಳಿದುಬಂದಿದೆ.

Leave a Reply