ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಮಾತು: ಸಂಜಯ್ ಪಾಟೀಲ್ ಗೆ ನೊಟೀಸ್

2 years ago

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ್ ಪಾಟೀಲ್ ಗೆ ಸಂಕಷ್ಟ ಎದುರಾಗಿದೆ.

ದಿನಾಂಕ:13.04.2024ರಂದು ಹಿಂಡಲಗಾದಲ್ಲಿ ನಡೆದ ಸಮಾವೇಶದಲ್ಲಿ ಬೆಳಗಾವಿ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ್ ಪಾಟೀಲ್ “ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲ ನೋಡಿದರೆ ಅಕ್ಕ ನಿದ್ದೆಗೆಡುತ್ತಾರೆ. ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ಪೆಗ್ ಹೆಚ್ಚುವರಿ ಕುಡಿಯಬೇಕು” ಎಂದು ಹೆಣ್ಣನ್ನು ಪರೋಕ್ಷವಾಗಿ ಮೂದಲಿಸಿರುವ ಬಗ್ಗೆ ಹೇಳಿಕೆ ನೀಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ್ಯೆ ಡಾ.ನಾಗಲಕ್ಷ್ಮಿ ಚೌಧರಿ, ರಾಷ್ಟ್ರೀಯ ಪಕ್ಷದ ಜವಾಬ್ದಾರಿ ಮಾಜಿ ಶಾಸಕರಾಗಿರುವ ಸಂಜಯ್ ಪಾಟೀಲ್ ಅವರು ಬಹಿರಂಗ ಸಭೆಯಲ್ಲಿ ಹೆಣ್ಣುಮಕ್ಕಳನ್ನು ಅಪಮಾನಿಸಿರುವುದನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ಜೊತೆಗೆ, ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995 ಪರಿಚ್ಛೇದ 10(ಎ)ರ ಮೇರೆಗೆ ಅವರಿಗೆ ನೋಟೀಸ್ ಕಳುಹಿಸಿ ನೋಟೀಸ್ ತಲುಪಿದ 7 ದಿನಗಳ ಒಳಗಾಗಿ ರಾಜ್ಯ ಮಹಿಳಾ ಆಯೋಗಕ್ಕೆ ಖುದ್ದು ಹಾಜರಾಗಿ ಸ್ಪಷ್ಟಿಕರಣ ನೀಡುವಂತೆ ಸೂಚಿಸಿದೆ ಎಂದಿದ್ದಾರೆ.

ಈ ಕುರಿತು ಸಂಜಯ್ ಪಾಟೀಲ್ ಅವರಿಗೆ ಪತ್ರ ಬರೆಯಲಾಗಿದ್ದು, ತಾವು ದಿನಾಂಕ:13.04.2024ರಂದು, ಹಿಂಡಲಗಾದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ, ಬೆಳಗಾವಿ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿದ್ದು, “ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೆಜೆಪಿಗೆ ಸಿಕ್ಕ ಬೆಂಬಲ ನೋಡಿದರೆ “ಅಕ್ಕ” ನಿದ್ದೆಗೆಡುತ್ತಾರೆ. ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು “ಪೆಗ್” ಹೆಚ್ಚುವರಿ ಕುಡಿಯಬೇಕು ಎಂದು ಸಚಿವೆಯೊಬ್ಬರಿಗೆ ಪರೋಕ್ಷವಾಗಿ ಮೂದಲಿಸಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಹಿರಂಗವಾಗಿ ಮಹಿಳೆಯೊಬ್ಬರನ್ನು ಅವಮಾನಿಸಿರುವುದನ್ನು ರಾಜ್ಯ ಮಹಿಳಾ ಆಯೋಗವು ತೀವ್ರವಾಗಿ ಖಂಡಿಸಿ, ಗಂಭೀರವಾಗಿ ಪರಿಗಣಿಸಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧಿನಿಯಮ 1995 ಪರಿಚ್ಛೇದ 10 (ಎ)ರ ಮೇರೆಗೆ ತಾವು ಈ ನೊಟೀಸ್ ತಲುಪಿದ 07 ದಿನಗಳೊಳಗಾಗಿ ರಾಜ್ಯ ಮಹಿಳಾ ಆಯೋಗಕ್ಕೆ ಖುದ್ದು ಹಾಜರಾಗಿ ಸದರಿ ವಿಷಯದ ಕುರಿತಾಗಿ “ಸ್ಪಷ್ಟಿಕರಣ” ನೀಡುವಂತೆ ತಿಳಿಸಿದೆ ಎಂದು ನೊಟೀಸ್ ನೀಡಲಾಗಿದೆ.

Leave a Reply