ಕದ್ದ ಚಿನ್ನವನ್ನು ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದವರ ಬಂಧನ

11 months ago

ಬೆಂಗಳೂರು: ಮನೆಗಳಿಗೆ ಕನ್ನ ಹಾಕಿ ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿ ಮಾಡಿ ಮಾರಾಟ ಮಾಡುತ್ತಿದ್ದ ಮುಂಬೈನ ರಿಕ್ಷಾ ಚಾಲಕ ಸೇರಿ ಇಬ್ಬರನ್ನು ಬಂಧಿಸಿರುವ ಬೆಂಗಳೂರಿನ ಯಲಹಂಕ ಪೊಲೀಸರು 16 ಲಕ್ಷ ಮೌಲ್ಯದ 180 ಗ್ರಾಂ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ.

ಮಹಾರಾಷ್ಟ್ರದ ಮುಂಬೈನ ಜೇಮ್ಸ್ ಜಪ್ರಿನ್ (39)ಹಾಗೂ ಸಲಾವುದ್ದೀನ್ ಶೇಖ್(29) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ಮಹಾರಾಷ್ಟ್ರದ, ಓಶಿವಾರದಲ್ಲಿನ ತಮ್ಮ ವಾಸದ ಮನೆಯಲ್ಲಿಟ್ಟಿದ್ದ 175 ಗ್ರಾಂ ತೂಕದ15 ಚಿನ್ನದ ಗಟ್ಟಿಗಳು, 5 ಗ್ರಾಂ ಚಿನ್ನದ ಉಂಗುರಗಳು ಸೇರಿ 180 ಗ್ರಾಂ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಇದರ ಮೌಲ್ಯ 16 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ.

ಯಲಹಂಕ ಪೊಲೀಸ್ ಠಾಣಾ ಸರಹದ್ದಿನ, ಪ್ರಕೃತಿನಗರದ ಅಪಾರ್ಟಮೆಂಟ್‍ ನ ವೇಣುಪ್ರಸಾದ್ ಅವರು ಕಳೆದ ಫೆ.6 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋದವರು ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಫ್ಲಾಟ್‍ಗೆ ಬಂದು ನೋಡಿದಾಗ ಫ್ಲಾಟ್ ‍ನ ಬಾಗಿಲು ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ 250 ಗ್ರಾಂ ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು ಹಾಗೂ ನಗದನ್ನು ಕಳವು ಮಾಡಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿದ ಯಲಹಂಕ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿ ಕಲೆಹಾಕಿ, ಗುಜರಾತ್ ನ ಸೂರತ್ ಸಿಟಿ ಸೆಂಟ್ರಲ್ ಜೈಲಿನಲ್ಲಿದ್ದ ಅರೋಪಿಗಳಿಬ್ಬರನ್ನು ಬಾಡಿವಾರೆಂಟ್ ಮೇಲೆ ಕಳೆದ ಏ.29 ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.

ಆರೋಪಿಗಳಿಬ್ಬರನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಯನ್ನಾಗಿಸಿ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಸೂರತ್ ಸಿಟಿ ಸೆಂಟ್ರಲ್ ಜೈಲಿಗೆ ಬಿಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.

Leave a Reply