ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ, ಕಾನೂನು ತಜ್ಞರ ಸಲಹೆ ಕೇಳಿದ ರಾಜ್ಯಪಾಲ

2 years ago

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ಆರೋಪ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿರುವ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೇಂದ್ರ ಸರ್ಕಾರ ಮತ್ತು ಕಾನೂನು ತಜ್ಞರ ಸಲಹೆ ಕೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಮನವಿ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೀಡಿರುವ ರಾಜ್ಯಪಾಲರು, ಇದೀಗ ರಾಜ್ಯ ಸರ್ಕಾರದ ಉತ್ತರದ ಬಗ್ಗೆ ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ.

ಈ ಕುರಿತು ಕಳೆದೊಂದು ವಾರದಿಂದ ನಡೆಯುತ್ತಿರುವ ಎಲ್ಲ ವಿದ್ಯಮಾನಗಳ ಸಮಗ್ರ ವರದಿಯೊಂದನ್ನು ಕೇಂದ್ರ ಗೃಹ ಸಚಿವರಿಗೆ ರವಾನಿಸಿರುವ ರಾಜ್ಯಪಾಲರು ತಾವು ಮುಂದೆ ಕೈಗೊಳ್ಳಬೇಕಾದ ನಿರ್ಧಾರದ ಕುರಿತು ಸಲಹೆ ಕೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. 

ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡುವಂತೆ ಕೋರಿರುವ ಮನವಿ ಬಗ್ಗೆ ರಾಜ್ಯಪಾಲರು ನೀಡಿರುವ ಶೋಕಾಸ್ ಹಿಂದೆ ಪಡೆಯುವಂತೆ ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನದ ಕುರಿತು ಕಾನೂನು ತಜ್ಞರ ಸಲಹೆ ಕೇಳಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. 

ಮೂರು ದಿನಗಳಿಂದ ದೆಹಲಿ ಪ್ರವಾಸದಲ್ಲಿದ್ದ ರಾಜ್ಯಪಾಲರು ಬೆಂಗಳೂರಿಗೆ ಬರುತ್ತಿದ್ದಂತೆ ಕಾನೂನು ತಜ್ಞರೊಂದಿಗೆ ಈ ವಿಷಯ ಕುರಿತು ಸಮಾಲೋಚನೆ ನಡೆಸಿದ್ದು, ಅವರು ಕೈಗೊಳ್ಳುವ ತೀರ್ಮಾನ  ಕುತೂಹಲ ಮೂಡಿಸಿದೆ. ರಾಜ್ಯಪಾಲರು ಕೈಗೊಂಡ ನಿರ್ಧಾರಗಳ ವಿರುದ್ಧ ಸಂಪುಟ ಸಭೆಯಲ್ಲಿ ವ್ಯತಿರಿಕ್ತ ತೀರ್ಮಾನ ಕೈಗೊಂಡರೂ ಕೂಡ ರಾಜ್ಯಪಾಲರು ತಮಗಿರುವ ವಿಶೇಷ ಅಧಿಕಾರ ಬಳಸಿಕೊಂಡು ಸಿಎಂ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಿರುವ ನಿದರ್ಶನಗಳು ಇವೆ. 

ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಗೆ ಸಿಎಂಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬಾರದು ಎಂದು ಸಚಿವ ಸಂಪುಟ ಸಭೆ ಒಂದು ಸಾಲಿನ ನಿರ್ಣಯವನ್ನು ಕೈಗೊಂಡಿದ್ದರೂ ರಾಜ್ಯಪಾಲರು ಅನುಮತಿ ನೀಡಿರುವ ಉದಾಹರಣೆಗಳು ಇವೆ. 

ಅಷ್ಟೇ ಅಲ್ಲದೆ ಈ ಹಿಂದೆ ಕರ್ನಾಟಕದ ರಾಜ್ಯಪಾಲರಾಗಿದ್ದ ಭಾರದ್ವಾಜ್ ಅವರು ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಂಪುಟ ಸಭೆ ನಿರ್ಧಾರವನ್ನು ಬದಿಗೊತ್ತಿ ಖಾಸಗಿ ದೂರು ಸಲ್ಲಿಸಲು ಅನುಮತಿ ನೀಡಿದ್ದರು. ಹೀಗಾಗಿ ರಾಜ್ಯಪಾಲರು ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply