ಭಾರತದ ಸಂವಿಧಾನ ಭಾಗ – 3: ಮೂಲಭೂತ ಹಕ್ಕುಗಳು

2 years ago

Constitution of India Part – 3 Fundamental Rights

ಭಾರತದ ಸಂವಿಧಾನ ಭಾಗ – 3: ಮೂಲಭೂತ ಹಕ್ಕುಗಳು

ಸಾಮಾನ್ಯ

12. ಪರಿಭಾಷೆ:- ಈ ಭಾಗದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು. “ರಾಜ್ಯ” ಎಂಬ ಪದವು ಭಾರತದ ಸರ್ಕಾರವನ್ನು ಮತ್ತು ಸಂಸತ್ತನ್ನು ಮತ್ತು ರಾಜ್ಯಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಜ್ಯದ ಸರ್ಕಾರವನ್ನು ಮತ್ತು ವಿಧಾನಮಂಡಲವನ್ನು ಹಾಗೂ ಭಾರತದ ರಾಜ್ಯಕ್ಷೇತ್ರದೊಳಗಿರುವ ಅಥವಾ ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲ ಸ್ಥಳೀಯ ಪ್ರಾಧಿಕಾರಗಳನ್ನು ಅಥವಾ ಇತರ ಪ್ರಾಧಿಕಾರಗಳನ್ನು ಒಳಗೊಳ್ಳುತ್ತದೆ.

13. ಮೂಲಭೂತ ಹಕ್ಕುಗಳಿಗೆ ಅಸಂಗತವಾದ ಅಥವಾ ಅವುಗಳನ್ನು ಅಲ್ಪೀಕರಿಸುವಂಥ ಕಾನೂನುಗಳು:- (1) ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ನಿಕಟಪೂರ್ವದಲ್ಲಿ ಭಾರತದ ರಾಜ್ಯಕ್ಷೇತ್ರದಲ್ಲಿ ಜಾರಿಯಲ್ಲಿರುವ ಎಲ್ಲಾ ಕಾನೂನುಗಳು ಈ ಭಾಗದ ಉಪಬಂಧಗಳಿಗೆ ಅಸಂಗತವಾಗಿರುವಷ್ಟರ ಮಟ್ಟಿಗೆ ಶೂನ್ಯವಾಗತಕ್ಕದ್ದು. (2) ಈ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಮೊಟಕುಗೊಳಿಸುವ ಯಾವುದೇ ಕಾನೂನನ್ನು ರಾಜ್ಯವು ಮಾಡತಕ್ಕದ್ದಲ್ಲ ಮತ್ತು ಈ ಖಂಡವನ್ನು ಉಲ್ಲಂಘಿಸಿ ಮಾಡಲಾದ ಯಾವುದೇ ಕಾನೂನು, ಆ ಉಲ್ಲಂಘನೆಯಷ್ಟರ ಮಟ್ಟಿಗೆ ಶೂನ್ಯವಾಗತಕ್ಕದ್ದು.(3) ಈ ಅನುಚ್ಛೇದದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು.

(ಎ) “ಕಾನೂನು” ಎಂಬುದು ಯಾವುದೇ ಅಧ್ಯಾದೇಶ, ಆದೇಶ, ಉಪವಿಧಿ, ನಿಯಮ, ವಿನಿಯಮ, ಅಧಿಸೂಚನೆ ಅಥವಾ ಭಾರತದ ರಾಜ್ಯಕ್ಷೇತ್ರದಲ್ಲಿ ಕಾನೂನಿನ ಬಲವುಳ್ಳ ರೂಢಿ ಅಥವಾ ಆಚರಣೆಯನ್ನು ಒಳಗೊಳ್ಳುತ್ತದೆ; (ಬಿ) “ಜಾರಿಯಲ್ಲಿರುವ ಕಾನೂನುಗಳು” ಎಂಬುದು ಭಾರತದ ರಾಜ್ಯಕ್ಷೇತ್ರದಲ್ಲಿನ ಯಾವುದೇ ವಿಧಾನಮಂಡಲದಿಂದ ಅಥವಾ ಇತರ ಸಕ್ಷಮ ಪ್ರಾಧಿಕಾರದಿಂದ ಈ ಸಂವಿಧಾನವು ಪ್ರಾರಂಭವಾಗುವುದಕ್ಕೆ ಮುಂಚೆ ಅಂಗೀಕೃತವಾಗಿದ್ದ ಅಥವಾ ಮಾಡಲಾಗಿದ್ದ ಮತ್ತು ಈ ಹಿಂದೆ ನಿರಸಿತವಾಗಿರದ ಕಾನೂನುಗಳನ್ನು, ಅಂಥ ಯಾವುದೇ ಕಾನೂನು ಅಥವಾ ಅವುಗಳ ಯಾವುದೇ ಭಾಗವು, ಆಗ ಎಲ್ಲ ಪ್ರದೇಶಗಳಲ್ಲಿ ಅಥವಾ ನಿರ್ದಿಷ್ಟ ಪ್ರದೇಶಗಳಲ್ಲಿ ಜಾರಿಯಲ್ಲಿ ಇಲ್ಲದಿದ್ದಾಗ್ಯೂ, ಒಳಗೊಳ್ಳುತ್ತದೆ.

(4) [ಈ ಅನುಚ್ಛೇದದಲ್ಲಿ ಇರುವುದು ಯಾವುದೂ, 368ನೆಯ ಅನುಚ್ಛೇದದ ಮೇರೆಗೆ ಮಾಡಲಾದ ಈ ಸಂವಿಧಾನದ ಯಾವುದೇ ತಿದ್ದುಪಡಿಗೆ ಅನ್ವಯವಾಗತಕ್ಕದ್ದಲ್ಲ.] (1971ನೆಯ ಇಸವಿಯ ಸಂವಿಧಾನ (ಇಪ್ಪತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.)

ಸಮಾನತೆಯ ಹಕ್ಕು

14. ಕಾನೂನಿನ ಮುಂದೆ ಸಮಾನತೆ:- ಭಾರತದ ರಾಜ್ಯಕ್ಷೇತ್ರದಲ್ಲಿ ಯಾರೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನುಗಳಿಂದ ಸಮಾನ ಸಂರಕ್ಷಣೆಯನ್ನು ರಾಜ್ಯವು ನಿರಾಕರಿಸತಕ್ಕದ್ದಲ್ಲ.

15. ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧ:-

(1) ರಾಜ್ಯವು ಯಾರೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯವನ್ನು ಮಾಡತಕ್ಕದ್ದಲ್ಲ. (2) ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳ ಅಥವಾ ಇವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾರೇ ನಾಗರಿಕನು – (ಎ) ಅಂಗಡಿಗಳು, ಸಾರ್ವಜನಿಕ ಉಪಾಹಾರ ಗೃಹಗಳು, ಹೋಟೆಲುಗಳು ಮತ್ತು ಸಾರ್ವಜನಿಕ ಮನೋರಂಜನ ಸ್ಥಳಗಳಿಗೆ ಪ್ರವೇಶಿಸುವ ಸಂಬಂಧದಲ್ಲಿ; ಅಥವಾ (ಬಿ) ಪೂರ್ಣವಾಗಿ ಅಥವಾ ಭಾಗಶಃ ರಾಜ್ಯನಿಧಿಗಳಿಂದ ಪೋಷಿತವಾದ ಅಥವಾ ಸಾರ್ವಜನಿಕರ ಉಪಯೋಗಕ್ಕಾಗಿ ಸಮರ್ಪಿತವಾದ ಬಾವಿಗಳನ್ನು, ಕೆರೆಗಳನ್ನು, ಸ್ನಾನಘಟ್ಟಗಳನ್ನು, ರಸ್ತೆಗಳನ್ನು ಮತ್ತು ಸಾರ್ವಜನಿಕರು ಸೇರುವ ಸ್ಥಳಗಳನ್ನು ಉಪಯೋಗಿಸುವ ಸಂಬಂಧದಲ್ಲಿ – ಯಾವುದೇ ಅಸಮರ್ಥತೆಗೆ, ಹೊಣೆಗಾರಿಕೆಗೆ, ನಿರ್ಬಂಧಕ್ಕೆ ಅಥವಾ ಷರತ್ತಿಗೆ ಒಳಪಟ್ಟಿರತಕ್ಕದ್ದಲ್ಲ.

(3) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಹೆಂಗಸರು ಮತ್ತು ಮಕ್ಕಳಿಗಾಗಿ ವಿಶೇಷ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. (4) ಈ ಅನುಚ್ಛೇದದಲ್ಲಿ ಅಥವಾ 29ನೆಯ ಅನುಚ್ಛೇದದ (2)ನೆಯ ಖಂಡದಲ್ಲಿ ಇರುವುದು ಯಾವುದೂ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ರಾಜ್ಯವು ಯಾವುದೇ ವಿಶೇಷ ಉಪಬಂಧವನ್ನು ಮಾಡದಂತೆ ಪ್ರತಿಬಂಧಿಸತಕ್ಕದ್ದಲ್ಲ. (1951ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) (5) ಈ ಅನುಚ್ಛೇದದಲ್ಲಿ ಅಥವಾ 19ನೇ ಅನುಚ್ಛೇದದ (1)ನೇ ಖಂಡದ (ಜಿ) ಉಪಖಂಡದಲ್ಲಿರುವುದಾವುದೂ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ಕಾನೂನಿನ ಮೂಲಕ ಯಾವುದೇ ವಿಶೇಷ ಉಪಬಂಧಗಳನ್ನು ಮಾಡದಂತೆ, ಆ ವಿಶೇಷ ಉಪಬಂಧಗಳು 30ನೇ ಅನುಚ್ಛೇದದ (1)ನೇ ಖಂಡದಲ್ಲಿ ಹೇಳಲಾದ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ರಾಜ್ಯದಿಂದ ಅನುದಾನ ಪಡೆದಿರುವ ಅಥವಾ ಅನುದಾನ ಪಡೆಯದಿರುವ ಖಾಸಗಿ ಶೈಕ್ಷಣಿಕ ಸಂಸ್ಥೆಗಳೂ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿರುವಷ್ಟರ ಮಟ್ಟಿಗೆ, ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. (2005ನೇ ಇಸವಿಯ ಸಂವಿಧಾನ (ತೊಂಬತ್ಮೂರನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ (20.1.2006 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

16. ಸಾರ್ವಜನಿಕ ನಿಯೋಜನೆಯ ವಿಷಯದಲ್ಲಿ ಸಮಾನಾವಕಾಶ:-

(1) ರಾಜ್ಯದ ಅಧೀನದಲ್ಲಿರುವ ಯಾವುದೇ ಪದಕ್ಕೆ ಸಂಬಂಧಿಸಿದಂತೆ ನಿಯೋಜನೆ ಅಥವಾ ನೇಮಕದ ವಿಷಯದಲ್ಲಿ ಎಲ್ಲ ನಾಗರಿಕರಿಗೂ ಸಮಾನ ಅವಕಾಶವಿರತಕ್ಕದ್ದು. (2) ಧರ್ಮ, ಮೂಲವಂಶ, ಜಾತಿ, ಲಿಂಗ, ಸಂತತಿ, ಜನ್ಮಸ್ಥಳ, ನಿವಾಸದ ಅಥವಾ ಇವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾರೇ ನಾಗರಿಕನು ರಾಜ್ಯದ ಅಧೀನದಲ್ಲಿರುವ ಯಾವುದೇ ನಿಯೋಜನೆಗೆ ಅಥವಾ ಪದಕ್ಕೆ ಸಂಬಂಧಿಸಿದಂತೆ ಅನರ್ಹತೆಗೆ ಒಳಗಾಗತಕ್ಕದ್ದಲ್ಲ ಅಥವಾ ಅವನ ವಿರುದ್ಧ ತಾರತಮ್ಯವನ್ನು ಮಾಡತಕ್ಕದ್ದಲ್ಲ.  (3) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, [ಒಂದು ರಾಜ್ಯ ಸರ್ಕಾರದ ಅಥವಾ ಒಕ್ಕೂಟ ರಾಜ್ಯಕ್ಷೇತ್ರದ ಅಧೀನದಲ್ಲಿರುವ ಅಥವಾ ಯಾವುದೇ ರಾಜ್ಯದ ಅಥವಾ ಒಕ್ಕೂಟ ರಾಜ್ಯಕ್ಷೇತ್ರದೊಳಗಿರುವ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಅಧೀನದಲ್ಲಿರುವ ಯಾವುದೇ ವರ್ಗದ ಅಥವಾ ವರ್ಗಗಳ ಪದಕ್ಕೆ, ನಿಯೋಜನೆಗೆ ಅಥವಾ ನೇಮಕಕ್ಕೆ ಸಂಬಂಧಿಸಿದಂತೆ ಅಂಥ ನಿಯೋಜನೆಗೆ ಅಥವಾ ನೇಮಕಕ್ಕೆ ಮುಂಚೆ ಆ ರಾಜ್ಯದಲ್ಲಿ ಅಥವಾ ಆ ಒಕ್ಕೂಟ ರಾಜ್ಯಕ್ಷೇತ್ರದಲ್ಲಿ ನಿವಾಸದ ಯಾವುದೇ ಅಗತ್ಯತೆಯನ್ನು] ನಿಯಮಿಸುವ ಯಾವುದೇ ಕಾನೂನನ್ನು ಮಾಡದಂತೆ ಸಂಸತ್ತನ್ನು ಪ್ರತಿಬಂಧಿಸತಕ್ಕದ್ದಲ್ಲ. (1956ನೆಯ ಇಸವಿಯ ಸಂವಿಧಾನ (ಏಳನೆಯ ತಿದ್ದುಪಡಿ) ಅಧಿನಿಯಮದ 29ನೆಯ ಪ್ರಕರಣದ ಹಾಗೂ ಅನುಸೂಚಿಯ ಮೂಲಕ “ಮೊದಲನೆಯ ಅನುಸೂಚಿಯಲ್ಲಿ ಉಲ್ಲೇಖಿತವಾಗಿರುವ ಯಾವುದೊಂದು ರಾಜ್ಯದ ಅಥವಾ ಅದರ ರಾಜ್ಯಕ್ಷೇತ್ರದ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಅಧೀನದಲ್ಲಿರುವ, ಯಾವುದೇ ವರ್ಗದ ಅಥವಾ ವರ್ಗಗಳ ನೌಕರಿಗೆ ಅಥವಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಆ ನೌಕರಿಗೆ ಅಥವಾ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವುದಕ್ಕೆ ಮುಂಚೆ ಆ ರಾಜ್ಯದಲ್ಲಿ ನಿವಾಸಿಸಿರಬೇಕಾದ ಸಂಗತಿಯ ಸಂಬಂಧವಾಗಿ” ಎಂಬ ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) (4) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಯಾವುದೇ ಹಿಂದುಳಿದ ವರ್ಗದ ನಾಗರಿಕರು ರಾಜ್ಯದ  ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕಾಗಿ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. (4ಎ) ಈ ಅನುಚ್ಛೇದದಲ್ಲಿರುವುದು ಯಾವುದೂ, ರಾಜ್ಯದ ಅಧೀ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ರಾಜ್ಯದ ಅಧೀನದ ಸೇವೆಗಳಲ್ಲಿನ (1995ನೆಯ ಇಸವಿಯ ಸಂವಿಧಾನ (ಎಪ್ಪತ್ತೇಳನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) [ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜೇಷ್ಠತೆಯೊಂದಿಗೆ, ಬಡ್ತಿ ವಿಷಯದಲ್ಲಿ] ಅಂಥವರಿಗಾಗಿ ಮೀಸಲಾತಿಯ ಯಾವುದೇ ಉಪಬಂಧವನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.] (2001ನೇ ಇಸವಿಯ ಸಂವಿಧಾನ (ಎಂಬತ್ತೈದನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಕೆಲವು ಪದಗಳಿಗೆ ಬದಲಾಗಿ (17.6.1995ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ) (4ಬಿ) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಒಂದು ವರ್ಷದಲ್ಲಿ, (4)ನೇ ಖಂಡದ ಅಥವಾ (4ಎ) ಖಂಡದ ಮೇರೆಗೆ ಮಾಡಿದ ಯಾವುದೇ ಮೀಸಲಾತಿ ಉಪಬಂಧಕ್ಕನುಸಾರವಾಗಿ, ಆ ವರ್ಷದಲ್ಲಿ ಭರ್ತಿ ಮಾಡುವುದಕ್ಕಾಗಿ ಯಾವುದೇ ಹುದ್ದೆಗಳನ್ನು ಮೀಸಲಾಗಿಟ್ಟಿದ್ದು, ಭರ್ತಿ ಮಾಡದೆ ಇರುವ ಆ ಹುದ್ದೆಗಳನ್ನು ಯಾವುದೇ ಮುಂಬರುವ ವರ್ಷದಲ್ಲಿ ಅಥವಾ ವರ್ಷಗಳಲ್ಲಿ ಭರ್ತಿ ಮಾಡಬೇಕಾದ ಪ್ರತ್ಯೇಕ ಹುದ್ದೆಗಳ ವರ್ಗವೆಂದು ಪರಿಗಣಿಸಲು ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ ಮತ್ತು ಅಂಥ ವರ್ಗದ ಖಾಲಿ ಹುದ್ದೆಗಳನ್ನು, ಯಾವ ವರ್ಷದಲ್ಲಿ ಅವುಗಳನ್ನ ಭರ್ತಿ ಮಾಡಿಕೊಳ್ಳಲಾಗುತ್ತದೆಯೋ ಆ ವರ್ಷದಲ್ಲಿನ ಹುದ್ದೆಗಳೊಂದಿಗೆ, ಆ ವರ್ಷದ ಒಟ್ಟು ಸಂಖ್ಯೆಯ ಹುದ್ದೆಗಳ ಮೇಲಣ ಶೇ. 50ರ ಮೀಸಲಾತಿಯ ಪರಿಮಿತಿಯನ್ನು ನಿರ್ಧರಿಸುವಾಗ, ಗಣನೆಗೆ ತೆಗೆದುಕೊಳ್ಳತಕ್ಕದ್ದಲ್ಲ. (2000ದ ಇಸವಿಯ ಸಂವಿಧಾನ (ಎಂಬತ್ತೊಂದನೆಯ ತಿದ್ದುಪಡಿ) ಅಧಿನಿಯಮದ  ಮೂಲಕ (9.6.2000ದಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) (5) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಯಾವುದೇ ಧಾರ್ಮಿಕ ಅಥವಾ ಸಾಂಪ್ರದಾಯಿಕ ಸಂಸ್ಥೆಯ ವ್ಯವಹಾರಗಳಿಗೆ ಸಂಬಂಧಪಟ್ಟ ಪದಧಾರಕನು ಅಥವಾ ಆ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಲಿಯ ಯಾರೇ ಸದಸ್ಯನು ಒಂದು ನಿರ್ದಿಷ್ಟ ಧರ್ಮವನ್ನು ಒಪ್ಪಿಕೊಂಡವನಾಗಿರತಕ್ಕದ್ದು ಅಥವಾ ಒಂದು ನಿರ್ದಿಷ್ಟ ಸಂಪ್ರದಾಯಕ್ಕೆ ಸೇರಿದವನಾಗಿರತಕ್ಕದ್ದು ಎಂಬ ಉಪಬಂಧವನ್ನು ಮಾಡುವ ಯಾವುದೇ ಕಾನೂನಿನ ಜಾರಿಗೆ ಬಾಧಕವಾಗತಕ್ಕದ್ದಲ್ಲ.

17. ಅಸ್ಪೃಶ್ಯತೆಯ ತೆಯ ನಿರ್ಮೂಲನ:- “ಅಸ್ಪೃಶ್ಯತೆ”ಯನ್ನು ನಿರ್ಮೂಲನಗೊಳಿಸಲಾಗಿದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸಲಾಗಿದೆ. “ಅಸ್ಪೃಶ್ಯತೆ”ಯಿಂದ ಉದ್ಭವಿಸುವ ಯಾವುದೇ ಅಸಮರ್ಥತೆಯನ್ನು ಆಚರಣೆಗೆ ತರುವುದು ಕಾನೂನಿಗನುಸಾರವಾಗಿ ದಂಡನೀಯವಾದ ಅಪರಾಧವಾಗತಕ್ಕದ್ದು.

18. ಬಿರುದುಗಳ ರದ್ದಿಯಾತಿ:-

(1) ರಾಜ್ಯವು ಸೇನಾ ಅಥವಾ ವಿದ್ಯಾ ಸಂಬಂಧವಾದ ಪ್ರಶಸ್ತಿಯಲ್ಲದೆ ಯಾವುದೇ ಬಿರುದನ್ನು ಪ್ರದಾನಮಾಡತಕ್ಕದ್ದಲ್ಲ. (2) ಭಾರತದ ಯಾರೇ ನಾಗರಿಕನು ಯಾವುದೇ ವಿದೇಶಿ ರಾಜ್ಯದಿಂದ ಯಾವುದೇ ಬಿರುದನ್ನು ಸ್ವೀಕರಿಸತಕ್ಕದ್ದಲ್ಲ. (3) ಭಾರತದ ನಾಗರಿಕನಲ್ಲದ ಯಾರೇ ವ್ಯಕ್ತಿಯು ರಾಜ್ಯದ ಅಧೀನದಲ್ಲಿನ ಯಾವುದೇ ಲಾಭದಾಯಕ ಅಥವಾ ನಂಬಿಕೆಯ ಪದದಲ್ಲಿರುವಾಗ ರಾಷ್ಟ್ರಪತಿಯ ಸಮ್ಮತಿಯಿಲ್ಲದೆ ಯಾವುದೇ ವಿದೇಶಿ ರಾಜ್ಯದಿಂದ ಯಾವುದೇ ಬಿರುದನ್ನು ಸ್ವೀಕರಿಸತಕ್ಕದ್ದಲ್ಲ. (4) ರಾಜ್ಯದ ಅಧೀನದಲ್ಲಿನ ಯಾವುದೇ ಲಾಭದಾಯಕ ಅಥವಾ ನಂಬಿಕೆಯ ಪದದಲ್ಲಿರುವ ಯಾರೇ ವ್ಯಕ್ತಿಯು ರಾಷ್ಟ್ರಪತಿಯ ಸಮ್ಮತಿಯಿಲ್ಲದೆ ಯಾವುದೇ ವಿದೇಶಿ ರಾಜ್ಯದಿಂದ ಯಾವುದೇ ಪಾರಿತೋಷಕವನ್ನು, ಉಪಲಬ್ಧಿಯನ್ನು ಅಥವಾ ಯಾವುದೇ ವಿದೇಶಿ ರಾಜ್ಯದ ಅಧೀನದಲ್ಲಿನ ಯಾವುದೇ ವಿಧದ ಪದವನ್ನು ಸ್ವೀಕರಿಸತಕ್ಕದ್ದಲ್ಲ.

ಸ್ವಾತಂತ್ರ್ಯದ ಹಕ್ಕು

19. ವಾಕ್ ಸ್ವಾತಂತ್ರ್ಯ, ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ:-

(1) ಸಮಸ್ತ ನಾಗರಿಕರೂ.

(ಎ) ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ; (ಬಿ) ಶಾಂತಿಯಿಂದ ಹಾಗೂ ನಿರಾಯುಧರಾಗಿ ಸಭೆ ಸೇರುವ; (ಸಿ) ಸಂಸ್ಥೆಗಳನ್ನು ಅಥವಾ ಸಂಘಗಳನ್ನು ರಚಿಸುವ; (ಡಿ) ಭಾರತದ ರಾಜ್ಯಕ್ಷೇತ್ರದಲ್ಲಿ ಅಬಾಧಿತವಾಗಿ ಸರ್ವತ್ರಸಂಚಾರ ಮಾಡುವ; (ಇ) ಭಾರತದ ರಾಜ್ಯಕ್ಷೇತ್ರದ ಯಾವುದೇ ಭಾಗದಲ್ಲಿ ವಾಸಮಾಡುವ ಮತ್ತು ನೆಲೆಸುವ; (1978ನೇ ಇಸವಿಯ ಸಂವಿಧಾನ (ನಲವತ್ನಾಲ್ಕನೇ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ (20.6.1979 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) (ಮತ್ತು) (2ನೇ ಪ್ರಕರಣದ ಮೂಲಕ (20.6.1979 ರಿಂದ ಜಾರಿಗೆ ಬರುವಂತೆ) ಉಪಖಂಡ (ಎಫ್)ನ್ನು ಬಿಟ್ಟುಬಿಡಲಾಗಿದೆ.) (ಜಿ) ಯಾವುದೇ ವೃತ್ತಿಯನ್ನು ನಡೆಸುವ ಅಥವಾ ಕಸುಬನ್ನು, ವ್ಯಾಪಾರವನ್ನು ಅಥವಾ ವ್ಯವಹಾರವನ್ನು ನಡೆಸುವ – ಹಕ್ಕನ್ನು ಹೊಂದಿರತಕ್ಕದ್ದು.

[(2) (1)ನೆಯ ಖಂಡದ (ಎ) ಉಪಖಂಡದಲ್ಲಿ ಇರುವುದು ಯಾವುದೂ, [ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ,] ರಾಜ್ಯದ ಭದ್ರತೆಯ, ವಿದೇಶಿ ರಾಜ್ಯಗಳೊಡನೆ ಸ್ನೇಹಯುತ ಸಂಬಂಧಗಳ, ಸಾರ್ವಜನಿಕ ಸುವ್ಯವಸ್ಥೆಯ, ಸಭ್ಯತೆಯ ಅಥವಾ ನೈತಿಕತೆಯ ಹಿತದೃಷ್ಟಿಯಿಂದ ಅಥವಾ ನ್ಯಾಯಾಲಯದ ನಿಂದನೆಯ, ಮಾನನಷ್ಟದ ಅಥವಾ ಒಂದು ಅಪರಾಧದ ಚಿತಾವಣೆಯ ಸಂಬಂಧದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಸದರಿ ಉಪಖಂಡದಿಂದ ಪ್ರದಾನ ಮಾಡಲಾಗಿರುವ ಹಕ್ಕನ್ನು ಚಲಾಯಿಸುವುದರ ಮೇಲೆ ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.] (1951ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ (2)ನೆಯ ಖಂಡಕ್ಕೆ ಬದಲಾಗಿ (ಪೂರ್ವಾನ್ವಯ ಪರಿಣಾಮ ಸಹಿತವಾಗಿ) ಪ್ರತ್ಯಾಯೋಜಿಸಲಾಗಿದೆ.) (3) ಸದರಿ ಖಂಡದ (ಬಿ) ಉಪಖಂಡದಲ್ಲಿರುವುದು ಯಾವುದೂ, [ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ ಅಥವಾ] (1963ನೆಯ ಇಸವಿಯ ಸಂವಿಧಾನ (ಹದಿನಾರನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಸದರಿ ಉಪಖಂಡದಿಂದ ಪ್ರದಾನ ಮಾಡಲಾದ ಹಕ್ಕನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಯಾವುದೇ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. (4) ಸದರಿ ಖಂಡದ (ಸಿ) ಉಪಖಂಡದಲ್ಲಿರುವುದು ಯಾವುದೂ, [ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ ಅಥವಾ] (1963ನೆಯ ಇಸವಿಯ ಸಂವಿಧಾನ (ಹದಿನಾರನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.) ಸಾರ್ವಜನಿಕ ಸುವ್ಯವಸ್ಥೆಯ ಅಥವಾ ನೈತಿಕತೆಯ ಹಿತದೃಷ್ಟಿಯಿಂದ ಸದರಿ ಉಪಖಂಡದಿಂದ ಪ್ರದಾನ ಮಾಡಲಾದ ಹಕ್ಕನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. (5) ಸದರಿ ಖಂಡದ [(ಡಿ) ಮತ್ತು (ಇ) ಖಂಡಗಳಲ್ಲಿ) (1978ನೆಯ ಇಸವಿಯ (ನಲವತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ದಿನಾಂಕ 20-6-1979ರಿಂದ ಜಾರಿಗೆ ಬರುವಂತೆ (ಡಿ), (ಇ) ಮತ್ತು (ಎಫ್) ಉಪಖಂಡಗಳ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಇರುವುದು ಯಾವುದೂ, ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಯಾವುದೇ ಅನುಸೂಚಿತ ಬುಡಕಟ್ಟುಗಳ ಹಿತರಕ್ಷಣೆಗಾಗಿ ಸದರಿ ಉಪಖಂಡಗಳಿಂದ ಪ್ರದಾನ ಮಾಡಲಾದ ಯಾವುದೇ ಹಕ್ಕುಗಳನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. (6) ಸದರಿ ಖಂಡದ (ಜಿ) ಉಪಖಂಡದಲ್ಲಿರುವುದು ಯಾವುದೂ, ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಉಪಖಂಡದಿಂದ ಪ್ರದಾನ ಮಾಡಲಾದ ಹಕ್ಕನ್ನು ಚಲಾಯಿಸುವುದರ ಮೇಲೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನು ಯುಕ್ತ ನಿರ್ಬಂಧಗಳನ್ನು ವಿಧಿಸುವಷ್ಟರ ಮಟ್ಟಿಗೆ ಅಂಥ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯುಕ್ತ ನಿರ್ಬಂಧಗಳನ್ನು ವಿಧಿಸುವ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ ಮತ್ತು ವಿಶೇಷವಾಗಿ ಸದರಿ ಉಪಖಂಡದಲ್ಲಿರುವುದು ಯಾವುದೂ.-

(i) ಯಾವುದೇ ವೃತ್ತಿಯನ್ನು, ಕಸುಬನ್ನು, ವ್ಯಾಪಾರವನ್ನು ಅಥವಾ ವ್ಯವಹಾರವನ್ನು ನಡೆಸಲು ಅವಶ್ಯವಾದ ವೃತ್ತೀಯ ಅಥವಾ ತಾಂತ್ರಿಕ ಅರ್ಹತೆಗಳಿಗೆ; ಅಥವಾ

(ii) ಯಾವುದಾದರೂ ವ್ಯಾಪಾರವನ್ನು, ವ್ಯವಹಾರವನ್ನು, ಕೈಗಾರಿಕೆಯನ್ನು ಅಥವಾ ಸೇವೆಯನ್ನು, ರಾಜ್ಯವೇ ಆಗಲಿ ಅಥವಾ ರಾಜ್ಯದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ನಿಗಮವೇ ಆಗಲಿ, ಪೂರ್ಣವಾಗಿ ಅಥವಾ ಭಾಗಶಃ ನಾಗರಿಕರನ್ನು ಸೇರಿಸಿಕೊಳ್ಳದೆ ಅಥವಾ ಅನ್ಯಥಾ ನಡೆಸಿಕೊಂಡು ಬರುವುದಕ್ಕೆ – ಸಂಬಂಧಪಡುವಷ್ಟರ ಮಟ್ಟಿಗೆ ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಜಾರಿಯ ಮೇಲೆ [ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅವುಗಳಿಗೆ ಸಂಬಂಧಪಟ್ಟಂತೆ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ.] (1951ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ ಕೆಲವು ಪದಗಳಿಗೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.)

20. ಅಪರಾಧಗಳ ಬಗ್ಗೆ ಅಪರಾಧಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ಸಂರಕ್ಷಣೆ:- (1) ಯಾವ ಕೃತ್ಯ ಎಸಗಿರುವುದನ್ನು ಅಪರಾಧವೆಂದು ಆರೋಪಿಸಲಾಗಿದೆಯೋ ಆ ಕೃತ್ಯವನ್ನು ಎಸಗಿದ ಕಾಲದಲ್ಲಿ ಜಾರಿಯಲ್ಲಿರುವ ಕಾನೂನಿನ ಉಲ್ಲಂಘನೆ ಮಾಡಿದ ಯಾರೇ ವ್ಯಕ್ತಿಯನ್ನು ಆ ಅಪರಾಧದ ಬಗ್ಗೆ ಮಾತ್ರ ಅಪರಾಧಿಯೆಂದು ನಿರ್ಣಯಿಸತಕ್ಕದ್ದೇ ಹೊರತು ಮತ್ತಾವುದೇ ಅಪರಾಧದ ಬಗ್ಗೆ ಅಪರಾಧಿಯೆಂದು ನಿರ್ಣಯಿಸತಕ್ಕದಲ್ಲ ಮತ್ತು ಆ ಅಪರಾಧವು ನಡೆದ ಕಾಲದಲ್ಲಿ ಜಾರಿಯಲ್ಲಿರತಕ್ಕ ಕಾನೂನಿನ ಮೇರೆಗೆ ವಿಧಿಸಬಹುದಾಗಿದ್ದ ದಂಡನೆಗಿಂತ ಹೆಚ್ಚಿನ ದಂಡನೆಗೆ ಅವನನ್ನು ಗುರಿಪಡಿಸತಕ್ಕದ್ದಲ್ಲ.(2) ಯಾರೇ ವ್ಯಕ್ತಿಯನ್ನು ಒಂದೇ ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಸಲ ಪ್ರಾಸಿಕ್ಯೂಷನ್‌ಗೆ ಗುರಿಪಡಿಸತಕ್ಕದ್ದಲ್ಲ. ಹಾಗೂ ದಂಡಿಸತಕ್ಕದ್ದಲ್ಲ. (3) ಯಾವುದೇ ಅಪರಾಧದ ಸಂಬಂಧದಲ್ಲಿ ಆರೋಪಿತನಾಗಿರುವ ಯಾರೇ ವ್ಯಕ್ತಿಯನ್ನು ತನ್ನ ವಿರುದ್ಧವಾಗಿ ತಾನೇ ಸಾಕ್ಷಿಯಾಗುವಂತೆ ಒತ್ತಾಯಿಸತಕ್ಕದ್ದಲ್ಲ.

21. ಜೀವದ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ:- ಕಾನೂನಿನ ಮೂಲಕ ಸ್ಥಾಪಿತವಾಗಿರುವ ಪ್ರಕ್ರಿಯೆಗೆ ಅನುಸಾರವಾಗಿ ಹೊರತು, ಯಾರೇ ವ್ಯಕ್ತಿಯ ಜೀವವನ್ನು ಅಥವಾ ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡತಕ್ಕದ್ದಲ್ಲ.

[21ಎ, ಶಿಕ್ಷಣದ ಹಕ್ಕು:- ರಾಜ್ಯವು, ಕಾನೂನಿನ ಮೂಲಕ ತಾನು ನಿರ್ಧರಿಸಬಹುದಾದಂಥ ರೀತಿಯಲ್ಲಿ ಆರರಿಂದ ಹದಿನಾಲ್ಕು ವರ್ಷಗಳ ವಯಸ್ಸಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸತಕ್ಕದ್ದು.] (2002ನೇ ಇಸವಿಯ ಸಂವಿಧಾನ (ಎಂಬತ್ತಾರನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ (1.4.2010 ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

22. ಕೆಲವು ಸಂದರ್ಭಗಳಲ್ಲಿ ದಸ್ತಗಿರಿಯಿಂದ ಮತ್ತು ಸ್ಥಾನಬದ್ಧತೆಯಿಂದ ಸಂರಕ್ಷಣೆ:- (1) ದಸ್ತಗಿರಿಯಾದ ಯಾರೇ ವ್ಯಕ್ತಿಗೆ, ಅಂಥ ದಸ್ತಗಿರಿಯ ಕಾರಣಗಳನ್ನು ಆದಷ್ಟು ಬೇಗನೆ ತಿಳಿಸದೆ ಅವನನ್ನು ಅಭಿರಕ್ಷೆಯಲ್ಲಿ ತಡೆಹಿಡಿದಿರಿಸತಕ್ಕದ್ದಲ್ಲ ಮತ್ತು ತನಗೆ ಇಷ್ಟವಾದ ನ್ಯಾಯವಾದಿಯೊಡನೆ ಸಮಾಲೋಚಿಸುವ ಮತ್ತು ಅವನ ಮೂಲಕ ಪ್ರತಿರಕ್ಷಿಸಿಕೊಳ್ಳುವ ಹಕ್ಕನ್ನು ಆ ವ್ಯಕ್ತಿಗೆ ನಿರಾಕರಿಸತಕ್ಕದ್ದಲ್ಲ. (2) ದಸ್ತಗಿರಿಯಾದ ಹಾಗೂ ಅಭಿರಕ್ಷೆಯಲ್ಲಿ ತಡೆಹಿಡಿದಿರಿಸಲಾದ ಪ್ರತಿಯೊಬ್ಬ ವ್ಯಕ್ತಿಯನ್ನು, ದಸ್ತಗಿರಿಯಾದ ಸ್ಥಳದಿಂದ ಮ್ಯಾಜಿಸ್ಟ್ರೇಟನ ನ್ಯಾಯಾಲಯಕ್ಕೆ ಹೋಗುವುದಕ್ಕೆ ಅವಶ್ಯವಾದ ಕಾಲವನ್ನು ಹೊರತುಪಡಿಸಿ, ದಸ್ತಗಿರಿಯ ತರುವಾಯ ಇಪ್ಪತ್ತನಾಲ್ಕು ಗಂಟೆಗಳ ಅವಧಿಯೊಳಗಾಗಿ ಅತ್ಯಂತ ಸಮೀಪದ ಮ್ಯಾಜಿಸ್ಟ್ರೇಟನ ಮುಂದೆ ಹಾಜರುಪಡಿಸತಕ್ಕದ್ದು ಮತ್ತು ಮ್ಯಾಜಿಸ್ಟ್ರೇಟನಿಂದ ಅಧಿಕಾರವನ್ನು ಪಡೆಯದೆ ಅಂಥ ಯಾರೇ ವ್ಯಕ್ತಿಯನ್ನು ಸದರಿ ಅವಧಿಗಿಂತ ಹೆಚ್ಚಾಗಿ ಅಭಿರಕ್ಷೆಯಲ್ಲಿ ತಡೆಹಿಡಿದಿರಿಸತಕ್ಕದ್ದಲ್ಲ. (3) (1)ನೆಯ ಮತ್ತು (2)ನೆಯ ಖಂಡಗಳಲ್ಲಿ ಇರುವುದು ಯಾವುದೂ.-

(ಎ) ತತ್ಕಾಲದಲ್ಲಿ ಅನ್ಯದೇಶೀಯ ಶತ್ರುವಾಗಿರುವ ಯಾರೇ ವ್ಯಕ್ತಿಗೆ; ಅಥವಾ (ಬಿ) ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ದಸ್ತಗಿರಿಯಾದ ಅಥವಾ ತಡೆಹಿಡಿದಿರಿಸಲಾದ ಯಾರೇ ವ್ಯಕ್ತಿಗೆ – ಅನ್ವಯಿಸತಕ್ಕದ್ದಲ್ಲ.

(4) ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನು ಯಾರೇ ವ್ಯಕ್ತಿಯನ್ನು, (1978ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 3ನೇ ಪ್ರಕರಣದ ಮೂಲಕ (4)ನೇ ಖಂಡವನ್ನು ಈ ಮುಂದಿನಂತೆ ಪ್ರತ್ಯಾಯೋಜಿಸಲಾಗಿದೆ. (ಇದು ಇನ್ನೂ ಜಾರಿಗೆ ಬಂದಿರುವುದಿಲ್ಲ. ದಿನಾಂಕವನ್ನು ನಂತರ ಅಧಿಸೂಚಿಸಲಾಗುವುದು.)

(4) ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನು ಯಾರೇ ವ್ಯಕ್ತಿಯನ್ನು ಎರಡು ತಿಂಗಳುಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ, ಸಮುಚಿತ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ಶಿಫಾರಸುಗಳಿಗೆ ಅನುಸಾರವಾಗಿ ರಚಿತವಾದ ಸಲಹಾ ಮಂಡಲಿಯು ಸದರಿ ಎರಡು ತಿಂಗಳ ಅವಧಿಯನ್ನು ಪೂರೈಸುವುದಕ್ಕೆ ಮುಂಚಿತವಾಗಿ ತನ್ನ ಅಭಿಪ್ರಾಯದಲ್ಲಿ ಅಂಥ ಸ್ಥಾನಬದ್ಧತೆಗೆ ಸಾಕಷ್ಟು ಕಾರಣವಿರುವುದಾಗಿ ವರದಿ ಮಾಡಿರುವಾಗ ಹೊರತು ಹಾಗೆ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ:

ಪರಂತು, ಸಲಹಾ ಮಂಡಳಿಯು, ಅಧ್ಯಕ್ಷನನ್ನು ಮತ್ತು ಇಬ್ಬರಿಗಿಂತ ಕಡಿಮೆ ಇಲ್ಲದ ಇತರೆ ಇಬ್ಬರು ಸದಸ್ಯರನ್ನು ಒಳಗೊಂಡಿರತಕ್ಕದ್ದು ಮತ್ತು ಅಧ್ಯಕ್ಷನು, ಸಮುಚಿತ ಉಚ್ಚ ನ್ಯಾಯಾಲಯದ ನ್ಯಾಯಾಧೀಶನಾಗಿ ಸೇವೆ ಸಲ್ಲಿಸುತ್ತಿರುವವರಾಗಿರತಕ್ಕದ್ದು ಮತ್ತು ಇತರ ಸದಸ್ಯರು ಯಾವುದೇ ಉಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ನ್ಯಾಯಾಧೀಶರಾಗಿರತಕ್ಕದ್ದು.

ಮತ್ತೂ ಪರಂತು, ಈ ಖಂಡದಲ್ಲಿರುವುದು ಯಾವುದೂ, ಯಾರೇ ವ್ಯಕ್ತಿಯನ್ನು 7ನೇ ಖಂಡದ (ಎ) ಉಪಖಂಡದ ಮೇರೆಗೆ, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ನಿಯಮಿಸಲಾದ ಗರಿಷ್ಠ ಅವಧಿಯನ್ನು ಮೀರಿ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ.

ವಿವರಣೆ:- ಈ ಖಂಡದಲ್ಲಿ “ಸಮುಚಿತ ಉಚ್ಚ ನ್ಯಾಯಾಲಯ” ಎಂದರೆ,-

  • ಭಾರತ ಸರ್ಕಾರವು ಅಥವಾ ಆ ಸರ್ಕಾರಕ್ಕೆ ಅಧೀನನಾಗಿರುವ ಒಬ್ಬ ಅಧಿಕಾರಿಯು ಅಥವಾ ಪ್ರಾಧಿಕಾರವು ಮಾಡಿದ ಸ್ಥಾನಬದ್ಧತೆಯ ಆದೇಶಕ್ಕೆ ಅನುಸಾರವಾಗಿ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿ ಇಡುವ ಸಂದರ್ಭದಲ್ಲಿ, ದೆಹಲಿ ಒಕ್ಕೂಟ ರಾಜ್ಯಕ್ಷೇತ್ರದ ಉಚ್ಚ ನ್ಯಾಯಾಲಯ;
  • ಯಾವುದೇ ರಾಜ್ಯ ಸರ್ಕಾರವು (ಒಕ್ಕೂಟ ರಾಜ್ಯಕ್ಷೇತ್ರವಲ್ಲದ) ಮಾಡಿದ ಸ್ಥಾನಬದ್ಧತೆಯ ಒಂದು ಆದೇಶದ ಅನುಸಾರವಾಗಿ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿ ಇಡುವ ಸಂದರ್ಭದಲ್ಲಿ ಆ ರಾಜ್ಯದ ಉಚ್ಚ ನ್ಯಾಯಾಲಯ; ಮತ್ತು
  • ಒಕ್ಕೂಟ ರಾಜ್ಯಕ್ಷೇತ್ರದ ಆಡಳಿತಾಧಿಕಾರಿಯು ಅಥವಾ ಅಂಥ ಆಡಳಿತಾಧಿಕಾರಿಗೆ ಅಧೀನನಾದ ಅಧಿಕಾರಿಯು ಅಥವಾ ಪ್ರಾಧಿಕಾರಿಯು ಮಾಡಿದ ಸ್ಥಾನಬದ್ಧತೆಯ ಒಂದು ಆದೇಶದ ಅನುಸಾರವಾಗಿ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿ ಇಡುವ ಸಂದರ್ಭದಲ್ಲಿ ಈ ಬಗ್ಗೆ ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿರ್ದಿಷ್ಟಪಡಿಸಬಹುದಾದಂಥ ಉಚ್ಚ ನ್ಯಾಯಾಲಯ.”.)

(ಎ) ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿರುವವರನ್ನು ಅಥವಾ ಆಗಿದ್ದವರನ್ನು ಅಥವಾ ಅಂಥ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹತೆ ಪಡೆದಿರುವವರನ್ನು ಒಳಗೊಂಡ ಸಲಹಾ ಮಂಡಲಿಯು, ಸದರಿ ಮೂರು ತಿಂಗಳ ಅವಧಿಯು ಪೂರೈಸುವುದಕ್ಕೆ ಮುಂಚಿತವಾಗಿ, ತನ್ನ ಅಭಿಪ್ರಾಯದಲ್ಲಿ ಅಂಥ ಸ್ಥಾನಬದ್ಧತೆಗೆ ಸಾಕಷ್ಟು ಕಾರಣವಿರುವುದಾಗಿ ವರದಿ ಮಾಡಿದ ಸಂದರ್ಭದಲ್ಲಿ ಹೊರತು:

ಪರಂತು, ಈ ಉಪಖಂಡದಲ್ಲಿ ಇರುವುದು ಯಾವುದೂ, ಯಾರೇ ವ್ಯಕ್ತಿಯನ್ನು (7)ನೆಯ ಖಂಡದ (ಬಿ) ಉಪಖಂಡದ ಮೇರೆಗೆ, ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ನಿಯಮಿಸಲಾದ ಗರಿಷ್ಠ ಅವಧಿಯನ್ನು ಮೀರಿ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ; ಅಥವಾ

ಬಿ) ಅಂಥ ವ್ಯಕ್ತಿಯನ್ನು (7)ನೆಯ ಖಂಡದ (ಎ) ಮತ್ತು (ಬಿ) ಉಪಖಂಡಗಳ ಮೇರೆಗೆ ಸಂಸತ್ತು ಮಾಡಿದ ಯಾವುದೇ ಕಾನೂನಿನ ಉಪಬಂಧಗಳಿಗನುಸಾರವಾಗಿ ಸ್ಥಾನಬದ್ಧತೆಯಲ್ಲಿ ಇಟ್ಟಿರುವ ಸಂದರ್ಭದಲ್ಲಿ ಹೊರತು – ಮೂರು ತಿಂಗಳುಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ಸ್ಥಾನಬದ್ಧತೆಯಲ್ಲಿಡುವುದನ್ನು ಅಧಿಕೃತಗೊಳಿಸತಕ್ಕದ್ದಲ್ಲ.

(5) ಪ್ರತಿಬಂಧಕ ಸ್ಥಾನಬದ್ಧತೆಗೆ ಅವಕಾಶ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ಮಾಡಲಾದ ಆದೇಶಕ್ಕೆ ಅನುಸಾರವಾಗಿ ಯಾರೇ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿಟ್ಟಿದ್ದರೆ, ಆ ಆದೇಶವನ್ನು ಮಾಡಿದ ಪ್ರಾಧಿಕಾರಿಯು ಆದಷ್ಟು ಬೇಗನೆ, ಆ ಆದೇಶವನ್ನು ಯಾವ ಆಧಾರದ ಮೇಲೆ ಮಾಡಲಾಯಿತೆಂಬುದನ್ನು ಆ ವ್ಯಕ್ತಿಗೆ ತಿಳಿಸತಕ್ಕದ್ದು ಮತ್ತು ಆ ಆದೇಶದ ವಿರುದ್ಧ ಶೀಘ್ರಾತಿಶೀಘ್ರವಾಗಿ ಮನವಿಯನ್ನು ಮಾಡಿಕೊಳ್ಳಲು ಆ ವ್ಯಕ್ತಿಗೆ ಅವಕಾಶ ಕೊಡತಕ್ಕದ್ದು.

(6) (5)ನೆಯ ಖಂಡದಲ್ಲಿ ಇರುವುದು ಯಾವುದೂ ಆ ಖಂಡದಲ್ಲಿ ಉಲ್ಲೇಖಿಸಿರುವ ಯಾವುದೇ ಆದೇಶವನ್ನು ಮಾಡುವ ಪ್ರಾಧಿಕಾರಿಯು, ಯಾವ ಸಂಗತಿಗಳನ್ನು ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವೆಂದು ಅವನು ಪರ್ಯಾಲೋಚಿಸುತ್ತಾನೋ, ಆ ಸಂಗತಿಗಳನ್ನು ಬಹಿರಂಗಪಡಿಸುವಂತೆ ಅವನನ್ನು ಅಗತ್ಯಪಡಿಸತಕ್ಕದ್ದಲ್ಲ.

(7) ಸಂಸತ್ತು, ಕಾನೂನಿನ ಮೂಲಕ,-

(ಎ) ಯಾವ ಸನ್ನಿವೇಶಗಳಲ್ಲಿ ಮತ್ತು ಯಾವ ವರ್ಗದ ಅಥವಾ ವರ್ಗಗಳ ಪ್ರಕರಣಗಳಲ್ಲಿ ಪ್ರತಿಬಂಧಕ ಸ್ಥಾನಬದ್ಧತೆಗೆ ಉಪಬಂಧ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ಯಾರೇ ವ್ಯಕ್ತಿಯನ್ನು ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಯವರೆಗೆ (4)ನೆಯ ಖಂಡದ (ಎ) ಉಪಖಂಡದ ಉಪಬಂಧಗಳಿಗೆ ಅನುಸಾರವಾಗಿ ಸಲಹಾ ಮಂಡಲಿಯ ಅಭಿಪ್ರಾಯವನ್ನು ಪಡೆಯದೆ ಸ್ಥಾನಬದ್ಧತೆಯಲ್ಲಿ ಇಡಬಹುದು ಎಂಬುದನ್ನು ನಿಯಮಿಸಬಹುದು; (1978ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮ 3ನೇ ಪ್ರಕರಣದ ಮೂಲಕ ಉಪಖಂಡ (ಎ)ಯನ್ನು ಬಿಟ್ಟುಬಿಡತಕ್ಕದ್ದು. (ಇದು ಇನ್ನೂ ಜಾರಿಗೆ ಬಂದಿರುವುದಿಲ್ಲ, ದಿನಾಂಕವನ್ನು ಸಂತರ ಅಧಿಸೂಚಿಸಲಾಗುವುದು)

(ಬಿ) ಪ್ರತಿಬಂಧಕ ಸ್ಥಾನಬದ್ಧತೆಗೆ ಉಪಬಂಧ ಕಲ್ಪಿಸುವ ಯಾವುದೇ ಕಾನೂನಿನ ಮೇರೆಗೆ ಯಾವ ವರ್ಗದ ಅಥವಾ ವರ್ಗಗಳ ಪ್ರಕರಣಗಳಲ್ಲಿ ಗರಿಷ್ಠ ಎಷ್ಟು ಅವಧಿಯವರೆಗೆ ಯಾರೇ ವ್ಯಕ್ತಿಯನ್ನು ಸ್ಥಾನಬದ್ಧತೆಯಲ್ಲಿಡಬಹುದೆಂಬುದನ್ನು ನಿಯಮಿಸಬಹುದು, ಮತ್ತು (3ನೆಯ ಪ್ರಕರಣದ ಮೂಲಕ ಉಪಖಂಡ (ಬಿ)ಯನ್ನು ಉಪಖಂಡ (ಎ) ಎಂದು ಪುನರ್ ಅಕ್ಷರ ನೀಡಲಾಗಿದೆ. (ಇದು ಇನ್ನೂ ನಾರಿಗೆ ಬಂದಿರುವುದಿಲ್ಲ, ದಿನಾಂಕವನ್ನು ನಂತರ ಅಧಿಸೂಚಿಸಲಾಗುವುದು)

(ಸಿ) ಸಲಹಾ ಮಂಡಲಿಯು [(4)ನೆಯ ಖಂಡದ (ಎ) ಉಪಖಂಡದ ಮೇರೆಗೆ ನಡೆಸತಕ್ಕ ವಿಚಾರಣೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನವನ್ನು ನಿಯಮಿಸಬಹುದು. 3ನೇ ಪ್ರಕರಣದ ಮೂಲಕ ಆವರಣದಲ್ಲಿರುವ ಪದಗಳು, ಅಕ್ಷರಗಳು ಮತ್ತು ಅಂಕಿಗಳನ್ನು “(4)ನೇ ಖಂಡದ” ಎಂದು ಪ್ರತ್ಯಾಯೋಜಿಸತಕ್ಕದ್ದು. (ಇದು ಇನ್ನೂ ಜಾರಿಗೆ ಬಂದಿರುವುದಿಲ್ಲ, ದಿನಾಂಕವನ್ನು ನಂತರ ಅಧಿಸೂಚಿಸಲಾಗುವುದು.)

ಶೋಷಣೆಯ ವಿರುದ್ಧ ಹಕ್ಕು

23. ಮಾನವ ದುರ್ವವಹಾರ ಮತ್ತು ಬಲಾತ್ಕಾರದ ದುಡಿಮೆಯ ನಿಷೇಧ:- (1) ಮಾನವ ದುರ್ವ್ಯವಹಾರವನ್ನು ಮತ್ತು ಬೇಗಾರ ಮತ್ತು ಅದೇ ಸ್ವರೂಪದ ಇತರ ಬಲಾತ್ಕಾರದ ದುಡಿಮೆಗಳನ್ನು ನಿಷೇಧಿಸಲಾಗಿದೆ ಮತ್ತು ಈ ಉಪಬಂಧದ ಯಾವುದೇ ಉಲ್ಲಂಘನೆಯು ಕಾನೂನಿಗೆ ಅನುಸಾರವಾಗಿ ದಂಡನೀಯವಾದ ಅಪರಾಧವಾಗತಕ್ಕದ್ದು. (2) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, ಸಾರ್ವಜನಿಕ ಉದ್ದೇಶಗಳಿಗಾಗಿ ರಾಜ್ಯವು ಕಡ್ಡಾಯ ಸೇವೆಯನ್ನು ವಿಧಿಸುವುದನ್ನು ಪ್ರತಿಬಂಧಿಸತಕ್ಕದ್ದಲ್ಲ ಮತ್ತು ಅಂಥ ಸೇವೆಯನ್ನು ವಿಧಿಸುವಾಗ ರಾಜ್ಯವು ಧರ್ಮ, ಮೂಲವಂಶ, ಜಾತಿ ಅಥವಾ ವರ್ಗದ ಅಥವಾ ಅವುಗಳಲ್ಲಿ ಯಾವುದೇ ಬಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯ ಮಾಡತಕ್ಕದ್ದ.

24. ಕಾರ್ಖಾನೆಗಳು, ಮುಂತಾದವುಗಳಲ್ಲಿ ಮಕ್ಕಳ ನಿಯೋಜನೆಗೆ ನಿಷೇಧ:- ಹದಿನಾಲ್ಕು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಯಾವುದೇ ಕಾರ್ಖಾನೆಯಲ್ಲಿ ಅಥವಾ ಗಣಿಯಲ್ಲಿ ಕೆಲಸ ಮಾಡಲು ನಿಯೋಜಿಸತಕ್ಕದ್ದಲ್ಲ ಅಥವಾ ಇತರ ಯಾವುದೇ ಅಪಾಯಕರವಾದ ಉದ್ಯೋಗದಲ್ಲಿ ತೊಡಗಿಸತಕ್ಕದ್ದಲ್ಲ.

ಧರ್ಮ ಸ್ವಾತಂತ್ರ್ಯದ ಹಕ್ಕು

25. ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಬಾಧಿತ ಅವಲಂಬನೆ, ಆಚರಣೆ ಮತ್ತು ಪ್ರಚಾರ:- (1) ಸಾರ್ವಜನಿಕ ಸುವ್ಯವಸ್ಥೆಗೆ, ನೈತಿಕತೆಗೆ ಮತ್ತು ಆರೋಗ್ಯಕ್ಕೆ ಹಾಗೂ ಈ ಭಾಗದ ಇತರ ಉಪಬಂಧಗಳಿಗೆ ಒಳಪಟ್ಟು ಎಲ್ಲಾ ವ್ಯಕ್ತಿಗಳು ಅಂತಃಸಾಕ್ಷಿ ಸ್ವಾತಂತ್ರ್ಯಕ್ಕೆ ಸಮಾನ ರೀತಿಯಲ್ಲಿ ಹಕ್ಕುಳ್ಳವರಾಗಿರುತ್ತಾರೆ ಹಾಗೂ ಅಬಾಧಿತವಾಗಿ ಧರ್ಮವನ್ನು ಅವಲಂಬಿಸುವುದಕ್ಕೆ, ಆಚರಿಸುವುದಕ್ಕೆ ಮತ್ತು ಪ್ರಚಾರ ಮಾಡುವುದಕ್ಕೆ ಹಕ್ಕುಳ್ಳವರಾಗಿರುತ್ತಾರೆ. (2) ಈ ಅನುಚ್ಛೇದದಲ್ಲಿ ಇರುವುದು ಯಾವುದೂ, (ಎ) ಧಾರ್ಮಿಕ ಆಚರಣೆಯೊಂದಿಗೆ ಸಂಬಂಧ ಹೊಂದಿರಬಹುದಾದ ಯಾವುದೇ ಆರ್ಥಿಕ, ಹಣಕಾಸಿನ, ರಾಜಕೀಯ ಅಥವಾ ಇತರ ಲೌಕಿಕ ಚಟುವಟಿಕೆಯನ್ನು ನಿಯಂತ್ರಿಸುವ ಅಥವಾ ನಿರ್ಬಂಧಿಸುವ; (ಬಿ) ಸಮಾಜ ಕಲ್ಯಾಣಕ್ಕಾಗಿ ಮತ್ತು ಸುಧಾರಣೆಗಾಗಿ ವ್ಯವಸ್ಥೆ ಮಾಡಲು ಅಥವಾ ಸಾರ್ವಜನಿಕ ಸ್ವರೂಪದ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಹಿಂದೂಗಳ ಎಲ್ಲ ವರ್ಗಗಳಿಗೆ ಮತ್ತು ವಿಭಾಗಗಳಿಗೆ ಪ್ರವೇಶಾವಕಾಶ ಮಾಡಿಕೊಡುವ – ಸಲುವಾಗಿ ಅಸ್ತಿತ್ವದಲ್ಲಿರುವ ಯಾವುದೇ ಕಾನೂನಿನ ಜಾರಿಯ ಮೇಲೆ ಪರಿಣಾಮ ಬೀರತಕ್ಕದ್ದಲ್ಲ ಅಥವಾ ಅಂಥ ಯಾವುದೇ ಕಾನೂನನ್ನು ಮಾಡದಂತೆ ರಾಜ್ಯವನ್ನು ಪ್ರತಿಬಂಧಿಸತಕ್ಕದ್ದಲ್ಲ. ವಿವರಣೆ I :- ಕೃಪಾಣವನ್ನು ಧರಿಸುವುದು ಮತ್ತು ಅದನ್ನು ಒಯ್ಯುವುದು ಸಿಖ್ ಧರ್ಮಾವಲಂಬನೆಯ ಭಾಗವಾಗಿರುವುದಾಗಿ ಸೇರಿರುವುದೆಂದು ಭಾವಿಸತಕ್ಕದ್ದು. ವಿವರಣೆ II:- (2)ನೆಯ ಖಂಡದ (ಬಿ) ಉಪಖಂಡದಲ್ಲಿನ ಹಿಂದುಗಳನ್ನು ಕುರಿತ ಅಥವಾ ಬೌದ್ಧ ಧರ್ಮಾವಲಂಬಿಗಳು ಸೇರಿರುವರೆಂದು ಅರ್ಥೈಸತಕ್ಕದ್ದು ಮತ್ತು ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಕುರಿತ ಉಲ್ಲೇಖವನ್ನು ತದನುಸಾರವಾಗಿ ಅರ್ಥೈಸತಕ್ಕದ್ದು.

26. ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯ:- ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ – ಇವುಗಳಿಗೆ ಒಳಪಟ್ಟು ಪ್ರತಿಯೊಂದು ಧಾರ್ಮಿಕ ಸಂಪ್ರದಾಯದವರಿಗೆ ಅಥವಾ ಅದರ ಯಾವುದೇ ವಿಭಾಗದವರಿಗೆ -” (ಎ) ಧಾರ್ಮಿಕ ಮತ್ತು ಧರ್ಮಾರ್ಥ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ; (ಬಿ) ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮದೇ ಆದ ವ್ಯವಹಾರಗಳನ್ನು ನಿರ್ವಹಿಸುವ; (ಸಿ) ಚರ ಮತ್ತು ಸ್ಥಿರ ಸ್ವತ್ತುಗಳ ಒಡೆತನವನ್ನು ಹೊಂದುವ ಮತ್ತು ಅವುಗಳನ್ನು ಆರ್ಜಿಸುವ, ಮತ್ತು (ಡಿ) ಅಂಥ ಸ್ವತ್ತಿನ ಆಡಳಿತವನ್ನು ಕಾನೂನಿಗನುಸಾರವಾಗಿ ನಡೆಸುವ – ಹಕ್ಕು ಇರತಕ್ಕದ್ದು.

27. ಯಾವುದೇ ನಿರ್ದಿಷ್ಟ ಧರ್ಮದ ಉನ್ನತಿಗಾಗಿ ತೆರಿಗೆಗಳ ಸಂದಾಯದ ಬಗ್ಗೆ ಸ್ವಾತಂತ್ರ್ಯ : – ಯಾವ ತೆರಿಗೆಗಳ ಉತ್ಪತ್ತಿಗಳನ್ನು ಯಾವುದೇ ಒಂದು ನಿರ್ದಿಷ್ಟ ಧರ್ಮದ ಅಥವಾ ಧಾರ್ಮಿಕ ಸಂಪ್ರದಾಯದ ಉನ್ನತಿಯ ಅಥವಾ ನಿರ್ವಹಣೆಯ ವೆಚ್ಚಗಳ ಸಂದಾಯಕ್ಕಾಗಿ ನಿರ್ದಿಷ್ಟವಾಗಿ ವಿನಿಯೋಗಿಸಲಾಗುವುದೋ ಅಂಥ ಯಾವುದೇ ತೆರಿಗೆಗಳನ್ನು ಸಂದಾಯ ಮಾಡುವಂತೆ ಯಾರೇ ವ್ಯಕ್ತಿಯನ್ನು ಒತ್ತಾಯಿಸತಕ್ಕದ್ದಲ್ಲ.

28. ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಧಾರ್ಮಿಕ ಶಿಕ್ಷಣದಲ್ಲಿ ಅಥವಾ ಧಾರ್ಮಿಕ ಉಪಾಸನೆಯಲ್ಲಿ ಹಾಜರಾಗುವ ಸ್ವಾತಂತ್ರ್ಯ:- (1) ರಾಜ್ಯನಿಧಿಗಳಿಂದ ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವನ್ನು ನೀಡತಕ್ಕದ್ದಲ್ಲ. (2) (1)ನೇ ಖಂಡದಲ್ಲಿ ಇರುವುದು ಯಾವುದೂ, ಯಾವ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣ ಕೊಡತಕ್ಕದ್ದೆಂದು ಅಗತ್ಯಪಡಿಸುವ ಯಾವುದೇ ದತ್ತಿ ಅಥವಾ ನ್ಯಾಸದ ಮೇರೆಗೆ ಸ್ಥಾಪಿತವಾಗಿರುವ, ಯಾವ ಶಿಕ್ಷಣ ಸಂಸ್ಥೆಯ ಆಡಳಿತವನ್ನು ರಾಜ್ಯವು ನಡೆಸುತ್ತಿದೆಯೋ, ಅಂಥ ಶಿಕ್ಷಣ ಸಂಸ್ಥೆಗೆ ಅನ್ವಯಿಸತಕ್ಕದ್ದಲ್ಲ. (3) ರಾಜ್ಯದ ಮನ್ನಣೆ ಪಡೆದ ಅಥವಾ ರಾಜ್ಯನಿಧಿಗಳಿಂದ ನೆರವನ್ನು ಪಡೆಯುವ ಯಾವುದೇ ಶೈಕ್ಷಣಿಕ ಸಂಸ್ಥೆಗೆ ಹಾಜರಾಗುವ ಯಾರೇ ವ್ಯಕ್ತಿಯು ಆ ಶೈಕ್ಷಣಿಕ ಸಂಸ್ಥೆಯಲ್ಲಿ ಕೊಡಬಹುದಾದ ಯಾವುದೇ ಧಾರ್ಮಿಕ ಶಿಕ್ಷಣದಲ್ಲಿ ಭಾಗವಹಿಸಲು ಅಥವಾ ಆ ಶೈಕ್ಷಣಿಕ ಸಂಸ್ಥೆಯಲ್ಲಿ ಅಥವಾ ಅದಕ್ಕೆ ಸೇರಿದ ಯಾವುದೇ ಆವರಣದಲ್ಲಿ ನಡೆಯಬಹುದಾದ ಯಾವುದೇ ಧಾರ್ಮಿಕ ಉಪಾಸನೆಗೆ ಹಾಜರಾಗಲು ತನ್ನ ಸಮ್ಮತಿಯನ್ನು ಕೊಟ್ಟಿದ್ದ ಹೊರತು ಅಥವಾ ಅವನು ಆಪ್ರಾಪ್ತ ವಯಸ್ಕನಾಗಿದ್ದರೆ, ಅವನ ಪಾಲಕನು ಅದಕ್ಕೆ ಸಮ್ಮತಿಯನ್ನು ಕೊಟ್ಟಿದ್ದ ಹೊರತು, ಹಾಗೆ ಭಾಗವಹಿಸುವಂತೆ ಅಥವಾ ಹಾಜರಾಗುವಂತೆ ಅವನನ್ನು ಅಗತ್ಯಪಡಿಸತಕ್ಕದ್ದಲ್ಲ.

ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು

29. ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ:- (1) ಭಾರತದ ರಾಜ್ಯಕ್ಷೇತ್ರದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ವಾಸವಾಗಿರುವ ನಾಗರಿಕರ ಯಾವುದೇ ವಿಭಾಗವು ತನ್ನದೇ ಆದ ಯಾವುದೇ ವಿಭಿನ್ನ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ, ಆ ವಿಭಾಗವು ಅವುಗಳನ್ನು ಸಂರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರತಕ್ಕದ್ದು. (2) ರಾಜ್ಯವು ನಿರ್ವಹಿಸುವ ಅಥವಾ ರಾಜ್ಯನಿಧಿಗಳಿಂದ ನೆರವನ್ನು ಪಡೆಯುವ ಯಾವುದೇ ಶೈಕ್ಷಣಿಕ ಸಂಸ್ಥೆಗೆ ಧರ್ಮ, ಮೂಲವಂಶ, ಜಾತಿ, ಭಾಷೆ, ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾರೇ ನಾಗರಿಕನಿಗೆ ಪ್ರವೇಶಾವಕಾಶವನ್ನು ನಿರಾಕರಿಸತಕ್ಕದ್ದಲ್ಲ.

30. ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮತ್ತು ಅವುಗಳ ಆಡಳಿತ ನಡೆಸುವುದಕ್ಕೆ ಅಲ್ಪಸಂಖ್ಯಾತರ ಹಕ್ಕು:- (1) ಧರ್ಮದ ಅಥವಾ ಭಾಷೆಯ ಮೇಲೆ ಆಧಾರಿತವಾದ ಎಲ್ಲಾ ಅಲ್ಪಸಂಖ್ಯಾತ ವರ್ಗಗಳವರೂ ತಮ್ಮ ಇಷ್ಟಕ್ಕನುಗುಣವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಮತ್ತು ಅವುಗಳ ಆಡಳಿತವನ್ನು ನಡೆಸಲು ಹಕ್ಕುಳ್ಳವರಾಗಿರತಕ್ಕದ್ದು.

[(1ಎ)(1)ನೇ ಖಂಡದಲ್ಲಿ ಉಲ್ಲೇಖಿಸಲಾದ ಅಲ್ಪಸಂಖ್ಯಾತ ವರ್ಗವು ಸ್ಥಾಪಿಸಿದ ಮತ್ತು ಆಡಳಿತ ನಡೆಸುತ್ತಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯ ಯಾವುದೇ ಸ್ವತ್ತನ್ನು ಕಡ್ಡಾಯವಾಗಿ ಆರ್ಜನೆ ಮಾಡುವುದಕ್ಕಾಗಿ ಉಪಬಂಧ ಕಲ್ಪಿಸುವ ಯಾವುದೇ ಕಾನೂನನ್ನು ಮಾಡುವಾಗ ರಾಜ್ಯವು, ಅಂಥ ಸ್ವತ್ತಿನ ಅರ್ಜನೆಗಾಗಿ ಅಂಥ ಕಾನೂನಿನ ಮೂಲಕ ನಿಗದಿಪಡಿಸಿದ ಅಥವಾ ಅದರ ಮೇರೆಗೆ ನಿರ್ಧರಿಸಿದ ಮೊಬಲಗು ಆ ಖಂಡದ ಮೇರೆಗೆ ಖಾತ್ರಿಗೊಳಿಸಿದ ಹಕ್ಕನ್ನು ನಿರ್ಬಂಧಿಸುವುದಿಲ್ಲವೆಂದು ಅಥವಾ ಅಂಥ ಹಕ್ಕನ್ನು ರದ್ದುಪಡಿಸುವುದಿಲ್ಲವೆಂದು ಸುನಿಶ್ಚಿತಪಡಿಸಿಕೊಳ್ಳತಕ್ಕದ್ದು.] (1978ನೇ ಇಸವಿಯ ಸಂವಿಧಾನ (ನಲವತ್ತನಾಲ್ಕನೇ ತಿದ್ದುಪಡಿ) ಅಧಿನಿಯಮದ 4ನೆಯ ಪ್ರಕರಣದ ಮೂಲಕ (20-6-1979ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

(2) ಶೈಕ್ಷಣಿಕ ಸಂಸ್ಥೆಗಳಿಗೆ ನೆರವನ್ನು ನೀಡುವಲ್ಲಿ, ರಾಜ್ಯವು ಯಾವುದೇ ಶೈಕ್ಷಣಿಕ ಸಂಸ್ಥೆಯು ಧರ್ಮದ ಅಥವಾ ಭಾಷೆಯ ಮೇಲೆ ಆಧಾರಿತವಾದ ಅಲ್ಪಸಂಖ್ಯಾತ ವರ್ಗದವರ ಆಡಳಿತದಲ್ಲಿ ಇದೆ ಎಂಬ ಕಾರಣದ ಮೇಲೆ ಅಂಥ ಸಂಸ್ಥೆಯ ವಿರುದ್ಧ ಯಾವುದೇ ತಾರತಮ್ಯ ಮಾಡತಕ್ಕದ್ದಲ್ಲ.

31. (ಸ್ವತ್ತಿನ ಕಡ್ಡಾಯ ಆರ್ಜನೆ.): ಸಂವಿಧಾನ (ನಲವತ್ತನಾಲ್ಕನೆಯ ತಿದ್ದುಪಡಿ) ಅಧಿನಿಯಮದ 6ನೆಯ ಪ್ರಕರಣದ ಮೂಲಕ (20-6-1979 ರಿಂದ ಜಾರಿಗೆ ಬರುವಂತೆ) ನಿರಸನಗೊಳಿಸಲಾಗಿದೆ. (1978ನೆಯ ಇಸವಿಯ ಸಂವಿಧಾನ (ನಲವತ್ತನಾಲ್ಕನೇ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೂಲಕ “ಸ್ವತ್ತಿನ ಹಕ್ಕು” ಎಂಬ ಉಪಶೀರ್ಷಿಕೆಯನ್ನು ಬಿಟ್ಟುಬಿಡಲಾಗಿದೆ. )

[ಕೆಲವು ಕಾನೂನುಗಳನ್ನು ಉಳಿಸುವುದು)  (1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೇ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ (3-1-1977ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.)

[31ಎ. ಎಸ್ಟೇಟು, ಮುಂತಾದವುಗಳ ಆರ್ಜನೆಗೆ ಉಪಬಂಧಿಸುವ ಕಾನೂನುಗಳನ್ನು ಉಳಿಸುವುದು:- (1955ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ 4ನೆಯ ಪ್ರಕರಣದ ಮೂಲಕ (ಪೂರ್ವಾನ್ವಯ ಪರಿಣಾಮ ಸಹಿತವಾಗಿ ಸೇರಿಸಲಾಗಿದೆ.)

 1(1) 13ನೆಯ ಅನುಚ್ಛೇದದಲ್ಲಿ ಏನೇ ಒಳಗೊಂಡಿದ್ದಾಗ್ಯೂ- (1955ನೆಯ ಇಸವಿಯ ಸಂವಿಧಾನ (ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ (1)ನೆಯ ಖಂಡಕ್ಕೆ ಬದಲಾಗಿ (ಪೂರ್ವಾನ್ವಯ ಪರಿಣಾಮ ಸಹಿತವಾಗಿ) ಪ್ರತ್ಯಾಯೋಜಿಸಲಾಗಿದೆ.)

(ಎ) ರಾಜ್ಯವು ಯಾವುದೇ ಎಸ್ಟೇಟನ್ನು ಅಥವಾ ಅದರಲ್ಲಿನ ಯಾವುದೇ ಹಕ್ಕುಗಳನ್ನು ಆರ್ಜಿಸುವುದಕ್ಕೆ ಅಥವಾ ಅಂಥ ಯಾವುದೇ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕೆ ಅಥವಾ ಮಾರ್ಪಡಿಸುವುದಕ್ಕೆ; ಅಥವಾ (ಬಿ) ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಸ್ವತ್ತಿನ ಸರಿಯಾದ ವ್ಯವಸ್ಥಾಪನೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶದಿಂದ, ರಾಜ್ಯವು ಆ ಸ್ವತ್ತಿನ ವ್ಯವಸ್ಥಾಪನೆಯನ್ನು ಪರಿಮಿತ ಅವಧಿಯವರೆಗೆ ವಹಿಸಿಕೊಳ್ಳುವುದಕ್ಕೆ; ಅಥವಾ

(ಸಿ) ಎರಡು ಅಥವಾ ಹೆಚ್ಚು ನಿಗಮಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಆ ನಿಗಮಗಳಲ್ಲಿ ಯಾವುದೇ ಒಂದರ ಸರಿಯಾದ ವ್ಯವಸ್ಥಾಪನೆಯನ್ನು ಸುನಿಶ್ಚಿತಗೊಳಿಸುವ ಉದ್ದೇಶದಿಂದ ಅವುಗಳನ್ನು ಸಮ್ಮಿಲನಗೊಳಿಸುವುದಕ್ಕೆ, ಅಥವಾ

(ಡಿ) ನಿಗಮಗಳ ವ್ಯವಸ್ಥಾಪಕ ಏಜೆಂಟರ, ಕಾರ್ಯದರ್ಶಿಗಳ ಮತ್ತು ಕೋಶಾಧಿಕಾರಿಗಳ, ವ್ಯವಸ್ಥಾಪಕ ನಿರ್ದೇಶಕರ, ನಿರ್ದೇಶಕರ ಅಥವಾ ವ್ಯವಸ್ಥಾಪಕರ ಯಾವುದೇ ಹಕ್ಕುಗಳನ್ನು ಅಥವಾ ಅಂಥ ನಿಗಮದ ಷೇರುದಾರರ ಯಾವುದೇ ಮತದಾನದ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕೆ ಅಥವಾ ಮಾರ್ಪಡಿಸುವುದಕ್ಕೆ; ಅಥವಾ

(ಇ) ಯಾವುದೇ ಖನಿಜವನ್ನು ಅಥವಾ ಖನಿಜ ತೈಲವನ್ನು ಪತ್ತೆಹಚ್ಚುವ ಅಥವಾ ಪಡೆದುಕೊಳ್ಳುವ ಉದ್ದೇಶಕ್ಕಾಗಿ ಯಾವುದೇ ಒಪ್ಪಂದದ, ಗುತ್ತಿಗೆಯ ಅಥವಾ ಲೈಸೆನ್ಸಿನ ಕಾರಣದಿಂದ ಪ್ರಾಪ್ತವಾಗುವ ಯಾವುದೇ ಹಕ್ಕುಗಳನ್ನು ಅಂತ್ಯಗೊಳಿಸುವುದಕ್ಕೆ ಅಥವಾ ಮಾರ್ಪಡಿಸುವುದಕ್ಕೆ ಅಥವಾ ಅಂಥ ಯಾವುದೇ ಒಪ್ಪಂದವನ್ನು, ಗುತ್ತಿಗೆಯನ್ನು ಅಥವಾ ಲೈಸೆನ್ಸನ್ನು ಅವಧಿಗೆ ಮುಂಚಿತವಾಗಿ ಸಮಾಪ್ತಿಗೊಳಿಸುವುದಕ್ಕೆ ಅಥವಾ ರದ್ದುಗೊಳಿಸುವುದಕ್ಕೆ – ಉಪಬಂಧಿಸುವ ಯಾವುದೇ ಕಾನೂನು [14ನೆಯ ಅನುಚ್ಛೇದದಿಂದ ಅಥವಾ 19ನೆಯ ಅನುಚ್ಛೇದದಿಂದ ಪ್ರದತ್ತವಾಗಿರುವ ಹಕ್ಕುಗಳಲ್ಲಿ ಯಾವುದೇ ಹಕ್ಕಿಗೆ ಅಸಂಗತವಾಗಿದೆ ಅಥವಾ ಅದನ್ನು ಕಸಿದುಕೊಳ್ಳುತ್ತದೆ ಅಥವಾ ಮೊಟಕುಗೊಳಿಸುತ್ತದೆ ಎಂಬ ಕಾರಣದ ಮೇಲೆ ಶೂನ್ಯವಾಗುವುದೆಂದು ಭಾವಿಸತಕ್ಕದ್ದಲ್ಲ:

ಪರಂತು, ಅಂಥ ಕಾನೂನು ಒಂದು ರಾಜ್ಯದ ವಿಧಾನ ಮಂಡಲವು ಮಾಡಿದ ಕಾನೂನಾಗಿರುವಲ್ಲಿ, ಅಂಥ ಕಾನೂನನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸಿದ್ದು ಅದಕ್ಕೆ ಅವನ ಅನುಮತಿ ದೊರಕಿದ್ದ ಹೊರತು, ಈ ಅನುಚ್ಛೇದದ ಉಪಬಂಧಗಳು ಅದಕ್ಕೆ ಅನ್ವಯವಾಗತಕ್ಕದ್ದಲ್ಲ:] (1978ನೆಯ ಇಸವಿಯ ಸಂವಿಧಾನ (ನಲವತ್ತಾನೆಯ ತಿದ್ದುಪಡಿ) ಅಧಿನಿಯಮದ 7ನೆಯ ಪ್ರಕರಣದ ಮೂಲಕ “14ನೆಯ ಅನುಚ್ಛೇದದಿಂದ, 19ನೆಯ ಅನುಚ್ಛೇದದಿಂದ, 31ನೆಯ ಅನುಚ್ಛೇದದಿಂದ” ಎಂಬುದಕ್ಕೆ ಬದಲಾಗಿ (20.6.1979 ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.)

[ಮತ್ತೂ ಪರಂತು, ಯಾವುದೇ ಕಾನೂನು, ರಾಜ್ಯವು ಯಾವುದೇ ಎಸ್ಟೇಟನ್ನು ಆರ್ಜಿಸುವ ಬಗ್ಗೆ ಯಾವುದೇ ಉಪಬಂಧವನ್ನು ಮಾಡಿರುವಲ್ಲಿ ಮತ್ತು ಆ ಎಸ್ಟೇಟಿನಲ್ಲಿ ಅಡಕವಾದ ಯಾವುದೇ ಭೂಮಿಯನ್ನು ಯಾರೇ ವ್ಯಕ್ತಿಯು ಸ್ವಂತ ಸಾಗುವಳಿಯಲ್ಲಿಟ್ಟುಕೊಂಡಿದ್ದು, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಅವನಿಗೆ ಅನ್ವಯಿಸುವ ಪರಮಾವಧಿ ಮಿತಿಯೊಳಗಿರುವಂಥ ಆ ಭೂಮಿಯ ಯಾವುದೇ ಭಾಗವನ್ನು ಅಥವಾ ಅದರ ಮೇಲಿರುವ ಅಥವಾ ಅದಕ್ಕೆ ಲಗತ್ತಾಗಿರುವ ಯಾವುದೇ ಕಟ್ಟಡ ಅಥವಾ ರಚನೆಯನ್ನು ಅಂಥ ಭೂಮಿಯ, ಕಟ್ಟಡದ ಅಥವಾ ರಚನೆಯ ಆರ್ಜನೆಗೆ ಸಂಬಂಧಿಸಿದ ಕಾನೂನಿನಲ್ಲಿ ಆ ಭೂಮಿಯ, ಕಟ್ಟಡದ ಅಥವಾ ರಚನೆಯ ಮಾರುಕಟ್ಟೆಯ ಮೌಲ್ಯಕ್ಕೆ ಕಡಿಮೆಯಿಲ್ಲದ ದರದಲ್ಲಿ ನಷ್ಟ ಪರಿಹಾರವನ್ನು ಸಂದಾಯ ಮಾಡುವುದಕ್ಕಾಗಿ ಉಪಬಂಧಿಸಿದ್ದ ಹೊರತು ರಾಜ್ಯವು ಅದನ್ನು ಆರ್ಜಿಸುವುದು ಕಾನೂನುಸಮ್ಮತವಾಗತಕ್ಕದ್ದಲ್ಲ.] (1964ನೇ ಇಸವಿಯ ಸಂವಿಧಾನ (ಹದಿನೇಳನೆಯ ತಿದ್ದುಪಡಿ) ಅಧಿನಿಯಮದ 2ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.)

(2) ಈ ಅನುಚ್ಛೇದದಲ್ಲಿ, –

(ಎ) ಯಾವುದೇ ಸ್ಥಳೀಯ ಪ್ರದೇಶಕ್ಕೆ ಸಂಬಂಧಪಟ್ಟಂತೆ, “ಎಸ್ಟೇಟ್” ಎಂಬ ಪದಕ್ಕೆ, ಆ ಪ್ರದೇಶದಲ್ಲಿ ಪದ್ಧತಿಗಳಿಗೆ ಸಂಬಂಧಪಟ್ಟಂತೆ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಪದಕ್ಕೆ ಅಥವಾ ಅದರ ಸ್ಥಳೀಯ ಸಮಾನಾರ್ಥ ಪದಕ್ಕೆ ಯಾವ ಅರ್ಥವಿದೆಯೋ ಅದೇ ಅರ್ಥವೇ ಇರತಕ್ಕದ್ದು ಮತ್ತು ಆ ಪದದಲ್ಲಿ, -((ಎ) ಉಪಖಂಡಕ್ಕೆ ಬದಲಾಗಿ 2ನೇ ಪ್ರಕರಣದ ಮೂಲಕ (ಪೂರ್ವಾನ್ವಯ ಪರಿಣಾಮಸಹಿತವಾಗಿ) ಪ್ರತ್ಯಾಯೋಜಿಸಲಾಗಿದೆ.)

(i) ಯಾವುದೇ ಜಹಗೀರು, ಇನಾಂ ಅಥವಾ ಮುವಾರ್ಫಿ ಅಥವಾ ಅದೇ ಬಗೆಯ ಇತರ ಅನುದಾನವು ಮತ್ತು [ತಮಿಳುನಾಡು] (1968ನೆಯ ಇಸವಿಯ ಮದ್ರಾಸು ರಾಜ್ಯದ (ಹೆಸರು ಬದಲಾವಣೆ) ಅಧಿನಿಯಮದ (1968ನೆಯ ಇಸವಿಯ 53ನೆಯ ಕ್ರಮಸಂಖ್ಯೆಯ ಅಧಿನಿಯಮದ) 4ನೆಯ ಪ್ರಕರಣದ ಮೂಲಕ “ಮದ್ರಾಸ್” ಎಂಬುದಕ್ಕೆ ಬದಲಾಗಿ (14-1-1969ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) ಹಾಗೂ ಕೇರಳ ರಾಜ್ಯಗಳಲ್ಲಿನ ಯಾವುದೇ ಜನ್ಮಂ ಹಕ್ಕು:

(ii) ರೈತವಾರಿ ಪದ್ಧತಿಯ ಮೇರೆಗೆ ಹೊಂದಿರುವ ಯಾವುದೇ ಭೂಮಿ;

(iii) ಬಂಜರು ಭೂಮಿ, ಅರಣ್ಯ ಭೂಮಿ, ಗೋಮಾಳ ಅಥವಾ ಭೂ ಸಾಗುವಳಿದಾರರ, ಕೃಷಿ ಕಾರ್ಮಿಕರ ಮತ್ತು ಗ್ರಾಮೀಣ ಕುಶಲ ಕರ್ಮಿಗಳ ಅಧಿಭೋಗದಲ್ಲಿರುವ ಕಟ್ಟಡಗಳ ಮತ್ತು ಇತರ ರಚನೆಗಳ ನಿವೇಶನಗಳನ್ನು ಒಳಗೊಂಡು, ಕೃಷಿಯ ಉದ್ದೇಶಗಳಿಗಾಗಿ ಅಥವಾ ಅದಕ್ಕೆ ಸಹಾಯಕವಾದ ಉದ್ದೇಶಗಳಿಗಾಗಿ ಹೊಂದಿರುವ ಅಥವಾ ಗುತ್ತಿಗೆಗೆ ಕೊಟ್ಟಿರುವ ಯಾವುದೇ ಭೂಮಿ – ಸಹ ಒಳಗೊಂಡಿರತಕ್ಕದ್ದು;]

(ಬಿ) ಎಸ್ಟೇಟಿಗೆ ಸಂಬಂಧಿಸಿದಂತೆ “ಹಕ್ಕುಗಳು” ಎಂಬ ಪದದಲ್ಲಿ ಒಬ್ಬ ಮಾಲೀಕನಲ್ಲಿ, ಉಪ-ಮಾಲೀಕನಲ್ಲಿ, ಅಧೀನ ಮಾಲೀಕನಲ್ಲಿ, ಹಿಡುವಳಿದಾರನಲ್ಲಿ, [ರೈತನಲ್ಲಿ, ಅಧೀನ ರೈತನಲ್ಲಿ] (1955ನೆಯ ಇಸವಿಯ ಸಂವಿಧಾನ (ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ (ಪೂರ್ವಾನ್ವಯ ಪರಿಣಾಮ ಸಹಿತವಾಗಿ) ಸೇರಿಸಲಾಗಿದೆ.) ಅಥವಾ ಇತರ ಮಧ್ಯವರ್ತಿಯಲ್ಲಿ ನಿಹಿತವಾಗಿರುವ ಯಾವುದೇ ಹಕ್ಕುಗಳು ಮತ್ತು ಭೂಕಂದಾಯಕ್ಕೆ ಸಂಬಂಧಿಸಿದ ಯಾವುದೇ ಹಕ್ಕುಗಳು ಅಥವಾ ವಿಶೇಷಾಧಿಕಾರಗಳು ಒಳಗೊಂಡಿರತಕ್ಕದ್ದು.]

[31ಬಿ. ಕೆಲವು ಅಧಿನಿಯಮಗಳನ್ನು ಮತ್ತು ರೆಗ್ಯುಲೇಷನ್‌ಗಳನ್ನು ಮಾನ್ಯಮಾಡುವುದು:- 31ಎ ಅನುಚ್ಛೇದದಲ್ಲಿ ಅಡಕವಾಗಿರುವ ಉಪಬಂಧಗಳ ಸಾಮಾನ್ಯ ಅನ್ವಯಕ್ಕೆ ಬಾಧಕವಾಗದಂತೆ, ಒಂಬತ್ತನೆಯ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಅಧಿನಿಯಮವು ಮತ್ತು ರೆಗ್ಯುಲೇಷನ್ ಅಥವಾ ಅದರ ಯಾವುದೇ ಉಪಬಂಧವು ಈ ಭಾಗದ ಯಾವುದೇ ಉಪಬಂಧಗಳಿಂದ ಪ್ರದತ್ತವಾದ ಹಕ್ಕುಗಳಲ್ಲಿ ಯಾವುದಕ್ಕಾದರೂ ಆಸಂಗತವಾಗಿದೆ ಎಂಬ ಅಥವಾ ಆ ಹಕ್ಕುಗಳಲ್ಲಿ ಯಾವುದನ್ನಾದರೂ ಕಸಿದುಕೊಳ್ಳುತ್ತದೆ ಎಂಬ ಅಥವಾ ಮೊಟಕುಗೊಳಿಸುತ್ತದೆ ಎಂಬ ಕಾರಣದ ಮೇಲೆ ಶೂನ್ಯವಾಗುವುದಾಗಿ ಅಥವಾ ಎಂದಾದರೂ ಶೂನ್ಯವಾಗಿದ್ದುದಾಗಿ ಭಾವಿಸತಕ್ಕದ್ದಲ್ಲ ಮತ್ತು ಯಾವುದೇ ನ್ಯಾಯಾಲಯದ ಅಥವಾ ನ್ಯಾಯಾಧಿಕರಣದ ಯಾವುದೇ ತೀರ್ಪು, ಡಿಕ್ರಿ ಅಥವಾ ಆದೇಶವು ತದ್ದಿರುದ್ಧವಾಗಿ ಇದ್ದಾಗ್ಯೂ, ಆ ಪ್ರತಿಯೊಂದು ಅಧಿನಿಯಮವನ್ನು ಮತ್ತು ರೆಗ್ಯುಲೇಷನ್ ಅನ್ನು ನಿರಸನಗೊಳಿಸುವುದಕ್ಕೆ ಅಥವಾ ತಿದ್ದುಪಡಿ ಮಾಡುವುದಕ್ಕೆ ಸಕ್ಷಮವಾದ ಯಾವುದೇ ವಿಧಾನಮಂಡಲಕ್ಕೆ ಇರುವ ಅಧಿಕಾರಕ್ಕೆ ಒಳಪಟ್ಟು ಅವು ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು.] (1951ನೆಯ ಇಸವಿಯ ಸಂವಿಧಾನ (ಮೊದಲನೆಯ ತಿದ್ದುಪಡಿ) ಅಧಿನಿಯಮದ 5ನೆಯ ಪ್ರಕರಣದ ಮೂಲಕ ಸೇರಿಸಲಾಗಿದೆ.)

[31ಸಿ. ಕೆಲವು ನಿರ್ದೇಶಕ ತತ್ತ್ವಗಳನ್ನು ಜಾರಿಗೆ ತರುವ ಕಾನೂನುಗಳನ್ನು ಉಳಿಸುವುದು:- (1971ನೆಯ ಇಸವಿಯ ಸಂವಿಧಾನ (ಇಪ್ಪತ್ತೈದನೆಯ ತಿದ್ದುಪಡಿ) ಅಧಿನಿಯಮದ 3ನೆಯ ಪ್ರಕರಣದ ಮೂಲಕ (20-4-1972ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) 13ನೆಯ ಅನುಚ್ಛೇದದಲ್ಲಿ ಏನೇ ಒಳಗೊಂಡಿದ್ದಾಗ್ಯೂ [ಭಾಗ IV ರಲ್ಲಿ ಹೇಳಲಾದ ಎಲ್ಲ ತತ್ವಗಳ ಅಥವಾ ಆ ಪೈಕಿ ಯಾವುದೇ ತತ್ವದ] (1976ನೇ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 4ನೇ ಪ್ರಕರಣದ ಮೂಲಕ “39ನೇ ಅನುಚ್ಛೇದದ (ಬಿ) ಖಂಡದಲ್ಲಿ ಅಥವಾ (ಸಿ) ಖಂಡದಲ್ಲಿ ಉಲ್ಲೇಖಿತವಾದ ತತ್ವಗಳನ್ನು” ಎಂಬುದಕ್ಕೆ ಬದಲಾಗಿ (ದಿನಾಂಕ 3.1.77ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ. ಮಿನರ್ವ ಮಿಲ್ಸ್ ನಿಯಮಿತ ಮತ್ತು ಇತರರು – ವಿರುದ್ಧ – ಭಾರತ ಒಕ್ಕೂಟ ಮತ್ತು ಇತರರು (1980) 2 ಎಸ್.ಸಿ.ಸಿ. 591 ಈ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯವು 4ನೇ ಪ್ರಕರಣವನ್ನು ಅಸಿಂಧುವೆಂದು ತೀರ್ಮಾನಿಸಿದೆ.) ಅನ್ವಯವನ್ನು ಸುನಿಶ್ಚಿತಗೊಳಿಸುವ ರಾಜ್ಯನೀತಿಯನ್ನು ಜಾರಿಗೆ ತರುವ ಯಾವುದೇ ಕಾನೂನು, [14 ನೆಯ ಅನುಚ್ಛೇದದಿಂದ ಅಥವಾ 19ನೆಯ ಅನುಚ್ಛೇದದಿಂದ] (1978ನೇ ಇಸವಿಯ ಸಂವಿಧಾನ (ನಲವತ್ನಾಲ್ಕನೆಯ ತಿದ್ದುಪಡಿ) ಅಧಿನಿಯಮದ 8ನೇ ಪ್ರಕರಣದ ಮೂಲಕ “14ನೆಯ ಅನುಚ್ಛೇದದಿಂದ, 19ನೇ ಅನುಚ್ಛೇದದಿಂದ ಅಥವಾ 31ನೇ ಅನುಚ್ಛೇದದಿಂದ” ಎಂಬುದಕ್ಕೆ ಬದಲಾಗಿ (ದಿನಾಂಕ 20-6-79ರಿಂದ ಜಾರಿಗೆ ಬರುವಂತೆ) ಪ್ರತ್ಯಾಯೋಜಿಸಲಾಗಿದೆ.) ಪ್ರದತ್ತವಾಗಿರುವ ಹಕ್ಕುಗಳಲ್ಲಿ ಯಾವುದಕ್ಕಾದರೂ ಅಸಂಗತವಾಗಿದೆಯೆಂಬ ಅಥವಾ ಯಾವುದನ್ನಾದರೂ ಕಸಿದುಕೊಳ್ಳುತ್ತದೆ ಅಥವಾ ಮೊಟಕುಗೊಳಿಸುತ್ತದೆ ಎಂಬ ಕಾರಣದ ಮೇಲೆ ಶೂನ್ಯವಾಗುವುದೆಂದು ಭಾವಿಸತಕ್ಕದ್ದಲ್ಲ; ಮತ್ತು ಅಂಥ ನೀತಿಯನ್ನು ಜಾರಿಗೊಳಿಸುವ ಉದ್ದೇಶವನ್ನು ಹೊಂದಿದೆ ಎಂಬ ಘೋಷಣೆಯನ್ನೊಳಗೊಂಡಿರುವ ಯಾವುದೇ ಕಾನೂನು ಅಂಥ ನೀತಿಯನ್ನು ಜಾರಿಗೆ ತರುವುದಿಲ್ಲವೆಂಬ ಆಧಾರದ ಮೇಲೆ ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸತಕ್ಕದ್ದಲ್ಲ: (ಕೇಶವಾನಂದ ಭಾರತಿ – ವಿರುದ್ಧ – ಕೇರಳ ರಾಜ್ಯ (1973) ಸಪ್ಲಿಮೆಂಟ್ ಎಸ್.ಸಿ.ಆರ್. 1.; ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಇಟಾಲಿಕ್‌ನಲ್ಲಿರುವ ಉಪಬಂಧಗಳನ್ನು ಅಸಿಂಧುವೆಂದು ತೀರ್ಮಾನಿಸಿದೆ.)

ಪರಂತು, ಒಂದು ರಾಜ್ಯದ ವಿಧಾನಮಂಡಲವು ಅಂಥ ಕಾನೂನನ್ನು ಮಾಡಿರುವಲ್ಲಿ ಮತ್ತು ಆ ಕಾನೂನನ್ನು ರಾಷ್ಟ್ರಪತಿಯ ಪರ್ಯಾಲೋಚನೆಗಾಗಿ ಕಾಯ್ದಿರಿಸಿದ್ದು ಅದಕ್ಕೆ ಅವನ ಅನುಮತಿಯನ್ನು ಪಡೆದಿದ್ದ ಹೊರತು, ಈ ಅನುಚ್ಛೇದದ ಉಪಬಂಧಗಳು ಆ ಕಾನೂನಿಗೆ ಅನ್ವಯವಾಗತಕ್ಕದ್ದಲ್ಲ.

31ಡಿ. [ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾನೂನುಗಳನ್ನು ಉಳಿಸುವುದು.] 1977ನೆಯ ಇಸವಿಯ ಸಂವಿಧಾನ (ನಲವತ್ಮೂರನೇ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ (13-4-1978ರಿಂದ ಜಾರಿಗೆ ಬರುವಂತೆ) ನಿರಸನಗೊಳಿಸಲಾಗಿದೆ. (1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 5ನೇ ಪ್ರಕರಣದ ಮೂಲಕ (3-1-1977ರಿಂದ ಜಾರಿಗೆ ಬರುಂತೆ) ಸೇರಿಸಲಾಗಿದೆ.)

ಸಂವಿಧಾನಾತ್ಮಕ ಪರಿಹಾರೋಪಾಯಗಳ ಹಕ್ಕು

32. ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳ ಜಾರಿಗಾಗಿ ಪರಿಹಾರೋಪಾಯಗಳು:-  (1) ಈ ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳನ್ನು ಜಾರಿಗೊಳಿಸುವುದಕ್ಕಾಗಿ ಸಮುಚಿತ ವ್ಯವಹರಣೆಗಳ ಮೂಲಕ ಸರ್ವೋಚ್ಚ ನ್ಯಾಯಾಲಯವನ್ನು ಕೋರುವ ಹಕ್ಕನ್ನು ಖಾತ್ರಿಗೊಳಿಸಲಾಗಿದೆ.

(2) ಈ ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳಲ್ಲಿ ಯಾವುದೇ ಹಕ್ಕನ್ನು ಜಾರಿಗೊಳಿಸುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನಗಳು, ಆದೇಶಗಳು ಅಥವಾ ಹೇಬಿಯಸ್ ಕಾರ್ಪಸ್, ಮ್ಯಾಂಡಮಸ್, ಪ್ರೊಹಿಬಿಷನ್, ಕೊ ವಾರಂಟೋ ಮತ್ತು ಸರ್‌ಶಿಯೋರರಿ ಸ್ವರೂಪದ ರಿಟ್‌ ಗಳೂ ಸೇರಿ ರಿಟ್‌ಗಳಲ್ಲಿ ಯಾವುದು ಸಮುಚಿತವೋ ಅದನ್ನು ಹೊರಡಿಸಲು ಅಧಿಕಾರವನ್ನು ಹೊಂದಿರತಕ್ಕದ್ದು.

(3) (1)ನೆಯ ಮತ್ತು (2)ನೆಯ ಖಂಡಗಳ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರದತ್ತವಾಗಿರುವ ಅಧಿಕಾರಗಳಿಗೆ ಬಾಧಕವಾಗದಂತೆ, (2)ನೆಯ ಖಂಡದ ಮೇರೆಗೆ ಸರ್ವೋಚ್ಚ ನ್ಯಾಯಾಲಯವು ಚಲಾಯಿಸಬಹುದಾದ ಎಲ್ಲ ಅಧಿಕಾರಗಳನ್ನು ಅಥವಾ ಆ ಪೈಕಿ ಯಾವುದೇ ಅಧಿಕಾರವನ್ನು ಇತರ ಯಾವುದೇ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯ ಸ್ಥಳೀಯ ಪರಿಮಿತಿಗಳೊಳಗೆ ಚಲಾಯಿಸುವಂತೆ, ಆ ಇತರ ನ್ಯಾಯಾಲಯಕ್ಕೆ ಸಂಸತ್ತು ಕಾನೂನಿನ ಮೂಲಕ ಅಧಿಕಾರ ನೀಡಬಹುದು.

(4) ಈ ಸಂವಿಧಾನದ ಮೂಲಕ ಅನ್ಯಥಾ ಉಪಬಂಧಿಸಿದಂತೆ ಹೊರತು ಈ ಅನುಚ್ಛೇದವು ಖಾತ್ರಿಗೊಳಿಸಿರುವ ಹಕ್ಕನ್ನು ಅಮಾನತುಗೊಳಿಸತಕ್ಕದ್ದಲ್ಲ.

32ಎ. [32ನೇ ಅನುಚ್ಛೇದದ ಮೇರೆಗಿನ ವ್ಯವಹರಣೆಗಳಲ್ಲಿ, ರಾಜ್ಯದ ಕಾನೂನುಗಳ ಸಂವಿಧಾನಾತ್ಮಕ ಸಿಂಧುತ್ವವನ್ನು ಪರ್ಯಾಲೋಚಿಸತಕ್ಕದ್ದಲ್ಲ.] (1976ನೆಯ ಇಸವಿಯ ಸಂವಿಧಾನ (ನಲವತ್ತೆರಡನೆಯ ತಿದ್ದುಪಡಿ) ಅಧಿನಿಯಮದ 6ನೇ ಪ್ರಕರಣದ ಮೂಲಕ (3-1-1977ರಿಂದ ಜಾರಿಗೆ ಬರುವಂತೆ) ಸೇರಿಸಲಾಗಿದೆ.) 1977ನೇ ಇಸವಿಯ ಸಂವಿಧಾನ (ನಲವತ್ತಮೂರನೇ ತಿದ್ದುಪಡಿ) ಅಧಿನಿಯಮದ 3ನೇ ಪ್ರಕರಣದ ಮೂಲಕ (13-4-78 ರಿಂದ ಜಾರಿಗೆ ಬರುವಂತೆ) ನಿರಸಿತವಾಗಿದೆ.

[33. ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಸಶಸ್ತ್ರ ಬಲಗಳು, ಮುಂತಾದವುಗಳಿಗೆ ಅನ್ವಯಿಸುವಲ್ಲಿ ಅವುಗಳನ್ನು ಮಾರ್ಪಡಿಸಲು ಸಂಸತ್ತಿಗಿರುವ ಅಧಿಕಾರ:- (1984ನೇ ಇಸವಿಯ ಸಂವಿಧಾನ (ಐವತ್ತನೆಯ ತಿದ್ದುಪಡಿ) ಅಧಿನಿಯಮದ 2ನೇ ಪ್ರಕರಣದ ಮೂಲಕ ಅನುಚ್ಛೇದ 33ಕ್ಕೆ ಬರಲಾಗಿ ಪ್ರತ್ಯಾಯೋಜಿಸಲಾಗಿದೆ.) ಸಂಸತ್ತು ಈ ಭಾಗದಿಂದ ಪ್ರದತ್ತವಾದ ಯಾವುದೇ ಹಕ್ಕುಗಳನ್ನು,

(ಎ) ಸಶಸ್ತ್ರ ಬಲಗಳ ಸದಸ್ಯರಿಗೆ; ಅಥವಾ (ಬಿ) ಸಾರ್ವಜನಿಕ ಸುವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಲಾಗಿರುವ ಬಲಗಳ ಸದಸ್ಯರಿಗೆ; ಅಥವಾ (ಸಿ) ಗುಪ್ತವಾರ್ತೆ ಅಥವಾ ಪ್ರತಿಗುಪ್ತವಾರ್ತೆಯ ಉದ್ದೇಶಗಳಿಗಾಗಿ ರಾಜ್ಯವು ಸ್ಥಾಪಿಸಿರುವ ಯಾವುದೇ ಬ್ಯೂರೋ ಅಥವಾ ಇತರ ಸಂಸ್ಥೆಯಲ್ಲಿ ನಿಯೋಜಿತರಾಗಿರುವ ವ್ಯಕ್ತಿಗಳಿಗೆ; ಅಥವಾ (ಡಿ) (ಎ) ಯಿಂದ (ಸಿ) ಖಂಡಗಳಲ್ಲಿ ಉಲ್ಲೇಖಿಸಿದ ಯಾವುದೇ ಬಲಗಳ, ಬ್ಯೂರೋದ ಅಥವಾ ಸಂಸ್ಥೆಯ ಉದ್ದೇಶಗಳಿಗಾಗಿ ಸ್ಥಾಪಿಸಿದ ದೂರ ಸಂಪರ್ಕ ವ್ಯವಸ್ಥೆಯಲ್ಲಿ ನಿಯೋಜಿತರಾದ ಅಥವಾ ಆ ವ್ಯವಸ್ಥೆಗೆ ಸಂಬಂಧಿಸಿದ ವ್ಯಕ್ತಿಗಳಿಗೆ – ಅನ್ವಯಿಸುವಲ್ಲಿ, ಅವರ ಕರ್ತವ್ಯಗಳ ಸೂಕ್ತ ನಿರ್ವಹಣೆಯನ್ನು ಮತ್ತು ಅವರಲ್ಲಿ ಶಿಸ್ತುಪಾಲನೆಯನ್ನು ಸುನಿಶ್ಚಿತಗೊಳಿಸಲು ಅವುಗಳನ್ನು ಎಷ್ಟರಮಟ್ಟಿಗೆ ನಿರ್ಬಂಧಿಸತಕ್ಕದ್ದು ಅಥವಾ ನಿರಾಕರಿಸತಕ್ಕದ್ದು ಎಂಬುದನ್ನು ಕಾನೂನಿನ ಮೂಲಕ ನಿರ್ಧರಿಸಬಹುದು.]

34. ಯಾವುದೇ ಪ್ರದೇಶದಲ್ಲಿ ಲಷ್ಕರೀ ಕಾನೂನು ಜಾರಿಯಲ್ಲಿರುವಾಗ ಭಾಗದಿಂದ ಪ್ರದತ್ತವಾದ ಹಕ್ಕುಗಳ ಮೇಲೆ ನಿರ್ಬಂಧ:- ಈ ಭಾಗದ ಹಿಂದೆ ಹೇಳಿದ ಉಪಬಂಧಗಳಲ್ಲಿ ಏನೇ ಇದ್ದಾಗ್ಯೂ, ಸಂಸತ್ತು ಕಾನೂನಿನ ಮೂಲಕ ಒಕ್ಕೂಟದ ಅಥವಾ ಒಂದು ರಾಜ್ಯದ ಸೇವೆಯಲ್ಲಿರುವ ಯಾರೇ ವ್ಯಕ್ತಿ ಅಥವಾ ಇತರ ಯಾರೇ ವ್ಯಕ್ತಿಯು ಭಾರತದ ರಾಜ್ಯಕ್ಷೇತ್ರದೊಳಗೆ ಲಷ್ಕರೀ ಕಾನೂನು ಜಾರಿಯಲ್ಲಿದ್ದ ಯಾವುದೇ ಪ್ರದೇಶದಲ್ಲಿ ಸುವ್ಯವಸ್ಥೆಯ ನಿರ್ವಹಣೆ ಅಥವಾ ಅದರ ಮರುಸ್ಥಾಪನೆಗಾಗಿ ಮಾಡಿದ ಯಾವುದೇ ಕಾರ್ಯಕ್ಕೆ ಸಂಬಂಧಿಸಿದಂತೆ ಅವನಿಗೆ ರಕ್ಷಣೆ ನೀಡಬಹುದು ಅಥವಾ ಅಂಥ ಪ್ರದೇಶದಲ್ಲಿ ಲಷ್ಕರೀ ಕಾನೂನಿನ ಮೇರೆಗೆ ವಿಧಿಸಿದ ಯಾವುದೇ ಶಿಕ್ಷೆಯನ್ನು, ವಿಧಿಸಿದ ದಂಡನೆಯನ್ನು, ಆದೇಶಿಸಿದ ಮುಟ್ಟುಗೋಲನ್ನು ಅಥವಾ ಮಾಡಿದ ಇತರ ಕಾರ್ಯವನ್ನು ಸಿಂಧುಗೊಳಿಸಬಹುದು.

35. ಭಾಗದ ಉಪಬಂಧಗಳನ್ನು ಜಾರಿಗೆ ತರುವುದಕ್ಕಾಗಿ ಕಾನೂನು ರಚನೆ:- ಈ ಸಂವಿಧಾನದಲ್ಲಿ ಏನೇ ಇದ್ದಾಗ್ಯೂ, (ಎ) (i) 16ನೆಯ ಅನುಚ್ಛೇದದ (3)ನೆಯ ಖಂಡದ ಮೇರೆಗೆ, 32ನೆಯ ಅನುಚ್ಛೇದದ (3)ನೆಯ ಖಂಡದ ಮೇರೆಗೆ, 33ನೆಯ ಅನುಚ್ಚೇದದ ಮತ್ತು 34ನೆಯ ಅನುಚ್ಛೇದದ ಮೇರೆಗೆ, ಯಾವ ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತು ಮಾಡಿದ ಕಾನೂನಿನ ಮೂಲಕ ಉಪಬಂಧಿಸಬಹುದೋ ಆ ವಿಷಯಗಳ ಪೈಕಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ; ಮತ್ತು (ii) ಈ ಭಾಗದ ಮೇರೆಗೆ ಅಪರಾಧಗಳೆಂದು ಘೋಷಿಸಿರುವ ಕೃತ್ಯಗಳಿಗೆ ದಂಡನೆಯನ್ನು ಗೊತ್ತುಪಡಿಸುವುದಕ್ಕಾಗಿ – ಕಾನೂನುಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿರತಕ್ಕದ್ದು, ಆದರೆ ರಾಜ್ಯದ ವಿಧಾನ ಮಂಡಲಕ್ಕೆ ಅಂಥ ಅಧಿಕಾರವಿರತಕ್ಕದ್ದಲ್ಲ ಮತ್ತು ಸಂಸತ್ತು ಈ ಸಂವಿಧಾನವು ಪ್ರಾರಂಭವಾದ ಮೇಲೆ ಆದಷ್ಟು ಬೇಗನೆ (ii)ನೆಯ ಉಪಖಂಡದಲ್ಲಿ ಉಲ್ಲೇಖಿಸಿರುವ ಕೃತ್ಯಗಳಿಗೆ ದಂಡನೆಯನ್ನು ಗೊತ್ತುಪಡಿಸುವ ಕಾನೂನುಗಳನ್ನು ಮಾಡತಕ್ಕದ್ದು.

(ಬಿ) ಭಾರತದ ರಾಜ್ಯಕ್ಷೇತ್ರದಲ್ಲಿ, ಈ ಸಂವಿಧಾನದ ಪ್ರಾರಂಭಕ್ಕೆ ನಿಕಟಪೂರ್ವದಲ್ಲಿ (ಎ) ಖಂಡದ (i)ನೆಯ ಉಪಖಂಡದಲ್ಲಿ ಉಲ್ಲೇಖಿಸಿರುವ ವಿಷಯಗಳ ಪೈಕಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಥವಾ ಖಂಡದ (ii)ನೆಯ ಉಪಖಂಡದಲ್ಲಿ ಉಲ್ಲೇಖಿಸಿರುವ ಯಾವುದೇ ಕೃತ್ಯಕ್ಕೆ ದಂಡನೆಯನ್ನು ಗೊತ್ತುಪಡಿಸುವುದಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಯಾವುದೇ ಕಾನೂನು, ಅದರ ನಿಬಂಧನೆಗಳಿಗೆ ಮತ್ತು 372ನೆಯ ಅನುಚ್ಛೇದದ ಮೇರೆಗೆ ಅದರಲ್ಲಿ ಮಾಡಬಹುದಾದ ಯಾವುದೇ ಅಳವಡಿಕೆಗಳಿಗೆ ಮತ್ತು ಮಾರ್ಪಾಟುಗಳಿಗೆ ಒಳಪಟ್ಟು, ಸಂಸತ್ತು ಅದನ್ನು ಬದಲಾಯಿಸುವವರೆಗೆ ಅಥವಾ ನಿರಸನಗೊಳಿಸುವವರೆಗೆ ಅಥವಾ ತಿದ್ದುಪಡಿ ಮಾಡುವವರೆಗೆ ಜಾರಿಯಲ್ಲಿರುವುದು ಮುಂದುವರಿಯತಕ್ಕದ್ದು.

ವಿವರಣೆ – ಈ ಅನುಚ್ಛೇದದಲ್ಲಿ “ಜಾರಿಯಲ್ಲಿರುವ ಕಾನೂನು” ಎಂಬ ಪದಗಳಿಗೆ 372ನೆಯ ಅನುಚ್ಛೇದದಲ್ಲಿ ಇರುವ ಅರ್ಥವೇ ಇರುತ್ತದೆ.

ಮೂಲ: ಭಾರತದ ಸಂವಿಧಾನ (1ನೇ ಮೇ, 2011ರಂದು ಇದ್ದಂತೆ), ಭಾರತ ಸರ್ಕಾರ, ಕಾನೂನು ಮತ್ತು ನ್ಯಾಯ ಮಂತ್ರಾಲಯ, ವಿಧಾಯಿ ಇಲಾಖೆ, ಕರ್ನಾಟಕ ರಾಜ ಭಾಷಾ (ವಿಧಾಯೀ) ಆಯೋಗ ಮತ್ತು ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಪು. 6 ರಿಂದ 19

Leave a Reply