ಪ್ರಜಾಪ್ರಭುತ್ವದ ಕಾವಲುನಾಯಿಯಾಗಿದ್ದ ಮಾಧ್ಯಮಗಳು ಪ್ರಭುತ್ವದ ಸಾಕುನಾಯಿಗಳಾಗಿವೆ: ಡಾ.ಜೆ.ಎಸ್.ಪಾಟೀಲ್

4 years ago

ಚಿತ್ರದುರ್ಗ: ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಮಾಧ್ಯಮ ಇದೆ. ಇಂದಿನ ಪರಿಸ್ಥಿತಿ ಸೃಷ್ಟಿಸಿಕೊಂಡಿರುವುದು ಸ್ವತಃ ಮಾಧ್ಯಮವೇ ಎಂದು ಪತ್ರಕರ್ತ ನವೀನ್ ಸೂರಿಂಜೆ ಹೇಳಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಮಾತಾಡಿದ ಅವರು, ಈ ಹಿಂದೆ ಮಾಧ್ಯಮಗಳನ್ನು ಪ್ರಭುತ್ವ ನಿಯಂತ್ರಿಸುತ್ತಿತ್ತು. ಆದರೆ ಇಂದು ಮಾಧ್ಯಮಗಳು ಪ್ರಭುತ್ವದ ಹೊಗಳುವಿಕೆಯಲ್ಲಿ ನಿರತವಾಗಿವೆ ಎಂದರು.

ಪ್ರಧಾನಿ ವಿದೇಶಕ್ಕೆ ಹೊರಟಾಗ ಹಾವು ಕೂಡ ಹೋಯಿತು ಎಂದು ಹೇಳುವ ಬಕೆಟ್ ಹಿಡಿಯುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಇದನ್ನು ಸರ್ಕಾರ ಮಾಡಿ ಎಂದಿರಲಿಲ್ಲ. ಸರ್ಕಾರವನ್ನು ಓಲೈಸಲು ಮಾಧ್ಯಮಗಳು ನೋಟ್ ಬ್ಯಾನ್ ಸಮಯದಲ್ಲಿ ಚಿಪ್ ಇದೆ ಎಂದು ವರದಿ ಮಾಡಿದವು ಎಂದರು.

ಹಿಜಬ್, ಹಲಾಲ್, ಮುಸ್ಲಿಮರು ಮಾರಾಟ ಮಾಡಬಾರದು, ದೇವಸ್ಥಾನದ ವಿಗ್ರಹಗಳನ್ನು ಮುಸ್ಲಿಮರು ಕೆತ್ತಬಾರದು ಎಂದು ಆರ್ ಎಸ್ ಎಸ್ ಕಚೇರಿಯಲ್ಲಿ ನಿರ್ಧಾರವಾಗಲಿಲ್ಲ. ಬದಲಾಗಿ ಸುದ್ದಿ ಸಂಸ್ಥೆಗಳಲ್ಲಿ ಇದು ರೂಪುಗೊಂಡಿತು ಎಂದರು.

ಮುಸ್ಲಿಮರು ಜಾತ್ರೆಗಳಲ್ಲಿ ಮಾರಾಟಮಾಡಬಾರದು ಎಂಬ ವಿಷಯದ ವಿರುದ್ಧ ಸುದ್ದಿಯಾಗಬೇಕಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಸುದ್ದಿಗಳು ಪ್ರಸಾರವಾದವು. ಹಿಂದೆ ಮಡೆಸ್ನಾನ ಸಮಯದಲ್ಲಿ ಮಾಧ್ಯಮಗಳು ವರದಿ ಮಾಡಿದಂತೆ ಮಾಡಬೇಕು ಎಂದರು.

ಮುಸ್ಲಿಂ ಸಮುದಾಯದ ರಾಜರು ಹಿಂದು ದೇಗುಲಗಳಿಗೆ ಎಷ್ಟು ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಚರ್ಚಿಸಬೇಕಾಗಿತ್ತು. ಆದರೆ ಸಂಪಾದಕರೇ ಇಂದು ನಾನು ಹಿಂದು ಎಂದು ಹೇಳಿಕೊಂಡ ಉದಾಹರಣೆ ಇವೆ ಎಂದರು.

ಹಿಂದೆ ನೈತಿಕತೆಯನ್ನು ಸಂಪಾದಕರು ಹೊಂದಿದ್ದರು. ಇಂದು ಜಾತ್ಯಾತೀತ ಸಿದ್ಧಾಂತ, ಮಾನವೀಯತೆ ವಿಷಯಗಳ ಕುರಿತು ಪತ್ರಕರ್ತರಿಗೆ ತರಬೇತಿ ಕೊಡಬೇಕಿದೆ. ನಾಳೆ ಮಾಧ್ಯಮಗಳಿಗೆ ಮುಸ್ಲಿಮರ ಕಂಪನಿಗಳ ಜಾಹಿರಾತು ಪ್ರಸಾರ ಮಾಡಬೇಡಿ ಎಂದು ಒತ್ತಡ ಹಾಕಬಹುದು ಎಂದರು.

ಗುರೂಜಿ, ಜ್ಯೋತಿಷಿಗಳ ಕಾರ್ಯಕ್ರಮ ಕುಕ್ಡ್ ಸ್ಟೋರಿ. ಇದೇ ರೀತಿ ಮಾತಾಡಬೇಕು ಎಂದು ಡೆಸ್ಕ್ ನಲ್ಲಿ ಸಿದ್ಧಮಾಡಿ ಕೊಡಲಾಗುತ್ತದೆ. ಇದೇ ರೀತಿ ರಾಜಕೀಯ ವಿಷಯಗಳನ್ನು ಸೆಟ್ ಮಾಡಲಾಗುತ್ತದೆ ಎಂದರು.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇವೇ ಮಾಧ್ಯಮಗಳು ಆವರಿಸಿವೆ. ಇಂದು ಮಾಧ್ಯಮಗಳಿಗೆ ಅನೇಕ ಸವಾಲುಗಳು ಎದುರಾಗಿವೆ. ಗಣಿಗಾರಿಕೆ, ಆದಿವಾಸಿಗಳು, ಅಕ್ರಮಗಳ ವಿರುದ್ಧ ವರದಿ ಮಾಡಿದವರ ವಿರುದ್ಧ ಕೇಸ್ ಗಳನ್ನು ಹಾಕುವ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದರು.

ಬಿಜೆಪಿ ಸರ್ಕಾರ ನನ್ನನ್ನು ಬಂಧಿಸಿ, ರಾತ್ರಿ ಹನ್ನೊಂದು ಗಂಟೆಗೆ ಜಡ್ಜ್ ಮುಂದೆ ಹಾಜರುಪಡಿಸಿದರು. ಆಗ ನ್ಯಾಯವಾದಿ ಇರಲಿಲ್ಲ. ಆಗ ನನ್ನ ವರದಿಯ ಕಾರಣದಿಂದ ಅಕ್ರಮ ಬಯಲಾಗಿ ಹಲವರು ಬಂಧನಕ್ಕೆ ಒಳಗಾಗಿದ್ದಾರೆ ಎಂದೆ. ಆದರೆ ಅದನ್ನು ಕೇಳಿಸಿಕೊಳ್ಳುವ ಕೆಲಸವನ್ನು ಮಾಡಲಿಲ್ಲ ಎಂದರು.

ಸರ್ಕಾರದ ಮರ್ಜಿಯಲ್ಲಿರುವ ಪೊಲೀಸರು ಸರ್ಕಾರದ ವಿರುದ್ಧ ಹೇಳಿಕೆ ಕೊಡುವವರ ವಿರುದ್ಧ ಅರ್ಬನ್ ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಇದರಿಂದಾಗಿ ಮಾಧ್ಯಮಗಳು ಕೆಟ್ಟ ಪರಿಸ್ಥಿತಿಯಲ್ಲಿವೆ. ಮಾಧ್ಯಮಗಳು ಬದಲಾಗದಿದ್ದರೆ ಅಂತಿಮವಾಗಿ ಮಾಧ್ಯಮಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯ ಬಲಪಂಥೀಯರು ಹಾಳುಮಾಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತಾಡಿದ ಸಂಶೋಧಕ ಡಾ.ಅರುಣ್ ಜೋಳದ ಕೂಡ್ಲಿಗಿ, ಇಂದು ಬಹಳ ಮುಖ್ಯವಾಗಿ ಚರ್ಚೆಯಾಗಬೇಕಾದ ಮತ್ತು ಎಲ್ಲರೂ ಕೇಳಬೇಕಾದ ವಿಷಯ ಇದಾಗಿದೆ. ಇದನ್ನು ಹೆಚ್ಚಾಗಿ ಯುವಕರಿಗೆ ತಲುಪಿಸಬೇಕಿದೆ ಎಂದರು.

ಸಾಮಾಜಿಕ ಜಾಲತಾಣ ಪ್ರತ್ಯೇಕ ಜಗತ್ತಾಗಿ ಪರಿವರ್ತನೆ ಆಗಿದೆ. ಶೇ. ೬೨ರಷ್ಟು ಜನ ಜಾಲತಾಣಗಳಲ್ಲಿ ಇದ್ದಾರೆ. ಡಿಜಿಟಲ್‌ ಲೋಕ, ಸೈಬರ್ ಲೋಕವಾಗಿದೆ. ಸಿಟಿಜನ್ಸ್ ಎಂದು ಕರೆಯುವಂತೆ ಅಂತರ್ಜಾಲ ಗೊತ್ತಿರುವ ಬಳಕೆದಾರರನ್ನು ನೆಟಿಜೆನ್ಸ್ ಎಂದು ಕರೆಯಲಾಗುತ್ತದೆ ಎಂದರು.

ಬಂಧುತ್ವದ ಭಾವನೆಗಳನ್ನು ಜಾಲತಾಣಗಳಲ್ಲಿ ಬಳಸಲಾಗುತ್ತದೆ. ವಿರುದ್ಧ ಲಿಂಗವನ್ನು ಆಕರ್ಷಿಸಲು ಇದು ಬಳಕೆಯಾಗುತ್ತಿದೆ. ಇದನ್ನು ದೊಡ್ಡ ಮಾರುಕಟ್ಟೆ ಮಾಡಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಹೇಳಲಾಗುತ್ತದೆ. ಆದರೆ ನನಗೆ ಹಾಗೆ ಅನಿಸಿದರೂ ಅದರ ಫಲಿತಾಂಶ ಶೂನ್ಯ ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತಾಡಿದ ಚಿಂತಕ ಡಾ.ಜೆ.ಎಸ್.ಪಾಟೀಲ್ ಮಾತನಾಡಿ, ಮಾಧ್ಯಮಗಳಿಗೆ ಅನೇಕ ಸವಾಲುಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಹಿಡಿರುವ ವಿಕೃತಿಯ ಮತ್ತು ಅಡ್ಡ ಹಾದಿಗಳ ಕುರಿತು ಗೋಷ್ಠಿಯಲ್ಲಿ ಚರ್ಚೆಯಾಗಿದೆ ಎಂದರು.

ಮೂರು ಅಂಗಗಳ ನಡುವೆ ನಾಲ್ಕನೇ ಅಂಗವೆಂದು ಕರೆಯುತ್ತಿದ್ದರು. ಪ್ರಜಾಪ್ರಭುತ್ವದ ಕಾವಲುನಾಯಿಯಾಗಿದ್ದ ಮಾಧ್ಯಮಗಳು ಇಂದು ಪ್ರಭುತ್ವದ ಸಾಕುನಾಯಿಗಳಾಗಿ ಪರಿವರ್ತನೆ ಹೊಂದಿವೆ ಎಂದರು.

ಬಲಪಂಥೀಯ ಸಂಘಟನೆಗಳು ಉತ್ಪಾದನೆ ಮಾಡಿ, ಅದನ್ನು ವ್ಯವಸ್ಥಿತವಾಗಿ ಹಂಚುತ್ತಾರೆ. ಅದು ವಾಟ್ಸಾಪ್ ಯುನಿವರ್ಸಿಟಿ ಯಲ್ಲಿ ಹರಡುತ್ತದೆ. ನಮ್ಮಂತಹವರು ಬರೆದ ಪೋಸ್ಟ್ ಗಳು ಅವರಲ್ಲಿ ತೀವ್ರ ತಳಮಳವನ್ನು ಹುಟ್ಟಿಸುತ್ತದೆ. ನಾವು ಸಂಘಟಿತರಾಗದೆ ಇದ್ದಾಗಲೇ ಅವರು ಭಯಪಡುತ್ತಾರೆ ಎಂದರು.

ಬಸವ, ಕುವೆಂಪು ನೆಲದಲ್ಲಿ ಮನುವಾದಿಗಳು ಸೊಕ್ಕಲು ಸಿಕ್ಕಿರುವ ಅವಕಾಶವನ್ನು ಇಲ್ಲವಾಗಿಸಲು ಮಾನವ ಬಂಧುತ್ವ ವೇದಿಕೆ ಕೆಲಸಮಾಡಬೇಕು ಎಂದರು.

Leave a Reply