ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಅಮಿತ್ ಶಾ ಮತ್ತು ಸಂಘಟನೆಯ ವಿರುದ್ಧ ಸಮರ

1 year ago

ಬೆಂಗಳೂರು: ಸಂವಿಧಾನದ ಸುವರ್ಣ ಮಹೋತ್ಸವ ಸಮಯದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ಗೃಹ ಸಚಿವ ಅಮಿತ್ ಶಾ ಅವರಂತಹ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಪ್ರಕಟಿಸಿದೆ.

ಜನವರಿ 21ರಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶದ  ತಯಾರಿ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಬಿಜೆಪಿ ವಿರುದ್ಧ ಗುಡುಗಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವುದು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ ಮಾತ್ರವಲ್ಲ. ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾನತೆಯನ್ನು ಪೋಷಿಸುತ್ತಿರುವ ಶಕ್ತಿಗಳ ವಿರುದ್ಧದ ಸಮಾವೇಶವಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಗೃಹ ಮಂತ್ರಿ ಅಮಿತ್ ಶಾ ಮತ್ತು ಅವರು ಪ್ರತಿನಿಧಿಸುವ ಸಂಘಟನೆಯ ವಿರುದ್ಧದ ಸಮರವಾಗಿದೆ ಎಂದರು.

ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ತ್ಯಾಗ, ಬಲಿದಾನಕ್ಕೆ ಹೆಸರಾಗಿರುವುದು ಕಾಂಗ್ರೆಸ್ ಪಕ್ಷ. ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪಾಲಿಗೆ ಒದಗಿ ಬಂದಿದ್ದ ಪ್ರಧಾನಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಈ ಆದರ್ಶಗಳ ಮಾರ್ಗದಲ್ಲಿ ನಾವು ಮುನ್ನಡೆಯೋಣ ಎಂದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಆರ್ಎಸ್ಎಸ್ ದೇಶಕ್ಕೆ ದ್ರೋಹ ಬಗೆಯುವ ಹೋರಾಟದಲ್ಲಿ ಪಾಲ್ಗೊಂಡಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬಗ್ಗೆ ಗೌರವ ಇಲ್ಲದೆ, ವಿಗ್ರಹ ಮಾಡಿಟ್ಟುಕೊಂಡಿರುವ ಬಿಜೆಪಿಯವರು, ಗಾಂಧಿ ಬಗ್ಗೆ ಗೌರವ ಇಲ್ಲದ ಬಿಜೆಪಿಯವರು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಗೌರವ ಇಲ್ಲದ ಇವರಿಗೆ, ಅಂಬೇಡ್ಕರ್, ನೆಹರೂ ಯಾರ ಬಗ್ಗೆಯೂ ಗೌರವ ಇಲ್ಲದ ಬಿಜೆಪಿಯವರಿಗೆ ದೇಶದ ಸಂವಿಧಾನ ಮತ್ತು ಚರಿತ್ರೆಯ ಬಗ್ಗೆಯೂ ಗೌರವ ಇಲ್ಲ ಎಂದರು.

ಅಂಬೇಡ್ಕರ್, ಗಾಂಧಿ, ನೆಹರೂ ಮತ್ತು ಕಾಂಗ್ರೆಸ್ಸಿನ ಹೋರಾಟದ ಚರಿತ್ರೆಯನ್ನು ನಾವು ಮುಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕಿದೆ. ನಾವು ಗಾಂಧಿ ವಂಶಸ್ಥರು ಅವರು ಗೋಡ್ಸೆ ವಂಶಸ್ಥರು. ಬಿಜೆಪಿ ಮತ್ತು ಕಾಂಗ್ರೆಸ್ಸಿನ ಈ ಸೈದ್ಧಾಂತಿಕ ವ್ಯತ್ಯಾಸವನ್ನು ಇವತ್ತಿನ ಯುವ ಪೀಳಿಗೆಗೆ ಅರ್ಥೈಸಬೇಕಿದೆ. ಇದಕ್ಕಾಗಿ ಜ.21ರ ಗಾಂಧಿ ಭಾರತ ಸಮಾವೇಶವನ್ನು ಅತ್ಯಂತ ಯಶಸ್ವಿಗೊಳಿಸೋಣ ಎಂದರು.

Leave a Reply