ಚಿತ್ರದುರ್ಗ: ಅವರು ಹಿಜಬ್ ಹಾಕಿಕೊ ಎನ್ನುತ್ತಾರೆ, ಇವರು ಬೇಡ ಎನ್ನುತ್ತಾರೆ. ನಮಗೆ ಏನು ಬೇಕೋ ಅದನ್ನು ಸ್ವೀಕರಿಸುತ್ತೇವೆ ಎಂದು ನಾವು ನಿರ್ಧರಿಸಬೇಕು ಎಂದು ಚಿಂತಕಿ ಡಾ.ಕೆ.ಷರೀಫಾ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಪರಿಶಿಷ್ಟರು, ಅಲೆಮಾರಿ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳಾ ಸಮುದಾಯದ ತಲ್ಲಣಗಳು ವಿಷಯದ ಕುರಿತು ಮಾತಾಡಿದ ಅವರು, ಹಿಜಬ್ ವಿಷಯದಲ್ಲಿ ಕೋರ್ಟ್ ನಿರ್ದೇಶವನ್ನು ಪಾಲಿಸುವುದಿಲ್ಲ ಎಂದು ಕೆಲವರು ಹೇಳಿದರು. ಇದನ್ನು ವಿರೋಧಿಸಿದವರು ಕೋರ್ಟ್ ನಿರ್ದೇಶವನ್ನು ಏಕೆ ಪಾಲಿಸುತ್ತಿಲ್ಲ ಎಂದರು. ಇವರು ಎಷ್ಟನ್ನು ಇದುವರೆಗೆ ಪಾಲಿಸಿದ್ದಾರೆ? ಏಕೆಂದರೆ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡುವುದಿಲ್ಲ ಎಂದು ಧ್ವಂಸ ಮಾಡಲಿಲ್ಲವೇ? ಕೇರಳದಲ್ಲಿ ಮಹಿಳೆಯರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಿ ಎಂದರೆ ನೀವು ಮಾಡಿದ್ದೇನು ಎಂದರು.
ಮಹಿಳಾ ಮೀಸಲಾತಿ ವಿಷಯ ಕಳೆದ 25 ವರ್ಷಗಳಿಂದ ಜಾರಿಯಾಗುತ್ತಿಲ್ಲ. ಈಗ ಅಧಿಕಾರದಲ್ಲಿರುವ ಪಕ್ಷ ಯಾಕೆ ಏನನ್ನೂ ಮಾಡುತ್ತಿಲ್ಲ? ಹಿಜಬ್, ಹಾಲಾಲ್, ವ್ಯಾಪಾರ ನಿರ್ಬಂಧ ವಿಧಿಸಲಾಯಿತು. ಇಂತಹ ಒಡೆಯುವ ಕೆಲಸವನ್ನು ಯಾಕೆ ಮಾಡುತ್ತಿದ್ದೀರಿ? ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕವಾಗಬೇಕು. ಕೇಂದ್ರದ ಒತ್ತಡಕ್ಕೆ ಇಲ್ಲಿ ಒಡೆಯುವ ಕೆಲಸ ಆಗಬಾರದು ಎಂದರು.
ಕೊರೊನಾ ಅವಧಿಯಲ್ಲಿ ತಬ್ಲೀಘಿಗಳು ಎಂದು ಜನರಲ್ಲಿ ಒಡಕುಮೂಡಿಸಿದರು. ಆದರೆ ಒಡೆಯುವ ಕೆಲಸವಲ್ಲ, ಸೌಹಾರ್ದತೆಯನ್ನು ಮೂಡಿಸುವ ಕೆಲಸ ಆಗಬೇಕು. ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ರಾಜಕೀಯದಿಂದ ದೂರವಿಡಲಾಗುತ್ತಿದೆ ಎಂದರು.
ಮಹಿಳೆ ತನ್ನ ದುಡಿಮೆಯ ಲೆಕ್ಕವನ್ನು ಕೊಟ್ಟರೆ ಪುರಾತನ ಕಳ್ಳತನವೊಂದು ಬಯಲಾಗುತ್ತದೆ. ಮಹಿಳೆಗೆ ತಾಯ್ತನ ಮೊದಲಾದ ವಿಷಯಗಳನ್ನು ಆರೋಪಿಸಲಾಗಿದೆ. ಅಜ್ಞಾನದಿಂದ ಬೆಳಕಿನೆಡೆಗೆ ನಾವು ನಡೆಯಬೇಕು. ಅಂಬೇಡ್ಕರ್ ಹಿಂದೂ ಕೋಡ್ ಬಿಲ್ ವಿರೋಧಿಸುತ್ತಾರೆ. ಆಗ ನನಗೆ ಕಾನೂನು ಮಂತ್ರಿ ಸ್ಥಾನ ಬೇಡ ಎಂದು ರಾಜೀನಾಮೆ ನೀಡಿ ಹೊರಬಂದವರು ಅಂಬೇಡ್ಕರ್. ಆಸ್ತಿ ಹಕ್ಕು, ವಿಧವಾ ವಿವಾಹ ಪುನರ್ವಿವಾಹ ಮೊದಲಾದ ಹಕ್ಕುಗಳನ್ನು ಅವರು ಮಹಿಳೆಯರಿಗೆ ಕೊಡಿಸಿದರು. ಅವರಿಂದಲೇ ನಮಗೆ ಶಿಕ್ಷಣ, ಆಸ್ತಿ ಸಿಗುತ್ತಿದೆ ಎಂದರು.
ಕೊರೊನಾ ಕಾಲದಲ್ಲಿ ಮಕ್ಕಳೆ ಮುಟ್ಟದಂತಹ ಸಮಯದಲ್ಲಿ ಮುಸ್ಲಿಮರು ಅಂತ್ಯಸಂಸ್ಕಾರ ಮಾಡಿದರು. ಆದರೆ, ಇವರು ಗೋಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಗಳನ್ನು ಜಾರಿಗೆ ತಂದರು. ನಾವೆಲ್ಲ ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ನಮ್ಮ ಮೇಲಿನ ದಾಳಿಗಳ ಕುರಿತು ಅರಿವು ಮೂಡುತ್ತದೆ ಎಂದರು.



