ಸರ್ಕಾರದ ಸೂಚನೆ ಮೇರೆಗೆ ಶರಣಾಗತಿಗೆ ನಿರ್ಧರಿಸಿದ ಆರು ನಕ್ಸಲರು  

1 year ago

ಬೆಂಗಳೂರು: ಕರ್ನಾಟಕ ಸೇರಿದಂತೆ ಕೇರಳ, ಆಂಧ್ರಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಎನಿಸಿರುವ ಆರು ನಕ್ಸಲರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ. ಇದರಿಂದ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ದಶಕಗಳಿಂದ ಕಾಡುತ್ತಿದ್ದ ನಕ್ಸಲ್ ವಾದ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸರ್ಕಾರದ ಸೂಚನೆಯ ಮೇರೆಗೆ ಶರಣಾಗತಿಗೆ ಆರು ನಕ್ಸಲರು ನಿರ್ಧರಿಸಿ ಚಿಕ್ಕಮಗಳೂರಿನಲ್ಲಿ ಶರಣಾಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು ಜಿಲ್ಲೆಯ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆಯ ನಕ್ಸಲ್ ನಾಯಕಿ ಸುಂದರಿ, ಕೇರಳದ ಜೀಶ, ತಮಿಳುನಾಡಿನ ವಸಂತ ಕೆ.ಅಲಿಯಾಸ್ ರಮೇಶ ಮತ್ತು ಆಂದ್ರಪ್ರದೇಶದ ಮಾರೆಪ್ಪ ಅರೋಲಿ ಸೇರಿದಂತೆ ಆರು ಜನ ಶರಣಾಗುವ ಸಾಧ್ಯತೆ ಇದೆ. 

ಶರಣಾಗುವ ಮುನ್ನ ನಕ್ಸಲರು ಸರ್ಕಾರಕ್ಕೆ ಅಂದರೆ ಶಾಂತಿ ನಾಗರಿಕರ ವೇದಿಕೆ ಮತ್ತು ನಕ್ಸಲ್ ಪುನರ್ವಸತಿ ಸಮಿತಿಗೆ ಬರೆದಿರುವ ಪತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್ ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂಗೌಡ ಎನ್ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆ ಒತ್ತಾಯ ಮಾಡಿದ್ದಾರೆ.

ನಕ್ಸಲರ ಪತ್ರದಲ್ಲೇನಿದೆ?: ಆರು ಜನರಾದ ನಾವು ಸಂಪೂರ್ಣ ಸಮ್ಮತಿ ಮತ್ತು ಏಕ ಅಭಿಪ್ರಾಯದ ಮೇರೆಗೆ ಈ ಪತ್ರವನ್ನು ತಮಗೂ ಆ ಮೂಲಕ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಸರ್ಕಾರಗಳಿಗೆ ಬರೆಯುತ್ತಿದ್ದೇವೆ.

ದೇಶದ ಇಂದಿನ ಸಂದರ್ಭ, ಚಳುವಳಿಗಳು ಪಡೆಯುತ್ತಿರುವ ರೂಪಾಂತರ, ಸಾಮಾಜಿಕ ಅಗತ್ಯ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಸಶಸ್ತ್ರ ಹೋರಾಟದ ಮಾರ್ಗವನ್ನು ಬದಲಾಯಿಸಿ ಪ್ರಜಾತಾಂತ್ರಿಕ ಮುಖ್ಯವಾಹಿನಿಗೆ ಮರಳುವುದು ಒಳ್ಳೆಯದು ಮತ್ತು ಅದಕ್ಕೆ ಸಾಧ್ಯತೆ ಇದೆ ಎಂದು ಮನವರಿಕೆಯಾಗಿದೆ.

ನಾವು ಯಾವುದೇ ಒತ್ತಡವಿಲ್ಲದೆ, ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬರಲು ಬಯಸುತ್ತಿದ್ದೇವೆ. ಆದರೆ ಈ ಸಂದರ್ಭದಲ್ಲಿ ಕೆಲವು ಖಚಿತ ಸ್ಪಷ್ಟೀಕರಣವನ್ನು ಸರ್ಕಾರ ಮತ್ತು ಸಂಬಂಧಿತ ಸಮಿತಿಯಿಂದ ಬಯಸುತ್ತಿದ್ದೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ನಕ್ಸಲರ ಸ್ಪಷ್ಟೀಕರಣವೇನು?: ನಾವು ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯುತವಾಗಿ ನಡೆಯಬೇಕು. ನಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗದೆ ಯಾವುದೇ ರೀತಿಯ ಒತ್ತಡ ಹೇರಬಾರದು.

ನಾವು ಹೋರಾಟದ ಮಾರ್ಗವನ್ನು ಬದಲಾಯಿಸಿದ್ದೇವೆ. ಆದರೆ, ಜನಪರ ಹೋರಾಟವನ್ನು ಕೈ ಬಿಡುತ್ತಿಲ್ಲ. ಹೀಗಾಗಿ ಪ್ರಜಾತಾಂತ್ರಿಕ ಚಳುವಳಿಗಳಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯಾವುದೇ ರೀತಿಯ ತಡೆ ಒಡ್ಡಬಾರದು. ನಮ್ಮ ಬದುಕನ್ನು ಜನತೆಗೆ ಮುಡುಪಿಟ್ಟಿದ್ದೇವೆ. ಜನ ಹಿತಕ್ಕಾಗಿಯೇ ಬದುಕಲು ಬಯಸುತ್ತೇವೆ.

ನಾವು ಇಲ್ಲಿಂದ ಹೊರ ಬಂದು ಜೈಲುಗಳಲ್ಲಿ ಕೊಳೆಯುವ ಮನಸ್ಥಿತಿ ಎದುರಾಗಬಾರದು. ನಮ್ಮ ಮೇಲೆ ಹಾಕಿರುವ ಹೆಚ್ಚಿನ ಪಾಲು ಕೇಸುಗಳು ಯಾವುದೇ ಅನುಮಾನವಿಲ್ಲದೆ ಸುಳ್ಳು ಕೇಸುಗಳಾಗಿವೆ. ನಾವು ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲದ ಪ್ರಕರಣಗಳಲ್ಲಿ ನಮ್ಮ ಹೆಸರುಗಳನ್ನು ಸೇರಿಸಲಾಗಿದೆ. ಈ ಕೇಸುಗಳಿಂದ ನಮಗೆ ಮುಕ್ತಿ ಸಿಗಬೇಕು.

ಮುಖ್ಯವಾಹಿನಿಗೆ ಬಂದ ನಂತರ ಬೇಗನೆ ಜಾಮೀನಿನ ಮೇಲೆ ಹೊರ ಬರಲು ಸಹಕರಿಸಬೇಕು. ಎಲ್ಲ ಮೊಕದ್ದಮೆಗಳನ್ನು ಒಂದೇ ನ್ಯಾಯಾಲಯದ ಅಡಿ ತಂದು ತ್ವರಿತ ವಿಚಾರಣೆ ನಡೆಯುವಂತೆ ಮಾಡಬೇಕು. ಕೇಸುಗಳನ್ನು ನಡೆಸಲು ಕಾನೂನು ಹಾಗೂ ಆರ್ಥಿಕ ನೆರವು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ಈಗಾಗಲೇ ಮುಖ್ಯವಾಹಿನಿಗೆ ಬಂದ ಹಲವರ ಬದುಕು ಅತಂತ್ರವಾಗಿದೆ. ಅವರ ಕೇಸುಗಳ ಇತ್ಯರ್ಥಕ್ಕೆ ಹಾಗೂ ಬದುಕಿನ ಭದ್ರತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬೇರೆ ಬೇರೆ ಜೈಲುಗಳಲ್ಲಿರುವ ಸಂಗಾತಿಗಳಿಗೂ (ಅವರು ಬಂಧನಕ್ಕೊಳಗಾಗಿದ್ದರೂ ಸಹ) ಈ ಪ್ಯಾಕೇಜ್ ಅನ್ವಯ ಆಗುವಂತೆ ಮಾಡಿ ಅವರ ಬಿಡುಗಡೆಗೆ ಸಹಕರಿಸಬೇಕು.

ಹೊರ ಬಂದ ನಂತರ ನಮ್ಮ ಜೀವನಕ್ಕೆ ದಾರಿ ಏನು ಎಂಬ ಸ್ಪಷ್ಟತೆ ಬೇಕು. ವಿಕ್ರಮಗೌಡ ಅವರ ಎನ್ಕೌಂಟರ್ ಹತ್ಯೆಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ಮಾಡಬೇಕು ಎಂದು ಪತ್ರದ ಮೂಲಕ ಒತ್ತಾಯ ಮಂಡಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಭರವಸೆ: ನಕ್ಸಲರ ಬೇಡಿಕೆಯಂತೆ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂಗೌಡ ಎನ್ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.  ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತೆಬೈಲ್ ಅರಣ್ಯದಲ್ಲಿ ನಕ್ಸಲ್ ವಿಕ್ರಂಗೌಡ ಎನ್ಕೌಂಟರ್ ನಡೆದಿತ್ತು.

Leave a Reply