ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವ ಯೋಜನೆ ಆಮಿಶ
ಸಾರ್ವಜನಿಕರು ಮೋಸ ಹೋಗದಂತೆ ಜಾಗೃತಿ ವಹಿಸಲು ಮನವಿ
ಧಾರವಾಡ: ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24 ಸಾವಿರ ಸ್ಕಾಲರ ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದುದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳು ಇದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ ದಕ್ಷಿಣ ಕನ್ನಡ ಮಂಗಳೂರು ಎಂಬ ಮೊಹರು ಹಾಕಿರುವ ಒಂದು ಅರ್ಜಿಯ ಫೋಟೋ ಹೊಂದಿರುವ ವಾಟ್ಸಪ್ ಸಂದೇಶ ಜನರ ಪೋನ್ಗಳಲ್ಲಿ ಒಂದು ತಿಂಗಳಿಂದ ಹರಿದಾಡುತ್ತಿದೆ.
- ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರತಿಭಟನೆ
- ಅಸಮಾನ್ಯ ಕನ್ನಡಿಗನ ಬದುಕಿನ ಕಥನ ಕಥಾನಾಯಕನ ಕಥೆ
- ತುಂತುರು ಮತ್ತು ಹನಿ ನೀರಾವರಿ ಮತ್ತು ನಿರ್ವಹಣೆ ಕುರಿತು ತರಬೇತಿ
- ಅಸಿಸ್ಟೆಂಟ್ ಹುದ್ದೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಅರ್ಜಿ ಆಹ್ವಾನ
- ಇಸ್ರೇಲ್ ಪ್ರಧಾನಿ ನೆತನ್ಯಾಹು ಹತ್ಯೆ ಸುದ್ದಿಯ ಅಸಲಿಯತ್ತೇನು?
ಈ ವಾಟ್ಸಪ್ ಸಂದೇಶ ಜನರನ್ನು ಗೊಂದಲಕ್ಕಿಡು ಮಾಡಿದೆ. ಈ ರೀತಿಯ ತಪ್ಪು ಸಂದೇಶ ನೋಡಿ ಅನೇಕ ಜನ, ಪ್ರತಿನಿತ್ಯ ಗ್ರಾಮ ಪಂಚಾಯತ್, ಕಂದಾಯ ಅಧಿಕಾರಿಗಳ ಕಛೇರಿ, ಮಕ್ಕಳ ರಕ್ಷಣಾ ಇಲಾಖೆ, ಕಚೇರಿ ಸೇರಿ ಎಲ್ಲ ಕಡೆ ಅಲೆದಾಡುತ್ತಿದ್ದಾರೆ. ಮಕ್ಕಳ ರಕ್ಷಣಾಧಿಕಾರಿ ಕಛೇರಿಯಲ್ಲಿ ಪ್ರತಿ ದಿನ ನೂರಾರು ಜನ ಬಂದು ವಿಚಾರಿಸುತ್ತಿರುವುದು ಮತ್ತು ನೂರಾರು ಫೋನ್ ಕರೆಗಳು ಬರುತ್ತಿವೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಈಗಾಗಲೇ ಅನುಷ್ಠಾನದಲ್ಲಿರುವ ಪ್ರಾಯೋಜಕತ್ವ ಯೋಜನೆಯ ಮಾಹಿತಿಯನ್ನು ಈ ರೀತಿಯಾಗಿ ಮಧ್ಯವರ್ತಿಗಳು ಅಪಪ್ರಚಾರ ಮಾಡಿ, ಸಾರ್ವಜನಿಕರಿಂದ ಹಣ ವಸೂಲು ಮಾಡುವ ಅಥವಾ ಆರ್ಥಿಕ ನಷ್ಟ ಉಂಟು ಮಾಡುವ ದುರುದ್ದೇಶ ಹೊಂದಿರಬಹುದು.
ಆದ್ದರಿಂದ ಸಾರ್ವಜನಿಕರು ಇಂತಹ ಸಂದೇಶಗಳಿಗೆ ಮೋಸ ಹೋಗಬಾರದು ಮತ್ತು ಪ್ರಾಯೋಜಕತ್ವ ಯೋಜನೆಗೆ ಅರ್ಹ ಇರುವವರು ನೇರವಾಗಿ ಅರ್ಜಿ ಸಲ್ಲಿಸಬೇಕು.
ಪ್ರಾಯೋಜಕತ್ವ ಯೋಜನೆ: ಮಿಶನ್ ವಾತ್ಸಲ್ಯ ಯೋಜನೆಯಡಿ ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಯುವಂತೆ ಬೆಂಬಲ ನೀಡುವುದು ಪ್ರಾಯೋಜಕತ್ವ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪ್ರಯೋಜಕತ್ವದಲ್ಲಿ ಎರಡು ವರ್ಗಗಳಿವೆ. ಸಂಕಷ್ಟಕ್ಕೆ ಈಡಾಗುವ ಕುಟುಂಬಕ್ಕೆ ಮಗು ಜೈವಿಕ ಕುಟುಂಬದಲ್ಲೇ ಮುಂದುವರೆಯಲು, ಮಗು ಶಿಕ್ಷಣವನ್ನು ಮುಂದುವರೆಸಲು, ಪ್ರಾಯೋಜಕತ್ವ ಬೆಂಬಲ ಒದಗಿಸುವುದು. ಮತ್ತು ಮಕ್ಕಳು ನಿರ್ಗತಿಕರಾಗುವುದು, ಸಂಕಷ್ಟಕ್ಕಿಡಾಗುವುದು, ಓಡಿ ಹೋಗುವುದು, ಬಲವಂತದ ವಿವಾಹ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಮುಂತಾದವುಗಳಿಂದ ತಡೆಗಟ್ಟುವ ಪ್ರಯತ್ನವಾಗಿದೆ.
ಸಂಸ್ಥೆಗಳ ಒಳಗಿನ ಮಕ್ಕಳನ್ನು ಪ್ರಾಯೋಜಕತ್ವ ಸಹಾಯದೊಂದಿಗೆ ಕುಟುಂಬಗಳ ಜೊತೆಗೆ ಪುನರ್ ಸ್ಥಾಪಿಸುವುದು ಸಹ ಪ್ರಾಯೋಜಕತ್ವದ ಉದ್ದೇಶವಾಗಿದೆ.
ಫಲಾನುಭವಿಗಳಿಗೆ ಇರುವ ಮಾನದಂಡಗಳು: ಬಾಲಮಂದಿರ, ವೀಕ್ಷಣಾಲಯಗಳಿಂದ ಕುಟುಂಬಗಳಿಗೆ ಮರಳಿದ ಮಕ್ಕಳು, ಪೋಕ್ಸೊ ಸಂತ್ರಸ್ತ ಮಕ್ಕಳು, ತಾಯಿ ವಿಧವೆ ಅಥವಾ ವಿಚ್ಛೇದಿತ ಅಥವಾ ಕುಟುಂಬದಿಂದ ಪರಿತ್ಯಕ್ತಳಾಗಿದ್ದರೆ, ಮಕ್ಕಳು ಅನಾಥರಾಗಿದ್ದರೆ ಮತ್ತು ಪೋಷಕರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೆ, ಪೋಷಕರು ಮಕ್ಕಳನ್ನು ನೋಡಿಕೊಳ್ಳಲು ದೈಹಿಕವಾಗಿ ಮತ್ತು ಆರ್ಥಿಕವಾಗಿ ಅಸಮರ್ಥರಾಗಿದ್ದರೆ ಅಂತಹ ಮಕ್ಕಳಿಗೆ ಪ್ರಾಯೋಜಕತ್ವದೆ ಪ್ರತಿ ತಿಂಗಳು ರೂ.4 ಸಾವಿರದಂತೆ, ವರ್ಷಕ್ಕೆ ರೂ.48 ಸಾವಿರ ಸಹಾಯಧನ ನೀಡಲಾಗುತ್ತದೆ.
ಬಾಲನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣೆ ಕಾಯಿದೆ 2015 ರ ಪ್ರಕಾರ ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು ಅಂದರೆ ಮನೆ ಇಲ್ಲದ, ಯಾವುದೇ ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲ ಕಾರ್ಮಿಕರು, ಬಾಲ್ಯ ವಿವಾಹ ಸಂತ್ರಸ್ತ ಮಕ್ಕಳು, ಕಳ್ಳಸಾಗಣೆಗೊಳಗಾದ ಮಕ್ಕಳು, ಹೆಚ್ ಐ ವಿ ಅಥವಾ ಏಡ್ಸ ಬಾಧಿತ ಮಕ್ಕಳು, ದೈಹಿಕ ಅಂಗವಿಕಲತೆಯುಳ್ಳ ಮಕ್ಕಳು, ಕಾಣೆಯಾದ ಅಥವಾ ಓಡಿಹೋದ ಮಕ್ಕಳು, ಬಾಲ ಭಿಕ್ಷುಕರು ಅಥವಾ ಬೀದಿ ಬದಿ ಮಕ್ಕಳು, ಚಿತ್ರಹಿಂಸೆ ಅಥವಾ ನಿಂದನೆ ಅಥವಾ ಬೆಂಬಲ ಮತ್ತು ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು ಹಾಗೂ ಪಿ.ಎಂ ಕೇರ್ಸ ಚಿಲ್ಡ್ರನ್ ಯೋಜನೆಯ ಅನುಮೋದಿತ ಮಕ್ಕಳು ಸಹ ಈ ಪ್ರಾಯೋಜಕತ್ವ ಯೋಜನೆಗೆ ಅರ್ಹರಾಗಿದ್ದಾರೆ.
ಯೋಜನೆಯ ಮಾನದಂಡಗಳನ್ನು ಪೂರೈಸುವ ಮಕ್ಕಳು ಅಥವಾ ಪೋಷಕರು ಮಕ್ಕಳ ಕಲ್ಯಾಣ ಸಮಿತಿ ಸಭೆ ನಡೆಯುವ ದಿನಾಂಕವನ್ನು ಬಾಲಕಿಯರ ಸರ್ಕಾರಿ ಬಾಲಮಂದಿರ, ಕ್ರಿಶ್ಚಿಯನ್ ಕಾಲೋನಿ 3ನೇ ಕ್ರಾಸ್, ಬೆಂಡಿಗೇರಿ ಪೊಲೀಸ್ ಠಾಣೆ ಹಿಂಭಾಗ, ಘಂಟಿಕೇರಿ ಹುಬ್ಬಳ್ಳಿ ಹಾಗೂ ಬಾಲಕರ ಸರ್ಕಾರಿ ಬಾಲಮಂದಿರ, ಉಣಕಲ್ ಕ್ರಾಸ್, ಸಾಯಿನಗರ ರಸ್ತೆ, ಹುಬ್ಬಳ್ಳಿಯಲ್ಲಿ ಖಚಿತ ಪಡಿಸಿಕೊಂಡು ಸಮಿತಿಗೆ ಹಾಜರಾಗಿ ಆದೇಶ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ, ಹಿಂದಿ ಪ್ರಚಾರ ಸಭಾ ಹತ್ತಿರ ಇರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಛೇರಿಗೆ ಸಂಪರ್ಕಿಸಬಹುದು.
ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ಸಾವಿರ 24 ಸ್ಕಾಲರ್ ಶಿಪ್ ಎಂಬ ಸಂದೇಶವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಅಮಾಯಕ, ಮುಗ್ಧ ಜನರನ್ನು ಹಣ ವಸೂಲು ಹಾಗೂ ಆಮಿಶ ತೋರುತ್ತಿರುವ ಮಾಹಿತಿ ಬಂದಿದ್ದು, ಯಾವುದೇ ಮಧ್ಯವರ್ತಿಗಳ ಸಂಪರ್ಕ ಮಾಡದೇ ಯೋಜನೆ ಮಾಹಿತಿ ಕುರಿತು ನೇರವಾಗಿ ಕಚೇರಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




