ಮಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಔಷಧಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ CPIM ಕೇಂದ್ರ ಸಮಿತಿ ಕರೆಯ ಮೇರೆಗೆ ಇಂದು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಬೆಲೆ ಏರಿಕೆಗೆ ಕಾರಣವಾದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ CPIM ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ವಿಪರೀತ ಕಡಿಮೆಯಾಗಿದ್ದರೂ ಪೆಟ್ರೋಲ್ ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡುವ ಬದಲು ವಿಪರೀತ ತೆರಿಗೆ ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಸಂಕಷ್ಟ ತಂದೊಡ್ಡಿದೆ. ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಕೂಡ ಕೈಗೆಟುಕದ ರೀತಿಯಲ್ಲಿ ಹೆಚ್ಚಾಗಿ ಬದುಕು ಸಾಗಿಸಲಾರದ ಪರಿಸ್ಥಿತಿ ಉದ್ಭವವಾಗಿದೆ. ಅಧಿಕಾರಕ್ಕೇರುವ ಮೊದಲು ಬೆಲೆಯೇರಿಕೆಯ ಬಗ್ಗೆ ಭಾರೀ ಬೊಗಳೆ ಬಿಟ್ಟ ಬಿಜೆಪಿಗರು ಇಂದು ಅಧಿಕಾರದಲ್ಲಿದ್ದು ಬೆಲೆಯೇರಿಕೆಯ ಬಗ್ಗೆ ತುಟಿಪಿಟಿಕ್ ಎನ್ನುತ್ತಿಲ್ಲ. ಬದಲಿಗೆ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಜಾತಿ, ಧರ್ಮ ದೇವರುಗಳ ಹೆಸರಿನಲ್ಲಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು ನೀಚ ರಾಜಕೀಯ ಮಾಡುತ್ತಿದೆ ಎಂದರು
CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಉದ್ಯೋಗ ನಷ್ಟ, ನಿರುದ್ಯೋಗ ಸಮಸ್ಯೆಯಿಂದ ಕಂಗಾಲಾದ ದೇಶದ ಜನತೆ ವಿಪರೀತ ತೆರಿಗೆ, ಜಿ ಎಸ್ ಟಿಯಂತಹ ಕ್ರಮಗಳಿಗೆ ಸೋತು ಸುಣ್ಣವಾಗಿದೆ. ಮತ್ತೆ ವಾಹನ ತಿದ್ದುಪಡಿ ಕಾಯಿದೆಯ ಹೆಸರಿನಲ್ಲಿ ರಸ್ತೆಯಲ್ಲಿ ನಿಂತು ಹಾಡುಹಗಲಲ್ಲೇ ದರೋಡೆ ಮಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು
CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸದಾಶಿವದಾಸ್ ಮಾತನಾಡಿ, ಕೊರೋನಾ ಸಂಕಷ್ಟದ ಕಾಲದಲ್ಲಿ ದೇಶದ ಜನತೆ ತೀರಾ ಸಂಕಷ್ಟದ ಲ್ಲಿದ್ದರೂ ದೇಶದ ಕಾರ್ಪೋರೇಟ್ ಕಂಪೆನಿಗಳು ವಿಪರೀತವಾಗಿ ಲಾಭ ಗಿಟ್ಟಿಸುವ ಹಿಂದೆ ಕೇಂದ್ರ ಸರಕಾರದ ಹುನ್ನಾರ ಅಡಗಿದೆ ಎಂದರು.
ಪ್ರತಿಭಟನೆಯಲ್ಲಿ CPIM ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ, ಬಿ.ಕೆ.ಇಮ್ತಿಯಾಜ್, ಮನೋಜ್ ವಾಮಂಜೂರು, ಮಹಾಬಲ ದೆಪ್ಪಲಿಮಾರ್, ನೋಣಯ್ಯ ಗೌಡ, ಭಾರತಿ ಬೋಳಾರ, CITU ನಾಯಕರಾದ ಸಂತೋಷ್ ಆರ್.ಎಸ್.ಮುಸ್ತಫಾ, ನಾಗೇಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.



