ಧಾರವಾಡ: ಧಾರವಾಡ ವಾಲ್ಮಿ ಸಂಸ್ಥೆಯು ಸುಸ್ಥಿರ ಜಲ ಮತ್ತು ನೆಲ ನಿರ್ವಹಣೆಯ ಕ್ಷೇತ್ರದಲ್ಲಿ ದೇಶದಲ್ಲಿಯೇ ಆಶಾಕಿರಣವಾದ ಸಂಸ್ಥೆಯಾಗಿದೆ. ವಾಲ್ಮಿ ಸಂಸ್ಥೆಯು ಜಲ ಮತ್ತು ನೆಲ ಕುರಿತು ತರಬೇತಿ, ಸಂಶೋಧನೆ, ಸಮುದಾಯ ಸಂಘಟನೆ, ಜಲ ಜಾಗೃತಿ ಕುರಿತು ರಾಜ್ಯಕ್ಕೆ ಅಗಾಧ ಸೇವೆಯನ್ನು ನೀಡಿದೆ ಎಂದು ಪುಣೆಯ ರಾಷ್ಟ್ರೀಯ ಜಲ ಅಕಾಡೆಮಿ ನಿರ್ದೇಶಕ ಇಂ. ಮಿಲಿಂದ ಪಾನಪಾಟೀಲ ಹೇಳಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ವಾಲ್ಮಿ ಸಭಾಂಗಣದಲ್ಲಿ ಆಯೋಜಿಸಲಾದ 39 ನೇ ವಾಲ್ಮಿ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು, ಜಲ ಮತ್ತು ನೆಲ ಸಂಪನ್ಮೂಲಗಳು ನಾಗರಿಕತೆಯ ಭದ್ರ ಬುನಾದಿಯಾಗಿವೆ. ಜನ ಸಂಖ್ಯಾ ಬೆಳವಣಿಗೆ, ನಗರೀಕರಣ ಮತ್ತು ಇತ್ತೀಚಿನ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಜಲ, ನೆಲ ನಿರ್ವಹಣೆ ಅತ್ಯಂತ ಪ್ರಮುಖ ಸವಾಲಾಗಿದೆ. ಈ ನಿಟ್ಟಿನಲ್ಲಿ ಧಾರವಾಡ ವಾಲ್ಮಿಯು ರಾಷ್ಟ್ರದ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಕಾರ್ಯ ಸೂಚಿಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದರು.
ವಾಲ್ಮಿ ಸಂಸ್ಥೆಯು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲ ಶಕ್ತಿ ಯೋಜನೆ, ಅಟಲ್ ಭೂ ಜಲ ಯೋಜನೆ, ರಾಷ್ಟ್ರೀಯ ಜಲ ಆಂದೋಲನ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ ಎಂದರು.
ಮುಂಬರುವ ದಿನಗಳಲ್ಲಿ ಹವಾಮಾನ ವೈಪರೀತ್ಯದ ಪರಿಣಾಮಗಳು, ಜಲ ಸುಭದ್ರತೆ ಸುಸ್ಥಿರ ಭೂ ನಿರ್ವಹಣೆ, ತಂತ್ರಜ್ಞಾನ ಆವಿಷ್ಕಾರ ಮುಂತಾದ ವಿಷಯಗಳಲ್ಲಿ ವಿಶೇಷ ಪ್ರಯತ್ನಗಳ ಅವಶ್ಯಕತೆ ಇದೆ. ಪುಣೆಯ ರಾಷ್ಟ್ರೀಯ ಜಲ ಅಕೆಡೆಮಿ ವಿವಿಧ ಭಾಗೀದಾರರ ಸಾಮಥ್ರ್ಯವರ್ಧನೆಗೆ ಧಾರವಾಡದ ವಾಲ್ಮಿ ಜೊತೆಗೆ ಕೈಜೋಡಿಸಲು ಸಿದ್ಧವಾಗಿದೆ ಎಂದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಡಾ. ಎಂ ಚಂದ್ರ ಪೂಜಾರಿ ಮಾತನಾಡಿ, ಕೃಷಿ ಮತ್ತು ಗ್ರಾಮೀಣ ಬದುಕು ಅತ್ಯಂತ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಮೂಲ ಕಾರಣ ಜಲ ಮತ್ತು ನೆಲ ಸಮಸ್ಯೆಯಾಗಿದೆ. ಜೊತೆಗೆ ಯುವಕರು ಕೃಷಿಯನ್ನು ತೊರೆಯುತ್ತಿರುವುದು ಕಳವಳಕಾರಿಯಾಗಿದೆ. ಈ ಎಲ್ಲ ಸಮಸ್ಯೆಗಳು ಹವಾಮಾನ ವೈಪರಿತ್ಯದಿಂದ ಇನ್ನಷ್ಟು ಉಲ್ಬಣಗೊಂಡಿವೆ. ಜಲ, ನೆಲ ನಿರ್ವಹಣೆ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಕೇವಲ ಸರ್ಕಾರಿ ಸಂಸ್ಥೆಗಳು ಶ್ರಮಿಸಿದರೆ ಸಾಧ್ಯವಾಗದು, ಇದು ಒಂದು ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂದರು.
ಕೃಷಿ ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಡಾ. ಎಂ.ವಿ.ಮಂಜುನಾಥ ಅವರು ಮಾತನಾಡಿ, ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜಲ, ನೆಲ ಸಂರಕ್ಷಣೆ ಅತ್ಯಂತ ದೊಡ್ಡ ಸವಾಲಾಗಿ ಉದ್ಬವಿಸಿದೆ. ಈ ಸಮಸ್ಯೆಗಳಿಗೆ ಪರಿಹಾರವನ್ನು ವಾಲ್ಮಿ ಸಂಸ್ಥೆ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೈ ಜೋಡಿಸಿ ರೈತ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಧಾರವಾಡ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ಸುಮಾರು ನಾಲ್ಕು ದಶಕಗಳ ಹಿಂದೆ ಜಲ ನೆಲ ನಿರ್ವಹಣೆಗಾಗಿ ಒಂದು ವಿಶೇಷ ಸಂಸ್ಥೆಯನ್ನು ಹುಟ್ಟು ಹಾಕಿದ ತಜ್ಞರು ಮತ್ತು ಪರಿಣಿತರ ಮುಂದಾಲೋಚನೆಯನ್ನು ಶ್ಲಾಘಿಸಿದರು. ಕಳೆದ ಮೂವತ್ತೆಂಟು ವರ್ಷಗಳಲ್ಲಿ ಕರ್ನಾಟಕ ರಾಜ್ಯದ ವಿವಿಧ ಜನ ವರ್ಗಗಳಿಗೆ ಜಲ ನೆಲ ಕುರಿತು ತರಬೇತಿ ನೀಡಲಾಗುತ್ತಿದೆ. ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ವೈಜ್ಞಾನಿಕ ನೀರಾವರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಇತ್ತೀಚಿಗೆ ರಾಷ್ಟ್ರ, ಅಂತರಾಷ್ಟ್ರ ಮಟ್ಟದ ಮಹತ್ವದ ವಿಚಾರ ಸಂಕಿರಣಗಳನ್ನೂ ಕೂಡಾ ಹಮ್ಮಿಕೊಳ್ಳಲಾಗಿದೆ. ಈ ಪರಿಶ್ರಮಗಳ ಫಲವಾಗಿ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಮುಂಬರುವ ದಿನಗಳಲ್ಲಿ ಜಾಗತಿಕ ಜಲ ಸಂಕಷ್ಠದಿಂದ ಪಾರಾಗಲು ವಾಲ್ಮಿಯ ಪಾತ್ರ ಬಹು ನಿರ್ಣಾಯಕವಾಗಿದ್ದು, ವಾಲ್ಮಿ ಸಂಸ್ಥೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಧಾರವಾಡ ವಾಲ್ಮಿ ಸಂಸ್ಥೆಯನ್ನು ಜಲ ನಿರ್ವಹಣೆಯಲ್ಲಿ ಉನ್ನತ ಕೇಂದ್ರ (ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್ಮೆಂಟ್) ಎಂದು ಘೋಷಿಸಿದೆ ಎಂದರು.
ವಾಲ್ಮಿ ಸಂಸ್ಥೆಯ ಈ ಎಲ್ಲ ಬೆಳವಣಿಗೆಗೆ ಕಾರಣೀಕರ್ತರಾದ ರಾಜ್ಯ ಸರ್ಕಾರ, ಜಲ ಸಂಪನ್ಮೂಲ ಇಲಾಖೆ, ವಾಲ್ಮಿ ಆಡಳಿತ ಮಂಡಳಿ, ವಾಲ್ಮಿ ಸಂಸ್ಥೆಯ ಅಧ್ಯಕ್ಷರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ ಇವರೆಲ್ಲರಿಗೆ ಆಭಾರಿಯಾಗಿದ್ದೇನೆ ಮತ್ತು ಅವರ ನಿರೀಕ್ಷೆಯಂತೆ ಸಂಸ್ಥೆಯು ಶ್ರಮಿಸಲು ಬದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಮಂಜುನಾಥ ಘಾಟೆ, ಮಲಪ್ರಭಾ ಯೋಜನಾ ವಲಯದ ಮುಖ್ಯ ಅಭಿಯಂತರ ಅಶೋಕ ವಾಸನದ, ಆರ್ ನಾಗಣ್ಣ, ಜಲ ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಯಂತರರು, ಕಾಡಾ ಇಲಾಖೆಯ ಅಧಿಕಾರಿಗಳು, ರೈತರು, ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರು, ಉಪಾಧ್ಯಕ್ಷರು, ನೀರಾವರಿ ನಿರ್ವಹಣೆಯ ಎಲ್ಲ ಭಾಗೀದಾರರು ಮತ್ತು ವಾಲ್ಮಿ ಸಂಸ್ಥೆಯ ಅಧಿಕಾರಿಗಳು, ಬೋಧಕರು, ಸಮಾಲೋಚಕರು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.







