ಬೆಂಗಳೂರು: ಬಿಬಿಎಂಪಿ ಬೇಜವಾಬ್ದಾರಿ, ನಿರ್ಲಕ್ಷ್ಯ, ಅವೈಜ್ಞಾನಿಕ ಕಸದ ವಿಲೇವಾರಿ ಹಾಗೂ ಅಸಮರ್ಪಕ ರಸ್ತೆ, ಚರಂಡಿ ನಿರ್ವಹಣೆಯಿಂದ ಜನರ ಜೀವಕ್ಕೆ ಕಿಮ್ಮತ್ತಿಲ್ಲದಾಗಿದೆ. ಹೆಬ್ಬಾಳದ ಮೇಲುಸೇತುವೆ ಬಳಿ ಕಸದ ಲಾರಿಗೆ ಬಾಲಕಿ ಬಲಿಯಾಗಿದ್ದಾಳೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಬಾಲಕಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಭಾನುವಾರದಂದು ಬೆಂಗಳೂರಿನಲ್ಲಿ ಸುರಿದ ಮಳೆಯಿಂದ ಆ ಫ್ಲೈ ಓವರ್ ಅಂಡರ್ ಪಾಸ್’ನಲ್ಲಿ ನೀರು ತುಂಬಿತ್ತು. ಹೀಗಾಗಿ ಇಂದು ಮಕ್ಕಳು ಅಂಡರ್ ಪಾಸ್ ನಲ್ಲಿ ಹೋಗದೆ ರಸ್ತೆ ಮೂಲಕ ದಾಟುತ್ತಿದ್ದರು. ಆ ಸಂದರ್ಭದಲ್ಲಿ ದುರಂತ ಘಟಿಸಿದೆ ಎಂದಿದ್ದಾರೆ.
ಸ್ವತಃ ಗೌರವಾನ್ವಿತ ಹೈ ಕೋರ್ಟ್ ಛೀಮಾರಿ ಹಾಕಿದ್ದರೂ, ಎಂಜಿನಿಯರುಗಳನ್ನು ಜೈಲಿಗೆ ಅಟ್ಟುವುದಾಗಿ ಎಚ್ಚರಿಕೆ ನೀಡಿದ್ದರೂ ಎಮ್ಮೆ ಚರ್ಮದ ಪಾಲಿಕೆ ಪಾಠ ಕಲಿತಿಲ್ಲ. ಬಿಬಿಎಂಪಿ ಆಟಗಳಿಗೆ ಸೀಟಿ ಹೊಡೆಯುತ್ತಾ, ಅಲ್ಲಿನ ಅದಕ್ಷ ಅಧಿಕಾರಿಗಳನ್ನು ಪೊರೆದು ಪೋಷಣೆ ಮಾಡುತ್ತಿರುವ ಸರಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲವಾಗಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ನಗರದ ಗೌರವ, ಪ್ರತಿಷ್ಠೆ ಹಾಳು ಮಾಡುತ್ತಿರುವ ಭ್ರಷ್ಟ ಅಧಿಕಾರಿಗಳನ್ನು ಅಲ್ಲಿಂದ ಹೊರಹಾಕಿ ಬಿಬಿಎಂಪಿಯನ್ನು ಮೊದಲು ಸ್ವಚ್ಚಗೊಳಿಸಬೇಕಿದೆ. ಅಲ್ಲಿಂದಲೇ ಬೆಂಗಳೂರಿನ ಸ್ವಚ್ಛಚತೆ ಆರಂಭವಾಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದಿದ್ದಾರೆ.




