ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ ಬೈರೇಗೌಡ

2 years ago

ಮೈಸೂರು: ಆಧಾರ್-ಆರ್ಟಿಸಿ ಜೋಡಣೆ ಕೆಲಸದಲ್ಲಿ ಮಂದಗತಿಯಿಂದ ಮುಂದುವರೆಯುತ್ತಿದ್ದ ತರಿಕರೆ, ಕಡೂರು ಹಾಗೂ ಕೆಆರ್ ನಗರ ತಹಶೀಲ್ದಾರ್ ರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಟುವಾಗಿ ಎಚ್ಚರಿಸಿದರು.

ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮೈಸೂರು ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರೈತರ ಆಸ್ತಿಗಳು ನಕಲು ಆಗಬಾರದು ಅವರಿಗೆ ನೆಮ್ಮದಿಯ ಮಾಲೀಕತ್ವ ನೀಡಬೇಕು ಎಂಬ ಕಾರಣಕ್ಕೆ ಆಧಾರ್ ಸೀಡಿಂಗ್ ನಡೆಸಲಾಗುತ್ತಿದೆ. ಆದರೆ, ನಿಮ್ಮ ಸೋಮಾರಿ ತನದಿಂದ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ನಿರೀಕ್ಷಿತ ವೇಗ ತಲುಪಬೇಕಿದೆ. ಹೀಗಾಗಿ ಜುಲೈ ಅಂತ್ಯದೊಳಗೆ ಶೇ.90ರಷ್ಟು ಆಧಾರ್ ಸೀಡಿಂಗೆ ಕೆಲಸ ಮುಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸಮಯದ ಗಡುವು ನೀಡಿದರು.

ಸರ್ಕಾರಿ ಭೂಮಿ ಬೀಟ್ ಸಿಸ್ಟಂಗೆ ಒತ್ತು: ತಹಶೀಲ್ದಾರರು ಅವರ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ತಹಶೀಲ್ದಾರರು ತಾಲೂಕು ಮಟ್ಟದ ದಂಡಾಧಿಕಾರಿಗಳೂ ಆಗಿದ್ದು, ಸರ್ಕಾರಿ ಜಮೀನನ್ನು ಉಳಿಸುವ ನಿಟ್ಟಿನಲ್ಲಿ “ಬೀಟ್ ಸಿಸ್ಟಂ” ಅನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸರ್ಕಾರಿ ಜಮೀನುಗಳನ್ನು ಉಳಿಸಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಖಡಕ್ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ “ಬೀಟ್ ಸಿಸ್ಟಂ ಆ್ಯಪ್” ಅನ್ನು ಅಭಿವೃದ್ಧಿಪಡಿಸಲಾಯಿತು. ಈ ಆ್ಯಪ್ ಮೂಲಕ ಈಗಾಗಲೇ ಶೇ.70 ರಷ್ಟು ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಶೀಘ್ರ ಶೇ.100 ರಷ್ಟು ಜಮೀನನ್ನೂ ಗುರುತಿಸಬೇಕು. ತಹಶೀಲ್ದಾರರೇ ಮುಂದೆ ನಿಂತು ಒತ್ತುವರಿ ತೆರವುಗೊಳಿಸುವ ಕೆಲಸ ಶುರು ಮಾಡಬೇಕು ಎಂದರು.

ಅಲ್ಲದೆ, ಹಲವು ಕಡೆಗಳಲ್ಲಿ ಕೆರೆ ಮತ್ತು ಸ್ಮಶಾನ ಜಾಗಗಳನ್ನೇ ಒತ್ತುವರಿ ಮಾಡಲಾಗಿದೆ. ಇಂತಹ ಎಲ್ಲಾ ಜಮೀನಿನಲ್ಲೂ ಒತ್ತುವರಿ ತೆರವುಗೊಳಿಸಬೇಕು, ಅಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರಿ ಜಮೀನಿಗೆ ಬೀಟ್ ಹಾಕಬೇಕು. ಆ ಮೂಲಕ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

Leave a Reply