ನ್ಯಾಯಾಧೀಶರ ಎದುರೇ  ವ್ಯಕ್ತಿಯೊಬ್ಬ ಬ್ಲೇಡ್ ನಿಂದ  ಕತ್ತು ಕೊಯ್ದುಕೊಂಡು‌ ಆತ್ಮಹತ್ಯೆಗೆ ಯತ್ನ

2 years ago

ಬೆಂಗಳೂರು:ರಾಜ್ಯ ಹೈಕೋರ್ಟ್ ‌ನಲ್ಲಿ ನಾಟಕೀಯ ಹಾಗೂ ಆಘಾತಕಾರಿ ವಿದ್ಯಮಾನವೊಂದು ನಡೆಯುವ ಮೂಲಕ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್‌ ಹಾಲ್ ಸಂಖ್ಯೆ 1ರಲ್ಲಿ ಬುಧವಾರ ಮಧ್ಯಾಹ್ನ ವ್ಯಕ್ತಿಯೊಬ್ಬರು ಬ್ಲೇಡ್ ನಿಂದ ತಮ್ಮ ಕತ್ತು ಕೊಯ್ದುಕೊಂಡು‌ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಅಲ್ಲಿದ್ದವರು ಬೆಚ್ಚಿ ಬೀಳುವಂತಾಯಿತು.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಚ್. ಪಿ.ಪ್ರಭಾಕರ ಶಾಸ್ತ್ರಿ ಅವರಿದ್ದ ವಿಭಾಗೀಯ ನ್ಯಾಯಪೀಠ ಎಂದಿನಂತೆ ದೈನಂದಿನ ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು.

ಹೈಕೋರ್ಟ್ ಬೆಂಗಳೂರು

ಮಧ್ಯಾಹ್ನ 1.15ರ ಸಮಯದಲ್ಲಿ ಕ್ರಮ ಸಂಖ್ಯೆ 26 ರ ಪ್ರಕರಣವನ್ನು ಕೋರ್ಟ್ ಆಫೀಸರ್ ಕೂಗುತ್ತಿದ್ದಂತೆಯೇ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಒಂದಷ್ಟು ಫೈಲುಗಳೊಂದಿಗೆ ನ್ಯಾಯಪೀಠದ ಮುಂದೆ ಬಂದು ನಿಂತರು. ನೋಡ ನೋಡುತ್ತಿದ್ದಂತೆಯೇ ಆ ವ್ಯಕ್ತಿ ತಾವು ತಂದಿದ್ದ ಹರಿತವಾದ ಬ್ಲೇಡ್‌ನಂತಹ ಆಯುಧದಿಂದ ತಮ್ಮ ಕತ್ತು ಕೊಯ್ದುಕೊಂಡರು.

ತಕ್ಷಣವೇ ಮುಖ್ಯ ನ್ಯಾಯಮೂರ್ತಿಗಳು ಪೊಲೀಸರನ್ನು ಕರೆದು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ವ್ಯಕ್ತಿಯನ್ನು ಹೊರಗೆ ಕರೆದುಕೊಂಡು ಹೋದರು.

ಹೈಕೋರ್ಟ್ ಒಳ ಪ್ರವೇಶಕ್ಕೆ ಭಾರಿ ಬಿಗಿ ಭದ್ರತೆ ಇದ್ದರೂ ಈ ವ್ಯಕ್ತಿ ಇಂತಹ ಆಯುಧದೊಂದಿಗೆ ಹೇಗೆ ಒಳ ಪ್ರವೇಶಿಸಿದರು ಮತ್ತು ಪೊಲೀಸರು ಏನು ಮಾಡುತ್ತಿರುತ್ತಾರೆ ಎಂದು ನ್ಯಾಯಮೂರ್ತಿ ಪ್ರಭಾಕರ ಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೋರ್ಟ್ ಹಾಲ್ ನಲ್ಲಿ ಕುತ್ತಿಗೆ ಕೊಯ್ದುಕೊಂಡ ವ್ಯಕ್ತಿಯ ಹೆಸರು ಚಿನ್ನಂ ಶ್ರೀನಿವಾಸ್. ಮೂಲತಃ ಮೈಸೂರಿನ ವಿಜಯನಗರದ ನಿವಾಸಿ. ಮುಖ್ಯ ನ್ಯಾಯಮೂರ್ತಿ ಅವರಿಗೆ ದೂರು ನೀಡಲು ತಮ್ಮ ಪತ್ನಿ  ಜೊತೆ ಹೈಕೋರ್ಟ್‌ಗೆ ಬಂದಿದ್ದರು. ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಬಳಸುವ ಚಾಕುವನ್ನು ಶ್ರೀನಿವಾಸ್ ತಂದಿದ್ದರು.

ಅಪಾರ್ಟ್​ಮೆಂಟ್​ ನಿರ್ಮಿಸಿ ಲಾಭ ಹಂಚಿಕೊಳ್ಳುವ ವಿಚಾರವಾಗಿ ಶ್ರೀನಿವಾಸ್ ಚಿನ್ನಂ ಮತ್ತವರ ಪಾಲುದಾರ ಶ್ರೀಧರ್ ರಾವ್ ಮತ್ತಿತರರೊಂದಿಗೆ ಒಪ್ಪಂದವಾಗಿತ್ತು. ಆದರೆ,ಪಾಲುದಾರು ಒಪ್ಪಂದ ಪಾಲಿಸದೇ 93 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ 2021ರಲ್ಲಿ ಮೈಸೂರಿನ ವಿಜಯನಗರ ಠಾಣೆಯಲ್ಲಿ ಪ್ರಕರಣ  ದಾಖಲಿಸಿದ್ದರು. ಹಣ ಕೊಡದೆ ವಂಚನೆ ಮಾಡಿದ್ದಲ್ಲದೆ ನನ್ನ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದರು.ಈ ಸಂಬಂಧ ಠಾಣೆಯಲ್ಲಿ ಎಫ್​ಐಆರ್​​ ಕೂಡ ದಾಖಲಾಗಿತ್ತು.

ಎಫ್ಐಆರ್ ಪ್ರಶ್ನಿಸಿ ಶ್ರೀಧರ್ ರಾವ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಿವಿಲ್ ವ್ಯಾಜ್ಯವಾಗಿರುವುದರಿಂದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ, ಸಿವಿಲ್ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿತ್ತು. ಇದರಿಂದ ಬೇಸರಗೊಂಡ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲು ಬಂದಿದ್ದರು.ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಹತಾಶರಾಗಿ ಇಂತಹ ಕೃತ್ಯಕ್ಕೆ ಯತ್ನಿಸಿದರು ಎನ್ನಲಾಗಿದೆ.

Leave a Reply