ಅಧಿಕಾರಿಗಳು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು: ರನ್ಯಾ ರಾವ್

1 year ago

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡಿದ ಆರೋಪದಲ್ಲಿ ಸಿಕ್ಕಿ ಬಿದ್ದಿರುವ ಚಿತ್ರನಟಿ ರನ್ಯಾ ರಾವ್ ಇದೀಗ ಕಂದಾಯ ಗುಪ್ತ ಚರ (ಡಿ.ಆರ್.ಐ)ವಿಭಾಗದ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಡಿಆರ್‌ಐ ಯ ಹೆಚ್ಚುವರಿ ಮಹಾನಿರ್ದೇಶಕರಿಗೆ ಸುದೀರ್ಘ ಪತ್ರವನ್ನು ಬರೆದಿರುವ ಅವರು ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.

ಡಿಆರ್‌ಐ ಅಧಿಕಾರಿಗಳು ತನಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ, ಆಹಾರವನ್ನು ನಿರಾಕರಿಸಿದ್ದಾರೆ ಮತ್ತು ಖಾಲಿ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲು ಮುಖ್ಯ ಸೂಪರಿಂಟೆಂಡೆಂಟ್ ಮೂಲಕ ಕಳುಹಿಸಲಾದ ಪತ್ರದಲ್ಲಿ, ವಿಮಾನದೊಳಗೆ ತನ್ನನ್ನು ಬಂಧಿಸಲಾಯಿತು ಮತ್ತು ವಿವರಿಸಲು ಅವಕಾಶ ನೀಡದೆ ಡಿಆರ್‌ಐ ತನ್ನನ್ನು ವಶಕ್ಕೆ ತೆಗೆದುಕೊಂಡಿತು ಎಂದು ರನ್ಯಾ ರಾವ್ ಹೇಳಿಕೊಂಡಿದ್ದಾರೆ.

ಪದೇಪದೇ ಹಲ್ಲೆ ನಡೆಸುತ್ತಿದ್ದರೂ, ಡಿಆರ್‌ಐ ಅಧಿಕಾರಿಗಳು ಸಿದ್ಧಪಡಿಸಿದ ಹೇಳಿಕೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ, ತೀವ್ರ ಒತ್ತಡದಲ್ಲಿ ಅಂತಿಮವಾಗಿ ಸುಮಾರು 50-60 ಟೈಪ್ ಮಾಡಿದ ಪುಟಗಳು ಮತ್ತು 40 ಖಾಲಿ ಬಿಳಿ ಹಾಳೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ರನ್ಯಾ ರಾವ್ ಹೇಳಿದ್ದಾರೆ.

ನನ್ನನ್ನು ಬಂಧಿಸಿದ ಕ್ಷಣದಿಂದ ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ, ನಾನು ಗುರುತಿಸಬಲ್ಲ ಅಧಿಕಾರಿಗಳು ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದರು, 10-15 ಬಾರಿ ಕಪಾಳಮೋಕ್ಷ ಮಾಡಿದರು. ಪದೇ ಪದೇ ಹಲ್ಲೆ ನಡೆಸಲಾಗಿದ್ದರೂ, ಅವರು ಸಿದ್ಧಪಡಿಸಿದ ಹೇಳಿಕೆಗಳಿಗೆ ಸಹಿ ಹಾಕಲು ನಾನು ನಿರಾಕರಿಸಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಮಾರ್ಚ್‌ 3ರ ಸಂಜೆ 6.45ರಿಂದ ಮಾರ್ಚ್‌ 4ರ ಸಂಜೆ 7.50ರವರೆಗೆ ತನಗೆ ವಿಚಾರಣೆ ನೆಪದಲ್ಲಿ ಆಹಾರ ನೀಡದೆ, ನಿದ್ದೆ ಮಾಡಲು ಬಿಡದೆ ಹಿಂಸಿಸಿದ್ದಾರೆ ಎಂದು ರನ್ಯಾ ರಾವ್ ದೂರಿದ್ದಾರೆ.

Leave a Reply