ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆಗೆ ಚಾಲನೆ ನೀಡಲಾಗುವುದು: ಕೆ ಹೆಚ್‌ ಮುನಿಯಪ್ಪ

1 year ago

ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿದ ಬಳಿಕ ಬಿಪಿಎಲ್‌ ಪಡಿತರ ಚೀಟಿ ಪರಿಷ್ಕರಣೆಗೆ ಚಾಲನೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌ ಮುನಿಯಪ್ಪ ತಿಳಿಸಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಎಂಟಿಬಿ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪರಿಷ್ಕರಣೆಯ ನಂತರ ಅನರ್ಹರನ್ನು ಪಟ್ಟಿಯಿಂದ ತೆಗದುಹಾಕಿ ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಸೌಲತ್ತು ನೀಡಲು ನಮ್ಮ ಸರ್ಕಾರದ ಬದ್ದವಿದೆ ಎಂದರು.

ಅರ್ಹರಿಗೆ ಸರ್ಕಾರದ ಸವಲತ್ತು ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅನರ್ಹರನ್ನು ಪಟ್ಟಿಯಿಂದ ಮುಲಾಜಿಲ್ಲದೆ ತೆಗೆದುಹಾಕಲಾಗುವುದು. ನಿಜವಾದ ಫಲಾನುಭವಿಗಳು ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿರುವ ರಾಜ್ಯಗಳ ಫೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆ. ಕೆಲವು ಅನರ್ಹರು ಪಟ್ಟಿಗೆ ಸೇರ್ಪಡೆಯಾಗಿದ್ದರಿಂದಲೇ ಇದರ ಸಂಖ್ಯೆ ಹೆಚ್ಚಳವಾಗಿದೆ. ಇದರ ಪರಿಣಾಮ ನಿಜವಾದ ಫಲಾನುಭವಿಗಳಿಗೆ ಸವಲತ್ತು ಸಿಗುತ್ತಿಲ್ಲ. ಇದಕ್ಕೆ ಶೀಘ್ರದಲ್ಲೇ ಕಡಿವಾಣ ಹಾಕಲಾಗುವುದು ಎಂದರು.

ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್‌ ಪಡಿತರ ಚೀಟಿಯನ್ನು ಹೊಂದಲು ನಮ್ಮ ನಿಯಮಗಳ ಪ್ರಕಾರ ಅವಕಾಶವಿರುವುದಿಲ್ಲ. ಒಂದು ವೇಳೆ ಮಕ್ಕಳಿಂದ ತಂದೆ- ತಾಯಿಗಳು ಬೇರ್ಪಟ್ಟಿದ್ದರೆ, ಅಂತಹವರು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲನೆ ನಡೆಸಿ ಬಿಪಿಎಲ್‌ ಕಾರ್ಡ್‌ಗಳನ್ನು ಪಡೆಯಬಹುದು ಎಂದರು.

Leave a Reply