ಪ್ರಜ್ವಲ್ ರೇವಣ್ಣ ತಡರಾತ್ರಿ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ

2 years ago

ಬೆಂಗಳೂರು: ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಸುಳಿಗೆ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಇಂದು ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಅವರನ್ನು ವರ್ಷಕ್ಕೆ ಪಡೆಯಲು ವಿಶೇಷ ತನಿಖಾ ತಂಡ ಸಜ್ಜಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ರೇವಣ್ಣ ಪೊಲೀಸರು ನೀಡಿದ ನೊಟೀಸ್ ಮತ್ತು ವಿದೇಶಾಂಗ ಇಲಾಖೆ ಹೊರಡಿಸಿದ ಬ್ಲೂ ಕಾರ್ನರ್ ನೊಟೀಸ್ ಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದಾದ ನಂತರ ಮಾಜಿ ಪ್ರಧಾನಿ ದೇವೇಗೌಡ ತಕ್ಷಣ ಸ್ವದೇಶಕ್ಕೆ ಮರಳಬೇಕೆಂದು ನೀಡಿದ ಎಚ್ಚರಿಕೆಗೂ ಸೊಪ್ಪು ಹಾಕಿರಲಿಲ್ಲ.

ಬಳಿಕ ವಿದೇಶಾಂಗ ಇಲಾಖೆ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಪ್ರಜ್ವಲ್ ರೇವಣ್ಣ ಕೊನೆಗೆ ವಿದೇಶದಿಂದಲೇ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಮೇ 31 ರಂದು ಬೆಂಗಳೂರಿಗೆ ಆಗಮಿಸಿ ಎಸ್ ಐ ಟಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು.

ಅದರ ಪ್ರಕಾರ ಜರ್ಮನಿಯ ಮ್ಯೂನಿಕ್ ಏರ್ ಪೋರ್ಟ್ ನಿಂದ ಭಾರತೀಯ ಕಾಲಮಾನ ಎಂದು ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಆರಂಭಿಸಿರುವ ಅವರು ತಡರಾತ್ರಿ 12 ಗಂಟೆಯ ನಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆ ಇದೆ.

ಪ್ರಜ್ವಲ್ ವಿರುದ್ದ ಈಗಾಗಲೇ ಲುಕ್ ಔಟ್ ನೋಟಿಸ್ ಹೊರಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದ ಇಮಿಗ್ರೇಶನ್ ಕೇಂದ್ರದಲ್ಲಿಯೇ ವಶಕ್ಕೆ ಪಡೆಯಲಾಗುತ್ತದೆ. ಬಳಿಕ ಅವರನ್ನು ಕರ್ನಾಟಕದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗುತ್ತದೆ.

ಮತ್ತೊಂದೆಡೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ಅವರನ್ನು ಕರೆತರುವ ಏರ್ಪೋರ್ಟ್ ರಸ್ತೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಗೆ ವ್ಯವಸ್ಥೆ ಮಾಡಲಾಗಿದೆ. ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಇಂದು ಬೆಳಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಭೇಟಿ ಮಾಡಿ ಬಂದೋಬಸ್ತ್ ಕುರಿತು ಚರ್ಚಿಸಿದ್ದಾರೆ.

ಜಾಮೀನು ಅರ್ಜಿ: ಈ ನಡುವೆ ತಮಗೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ಮಧ್ಯಾಹ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.

Leave a Reply