ನಿವೇಶನ ವಾಪಸ್ ನೀಡಿದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ

2 years ago

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ ಸಿಎಂ ಸಿದ್ದರಾಮಯ್ಯ ಅವರನ್ನು ಹಲವಾರು ರೂಪದಲ್ಲಿ ಸುತ್ತಿಕೊಂಡ ಬೆನ್ನಲ್ಲೇ ಅವರ ಪತ್ನಿ ಮುಡಾ ನೀಡಿದ್ದ ನಿವೇಶನಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಅವರ ಪತ್ನಿ ಪಾರ್ವತಿ ಮುಡಾ ತಮಗೆ ನೀಡಿದ್ದ 14  ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂತಿರುಗಿಸುವುದಾಗಿ ಹೇಳಿ ಪತ್ರ ಬರೆದಿದ್ದು ಒಟ್ಟಾರೆ ನಿವೇಶನ ಹಂಚಿಕೆ ಅಕ್ರಮದ ಆರೋಪದ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇದೀಗ ನಿವೇಶನ ಹಂಚಿಕೆ ಅಕ್ರಮದ ಆರೋಪ ತನಿಖೆ ನಡೆಯಲಿದೆ. ಒಂದು ವೇಳೆ ಇದರಲ್ಲಿ ಮುಖ್ಯಮಂತ್ರಿ ಅವರ ಕುಟುಂಬ ಅಕ್ರಮ ಎಸಗಿರುವುದು ಸಾಬೀತಾದರೆ ಅವರು ನಿವೇಶನ ವಾಪಸ್ ನೀಡಿದರು ಕೂಡ  ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಕಾನೂನು ತಜ್ಞರು.

ಈ ನಡುವೆ ಕೋರ್ಟ್ ಆದೇಶದಂತೆ ಮುಡಾ ಅಧಿಕಾರಿಗಳು ಲೋಕಾಯುಕ್ತದ ಪೊಲೀಸರು ದೂರುದಾರರಾದ ಸ್ನೇಹಮಯಿ ಕೃಷ್ಣ ಅವರೊಂದಿಗೆ  ಮೈಸೂರಿನ ಕೆಸರೆ ಗ್ರಾಮಕ್ಕೆ ತೆರಳಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದರು ಎಂದು ಹೇಳಲಾದ ಭೂಮಿಯ ಪರಿಶೀಲನೆ ನಡೆಸಿದರು.

ಈ ವೇಳೆ ಪೋಡಿ, ನಕ್ಷೆ ಹಾಗೂ ಇತರ ದಾಖಲಾತಿಗಳೊಂದಿಗೆ ಸ್ಥಳದಲ್ಲಿ ಮಹಜರು ನಡೆಸಲಾಯಿತು. ಪಾರ್ವತಿಯವರದು ಎಂದು ಹೇಳಲಾದ ಜಾಗವನ್ನು ಮುಡಾ ಅಭಿವೃದ್ಧಿಪಡಿಸಿ ನಿವೇಶನಗಳನ್ನಾಗಿ ವಿಂಗಡಿಸಿರುವುದು, ನಿವೇಶನ ಸಂಖ್ಯೆಗಳ ಫಲಕಗಳನ್ನು ನೆಟ್ಟಿರುವುದು, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳು ಪೂರ್ಣಗೊಂಡಿರುವುದು ಕಂಡುಬಂದಿತು.

ಈ ಸ್ಥಳವನ್ನು ದೇವರಾಜು ಎಂಬುವವರು ಖರೀದಿಸಿದ್ದು, ಅವರಿಂದ ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದಾರೆ. ಆ ಬಳಿಕ ಇವರು ತಮ್ಮ ಸಹೋದರಿ ಆಗಿರುವ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಅರಿಶಿನ ಕುಂಕುಮಕ್ಕೆ ಭೂಮಿಯನ್ನು ಉಡುಗೊರೆ ನೀಡಿದ್ದರು ಎಂದು ಹೇಳಲಾಗಿದೆ. ಈ ಜಮೀನಿನ ಪರಭಾರೆಯೇ ಅಕ್ರಮ ಎಂಬುದು ಸ್ನೇಹಮಯಿ ಕೃಷ್ಣ ಅವರ ದೂರಾಗಿದೆ.

ಈ ನಡುವೆ ತಮಗೆ ನೀಡಲಾದ ಪರ್ಯಾಯ ನಿವೇಶನಗಳನ್ನು ವಾಪಸ್ ಪಡೆಯುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬರದಿರುವ ಪತ್ರವನ್ನು ಅವರ ಮಗ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಡಾ ಆಯುಕ್ತರಿಗೆ ತಲುಪಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡು ವಿವಾದವಾಗಿದ್ದರಿಂದ ಬೇಸರಗೊಂಡ ನಮ್ಮ ತಾಯಿ ನಿವೇಶನ ಹಿಂತಿರುಗಿಸಲು ತೀರ್ಮಾನಿಸಿದ್ದಾರೆ ಎಂದರು.

ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಡಾ ಆಯುಕ್ತ ರಘುನಂದನ್, ಪಾರ್ವತಿ ಅವರ ಪರವಾಗಿ ಡಾ.ಯತೀಂದ್ರ ಪತ್ರವನ್ನು ನೀಡಿದ್ದಾರೆ. ಈ ಕುರಿತು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸುತ್ತೇವೆ ಎಂದರು.

ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಕೆಲವು ದಾಖಲೆಗಳನ್ನು ಕೇಳಿದ್ದು, ತನಿಖೆಗೆ ಸಹಕಾರ ನೀಡುತ್ತಿದ್ದೇವೆ. ಇ.ಡಿ. ಯಿಂದ ಈವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದರು.

Leave a Reply