ಕರ್ನಾಟಕ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಕಲಿಯುಗ್ 2.0

5 years ago

ಬೆಂಗಳೂರು: ನಗರದ ಚಿತ್ರಕಲಾ ಪರಿಷತ್ ನಲ್ಲಿ ಕಲಿಯುಗ್ 2.0 ಹೆಸರಿನಲ್ಲಿ ಪರಿಸರ ಸಂರಕ್ಷಣೆಯ ವಿಷಯವನ್ನು ಅನ್ವೇಷಿಸುವ ಪ್ರದರ್ಶನ ಮತ್ತು ಕಲೆಯ ಮಾರಾಟ ಹಾಗೂ ಕಲೆಯ ಮಾರಾಟದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಅಕ್ಷಯ ಪಾತ್ರ ಫೌಂಡೇಶನ್‌ಗೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಲೋಕಸಭೆ ಸದಸ್ಯ ತೇಜಸ್ವಿ ಸೂರ್ಯ, ಕಲ್ಯಾಣ್ ಜ್ಯುವೆಲರ್ಸ್ ಎಂ.ಡಿ.ರಾಜೇಶ್ ಕಲ್ಯಾಣ ರಾಮನ್, ರಿಷಿಕೇಶ್ ಕಲ್ಯಾಣ್ ಮತ್ತು ಮಾನಸ ಕಲ್ಯಾಣ್ ಮತ್ತು ಶಿಕ್ಷಣತಜ್ಞ ಡಾ.ಚೆನಾರಾಜ್ ಜೈನ್, ಡಿಮಿಸ್ಟಿಫೈಯಿಂಗ್ ಆರ್ಟ್ ಸಂಸ್ಥೆಯ ನಿರ್ದೇಶಕ ರಿಷಿಕೇಶ್ ಕಲ್ಯಾಣ್, ಹಿರಿಯ ವರ್ಣ ಚಿತ್ರ ಕಲಾವಿದ ಡಾ.ರೋಶನ್ ಬಾಬಿ ಕಲೆಯ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟನೆ ಮಾಡಿದರು.

ಈ ವೇಳೆ ಮಾತಾಡಿದ ಶಿವರಾಜ್ ಕುಮಾರ್, ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಆಗ ಪ್ರತಿಭೆ ಸಮಾಜಕ್ಕೆ ತಿಳಿಯುತ್ತದೆ. ಚಿತ್ರಕಲೆಯಲ್ಲಿ ಯುವ ಪ್ರತಿಭೆಗಳಾದ ರಿಷಿಕೇಶ್ ಮತ್ತು ಮಾನಸ ತಮ್ಮ ಸಮಯವನ್ನು ಸಮಾಜದ ಒಳಿತಿಗಾಗಿ ಚಿಕ್ಕ ವಯಸ್ಸಿನಲ್ಲಿ ಶ್ರಮ ವಹಿಸುತ್ತಿದ್ದಾರೆ. ಕಲೆ ಮತ್ತು ಹೃದಯಕ್ಕೆ ಹತ್ತಿರದ ಸಂಬಂಧ ಇರುತ್ತದೆ. ಯುವ ಪ್ರತಿಭೆಗಳು ರಚಿಸಿದ ಚಿತ್ರಕಲೆ ಸಮಾಜದ ಮೇಲೆ ಬೆಳಕು ಚೆಲ್ಲುತ್ತಿದೆ ಎಂದರು.

ತೇಜಸ್ವಿ ಸೂರ್ಯ ಮಾತಾಡಿ, ರಿಷಿಕೇಶ್ ಕಲ್ಯಾಣ್ ಮತ್ತು ಮಾನಸ ಕಲ್ಯಾಣ್ ಅವರು ಯುವ ಪ್ರತಿಭಾವಂತ ಚಿತ್ರಕಾರರು ಮತ್ತು ಸಾಮಾಜಿಕ ಕಳಕಳಿ ಇರುವ ಪ್ರತಿಭೆಗಳು. ವರ್ಣ ಚಿತ್ರಕಲೆಯಲ್ಲಿ ರಿಷಿಕೇಶ್ ಮಾನಸ ರವರ ಚಿತ್ರಕಲೆ ಇನ್ನು ಬೆಳಗಲಿ ನಾಡಿಗೆ ಕೀರ್ತಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಕಲಿಯುಗ್ ಸರಣಿಯ ಯುವ ವರ್ಣಚಿತ್ರಕಾರ ಮಾಸ್ಟರ್ ಋಷಿಕೇಷ್ ಕಲ್ಯಾಣ್ ಮಾತನಾಡಿ, ಇಂದು ಮನುಕುಲವು ಹಲವು ಜಾಗತಿಕ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆಯ ಬಿಕ್ಕಟ್ಟು ತಕ್ಷಣದ ಬೆದರಿಕೆಯಾಗಿ ಹೊರಹೊಮ್ಮಿದ್ದು ವಿಶ್ವದಾದ್ಯಂತ ಜೀವ ಮತ್ತು ಆಸ್ತಿಯನ್ನು ನಾಶಪಡಿಸುತ್ತಿದೆ. ಹವಾಮಾನ ಬದಲಾವಣೆಯ ಪರಿಸ್ಥಿತಿಯು ಹದಗೆಡುತ್ತಿದಂತೆ, ಹವಾಮಾನದ ಮಾದರಿಗಳಲ್ಲಿನ ದೀರ್ಘಾವಧಿಯ ಬದಲಾವಣೆಗಳು ಸಸ್ಯ ಮತ್ತು ಪ್ರಾಣಿಗಳ ಮೇಲೆ ಮಾತ್ರವಲ್ಲದೆ ಸಮುದಾಯಗಳು ಮತ್ತು ಜೀವನೋಪಾಯಗಳ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುವ ನಿರೀಕ್ಷೆಯಿದೆ. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಅಥವಾ ಅದರ ತೀವ್ರತೆ ಹಿಮ್ಮೆಟ್ಟಿಸಲು, ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ಕೆಲಸ ಮಾಡುವ ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆಯೆಂದು ನಾವು ಬಲವಾಗಿ ನಂಬುತ್ತೇವೆ ಎಂದರು.

ನಮ್ಮ ಚಿತ್ರ ಕಲಾಕೃತಿಗಳ ಮೂಲಕ, ನಾವು ಇರುವ ಸದ್ಯದ ಕಲಿಯುಗದ ಅಪಾಯಗಳನ್ನು ಪ್ರದರ್ಶಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ನಮ್ಮ ಸುತ್ತಮುತ್ತಲಿನ ಸಮುದಾಯಗಳು ಮತ್ತು ಸಮಾಜಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಸೃಷ್ಟಿಸುವತ್ತ ಸಣ್ಣ ಹೆಜ್ಜೆಗಳನ್ನು ಇಡಲು ಈ ಪ್ರದರ್ಶನ ವೀಕ್ಷಕರನ್ನು ಪ್ರೇರೇಪಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

‘ಕಲಿಯುಗ್ 2.0’ ವಾಸ್ತವಕ್ಕೆ ತೀರ ಹತ್ತಿರವಾದ ಅನುಭವದ ಮೂಲಕ ತಲೆಮಾರುಗಳವರೆಗೆ ಪ್ರಕೃತಿಯ ವರ್ಣ ವೈಭವವನ್ನು ಸಂರಕ್ಷಿಸುವ ಸುತ್ತಲೂ ಚರ್ಚೆ ನಡೆಯುವ ಉದ್ದೇಶವನ್ನು ಈ ಪ್ರದರ್ಶನ ಹೊಂದಿದೆ. ಕಲಾ ಪ್ರದರ್ಶನ ಮತ್ತು ಮಾರಾಟದಿಂದ ಬರುವ ಆದಾಯವನ್ನು ಸಂಪೂರ್ಣವಾಗಿ ಅಕ್ಷಯ ಪಾತ್ರ ಫೌಂಡೇಷನ್‌ಗೆ ದೇಣಿಗೆ ನೀಡಲಾಗುವುದು ಎಂದರು.

Leave a Reply