ಜೂನ್ 25ರಂದು ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ

10 months ago

ಜಾನಪದ ಕಲಾವಿದರಿಗೆ ಪ್ರೋತ್ಸಾಹ, ಸಹಕಾರ ಮತ್ತು  ನಗರದ ಜನತೆಗೆ ಜಾನಪದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

ಬೆಂಗಳೂರು: ಕನ್ನಡ ಜಾನಪದ ಪರಿಷತ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಜೂನ್ 25ನೇ ತಾರೀಖು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ.

ಈ ಕುರಿತು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ, ಜಿಲ್ಲಾಧ್ಯಕ್ಷ ಡಾ. ರಿಯಾಜ್ ಪಾಷ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರ.ನರಸಿಂಹಮೂರ್ತಿ, ಪದಾಧಿಕಾರಿಗಳಾದ ಅಶ್ವಥ್ ನಾರಾಯಣ, ಕೇಶವರಾಜ್,  ಅನಿತಾ, ವಾಣಿ, ಮುರಳೀಧರ, ರಾಮಾಂಜನೇಯ, ಕಣ್ಣಯ್ಯ ಮಾಹಿತಿ ನೀಡಿದರು.

ಎಸ್.ಬಾಲಾಜಿ ಮಾತನಾಡಿ, ಜಾನಪದ ಕಲೆ, ಪರಂಪರೆಯನ್ನು ನಗರದ ಪ್ರದೇಶದ ಜನರಿಗೆ ತಿಳಿಸಲು 25ನೇ ತಾರೀಖು ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಪ್ರಥಮ ಕನ್ನಡ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ. ಅದರಲ್ಲಿ  ರಾಷ್ಟ್ರ ಧ್ವಜ, ರಾಜ್ಯ ಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದರು.

ವಿವಿಧ ಕಲಾ ತಂಡಗಳ ಪ್ರದರ್ಶನ, ನಂತರ ಉದ್ಘಾಟನೆ, ‘ಸೋಬಾನ” ಸ್ಮರಣ ಸಂಚಿಕೆ ಬಿಡುಗಡೆ, ಪ್ರಶಸ್ತಿ ಪ್ರಧಾನ ಹಾಗೂ ಜಾನಪದ ಗೋಷ್ಠಿ, ಮಹಿಳಾ ಜಾನಪದ ಗೋಷ್ಠಿ, ಬಹಿರಂಗ ಅಧಿವೇಶನ, ಕೃತಿ ಬಿಡುಗಡೆ ಸಮಾರೋಪ ಸಮಾರಂಭ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 100 ಯುವಕ ಯುವತಿಯರಿಗೆ ರಾಜ್ಯ ಯುವ ಸಿರಿ ಪ್ರಶಸ್ತಿ, 60 ವಿದ್ವಾಂಸರಿಗೆ,  ಜೀ.ಶಂ.ಪ., ನಾಡೋಜ ಎಸ್ ಕೆ ಕರೀಂಖಾನ್, ಮಧುರಚೆನ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದರು.

ಜಾನಪದ ಸಮ್ಮೇಳನದಲ್ಲಿ ನಾಡಿನ ಹೆಸರಾಂತ ಮಠದ ಪೀಠಾಧಿಪತಿಗಳು, ಸಚಿವರು, ಶಾಸಕರು, ಸಾಹಿತಿಗಳು ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದರು.

ರಿಯಾಜ್ ಪಾಷ ಮಾತನಾಡಿ, ಬೆಂಗಳೂರು ನಗರ ಪ್ರದೇಶದಲ್ಲಿ ಪ್ರಥಮ ಬಾರಿಗೆ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ. ಮೊಬೈಲ್ ಸಂಸ್ಕೃತಿಯಿಂದ ಹೊರ ಬರಬೇಕು, ಜಾನಪದ ಕಲೆಯ ಕುರಿತು ಅರಿವು ಮೂಡಿಸಬೇಕು. ನಗರ ಪ್ರದೇಶದಲ್ಲಿಯೂ ಸಹ ಜಾನಪದ ಕುರಿತು ತಿಳಿಯಬೇಕು ಮತ್ತು ಜಾನಪದ ಕಲಾವಿದರಿಗೆ ಅವಕಾಶ ಸಿಗಬೇಕು ಎಂದು ಜಾನಪದ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದರು.

ರ.ನರಸಿಂಹಮೂರ್ತಿ ಮಾತನಾಡಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ಪರಿಷತ್ ಘಟಕದ ವತಿಯಿಂದ ರಾಜ್ಯಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ, ಸಮ್ಮೇಳನಾಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ರವರು ಭಾಗವಹಿಸಲಿದ್ದಾರೆ ಎಂದರು.

ನಾಡಿನ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಅರಿಯಬೇಕಾದರೆ ಜಾನಪದ ಕಲೆಯ ಬಗ್ಗೆ ತಿಳಿಯಬೇಕು ಮತ್ತು ಜಾನಪದ ಕಲೆ ಉಳಿದರೆ ನಾಡಿನ ಇತಿಹಾಸ ಉಳಿಯುತ್ತದೆ. ಆದ್ದರಿಂದ ಜಾನಪದ ಸಮ್ಮೇಳನ ಮತ್ತು ಜಾನಪದ ಕುರಿತು ಕೃತಿ ಬಿಡುಗಡೆ ಕಾರ್ಯಕ್ರಮವಿದೆ. ಸಚಿವರು, ಶಾಸಕರು, ಗಣ್ಯ ಮಹನೀಯರು ಭಾಗವಹಿಸಲಿದ್ದಾರೆ ಎಂದರು.

Leave a Reply