ಹತ್ತು ವರ್ಷದಲ್ಲಿ ಅಪಾರ ಸಾಧನೆ ಮಾಡಿರುವುದೇ ಸತ್ಯವಾದರೆ ಉರಿ ಬಿಸಿಲಿನಲ್ಲಿ ಊರೂರು ಸುತ್ತಬೇಕು ಏಕೆ?

2 years ago

ಕಳೆದ ಹತ್ತು ವರ್ಷದಲ್ಲಿ ನಮ್ಮ ದೇಶದ ಕೇಂದ್ರ ಸರ್ಕಾರ ಯಾರೂ ಮಾಡದಷ್ಟು ಸಾಧನೆಯನ್ನ ಮಾಡಿರುವುದು ಸತ್ಯವೇ ಆಗಿದ್ದರೆ ನಮ್ಮ ಪ್ರಧಾನ ಮಂತ್ರಿಗಳು ಉರಿ ಬಿಸಿಲಿನಲ್ಲಿ ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ಹಲವಾರು ಬಾರಿ ಭೇಟಿ ಕೊಡುವ ಮತ್ತು ಭಾಷಣ ಮಾಡುವ ಇಲ್ಲವೇ ರೋಡ್ ಶೋ ಗಳನ್ನು ಮಾಡುವ ಅವಶ್ಯಕತೆ ಆದರೂ ಏನಿದೆ?

ಕಳೆದ ಹತ್ತು ವರ್ಷದಲ್ಲಿ ನಿಮ್ಮ ಸರ್ಕಾರದ ಸಾಧನೆಗಳಿಂದ ದೇಶದ ಎಲ್ಲ ಜನತೆ ಸಂತೋಷದ ಸಾಗರದಲ್ಲಿ ತೇಲುತ್ತಿರುವಾಗ ಇನ್ನು ಮತ್ತೆ ಮತ್ತೆ ಅವರಿಗೆ ನಿಮ್ಮ ಸಾಧನೆಯನ್ನು ಹೇಳುವ ಅವಶ್ಯಕತೆಯಾದರು ಏನಿದೆ?

ಪ್ರತಿಯೊಂದು ಮಾಧ್ಯಮಗಳು ಅದರಲ್ಲೂ ದೇಶದ ಎಲ್ಲ ಭಾಷೆಯ ಸುದ್ದಿ ಮಾಧ್ಯಮಗಳು ಸೂರ್ಯ ಹುಟ್ಟಿದಾಗಿನಿಂದ ಹಿಡಿದು ರಾತ್ರಿ ಜನರು ಮಲಗುವ ತನಕ ಪ್ರತಿ ನಿಮಿಷವು ನಿಮ್ಮ ಭಾವಚಿತ್ರವನ್ನು ನಿಮ್ಮ ಮಾತುಗಳನ್ನು ನಿಮ್ಮ ಸಾಧನೆಗಳನ್ನ ಕತೆಯ ರೂಪದಲ್ಲಿ ಜನರಿಗೆ ತೋರಿಸುತ್ತಲೇ ಇದ್ದಾರೆ. ನಿಮ್ಮ ಪ್ರತಿಯೊಂದು ಮಾತಿಗೆ ಹಲವಾರು ಅರ್ಥಗಳನ್ನು ಕಲ್ಪಿಸಿಕೊಂಡು ಧಾರವಾಹಿಯ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ನಿಮ್ಮ ದಿನಚರಿ ನಿಮ್ಮ ಪೂಜೆ ನಿಮ್ಮ ಆಹಾರ ಪದ್ಧತಿ; ಎಲ್ಲವನ್ನು ಚಾಚೂ ತಪ್ಪದೇ ಮನೆಗೆ ಪ್ರತಿಕ್ಷಣವೂ ಮುಟ್ಟಿಸುತ್ತಿದ್ದಾರೆ. ಹೀಗಿದ್ದ ಮೇಲು ಮತ್ತೆ ಮತ್ತೆ ತಾವುಗಳು ಉರಿ ಬಿಸಿಲಿನಲ್ಲಿ ಊರೂರು ಸುತ್ತಬೇಕೆ?

ನಲ್ಲಿ ನೀರು ಎಂದರೆ ಏನೂ ಎಂದು ತಿಳಿದೇ ಇರಲಿಲ್ಲ. ಆದರೆ ತಾವು ಬಂದು ದೇಶದ ಜನರಿಗೆ ನಲ್ಲಿ ನೀರು ಎಂಬ ದೊಡ್ಡ ಕೊಡುಗೆಯನ್ನ ನೀಡಿರುತ್ತೀರಿ! ಹೀಗಿದ್ದ ಮೇಲು ಮತ್ತೆ ಮತ್ತೆ ನೂರು ಸುತ್ತಬೇಕು ಏಕೆ?

ನೀವು ಬರುವ ಮೊದಲು ವಿಮಾನ ನಿಲ್ದಾಣಗಳೇ ಇರಲಿಲ್ಲ! ವಿಮಾನವೆಂದರೆ ಏನೆಂದು ನಮ್ಮ ಜನರಿಗೆ ತಿಳಿದೇ ಇರಲಿಲ್ಲ! ವಿಮಾನ ನಿಲ್ದಾಣಗಳನ್ನು ನಿರ್ಮಿಸಿದವರು ನೀವು! ವಿಮಾನವನ್ನು ತೋರಿಸಿಕೊಟ್ಟವರು ನೀವು! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ರೈಲು ಎಂದರೆ ಹೇಗಿರುತ್ತದೆ ಎಂಬ ಕಲ್ಪನೆಯ ಇರಲಿಲ್ಲ! ನೀವು ಬಂದ ಮೇಲೆ ರೈಲು ಹೀಗಿರುತ್ತದೆ ಎಂದು ತೋರಿಸಿ ಕೊಟ್ಟಿದ್ದೀರಿ! ನಿಮ್ಮಿಂದಾಗಿ ಇಂದು ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ದೊರೆತಿದೆ! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ನೀವು ಬರುವ ಮೊದಲು ರೈತರಿಗೆ ಬಿಡಿಕಾಸಿನ ನೆರವನ್ನು ಯಾರೂ ನೀಡಿರಲಿಲ್ಲ! ನೀವು ಬಂದ ಮೇಲೆ ರೈತರ ಬದುಕು ಆನಂದದಿಂದ ತುಂಬಿದೆ ರೈತರ ಬದುಕಿನಲ್ಲಿ ಸಮಸ್ಯೆ ಎನ್ನುವುದೇ ಇಲ್ಲ! ಸಮಸ್ಯೆ ರಹಿತವಾದ ರೈತರ ಬದುಕನ್ನು ನೀವು ಕಟ್ಟಿಕೊಟ್ಟಿದ್ದೀರಿ! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ನೀವು ಬರುವ ಮೊದಲು ಬಡವರಿಗೆ ಮನೆಗಳು ಎಂದರೆ ಗೊತ್ತಿರಲಿಲ್ಲ! ಯಾವುದೇ ಸರ್ಕಾರವು 70 ವರ್ಷದಲ್ಲಿ ಯಾರಿಗೂ ಮನೆಯನ್ನು ಕಟ್ಟಿ ಕೊಟ್ಟಿರಲಿಲ್ಲ! ನೀವು ಬಂದ ಮೇಲೆ ಮನೆಯನ್ನು ಕಟ್ಟಿಕೊಟ್ಟಿದ್ದೀರಿ! ಆ ಮನೆಗಳಲ್ಲಿ ಜನಗಳು ಕುಣಿದು ಕುಪ್ಪಳಿಸುತ್ತಾ ಆನಂದದಿಂದಿದ್ದಾರೆ! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ಬ್ಯಾಂಕು ಎಂದರೆ ಏನು ಅದರಲ್ಲಿ ಖಾತೆ ತೆಗೆಯುವುದು ಅಂದರು ಹೇಗೆ ಎಂಬ ವಿಚಾರವೇ ತಿಳಿದಿರಲಿಲ್ಲ! ನೀವು ಬಂದ ಮೇಲೆ ದೇಶದ ಜನರಿಗೆ ಬ್ಯಾಂಕು ಎಂದರೇನು? ಖಾತೆ ತೆಗೆಯುವುದು ಎಂದರೇನು? ಎಂಬ ವಿಚಾರ ಕಲಿಯಿತು ಹೀಗಿದ್ದ ಮೇಲು ನೀವು ಸುತ್ತುವುದು ಏಕೆ?

ವಿದ್ಯುತ್ ಸಂಪರ್ಕವೆಂದರೇನು? ದೀಪಗಳು ಎಂದರೆ ಹೇಗಿರುತ್ತದೆ ಎಂಬ ಕಲ್ಪನೆ ಇರಲಿಲ್ಲ! ನೀವು ಬಂದ ಮೇಲೆ ಅಷ್ಟೇ ದೇಶದ ಎಲ್ಲ ಹಳ್ಳಿಗೆ ವಿದ್ಯುತ್ ಸಂಪರ್ಕ ಬಂದಿತು! ದೀಪಗಳು ಬೆಳಗಿತು! ಹೀಗಿದ್ದ ಮೇಲೆ ಉರು ಉರು ಸುತ್ತಬೇಕು ಏಕೆ?

ಇಲ್ಲಿಯತನಕ ಪಡಿತರ ಚೀಟಿಯೇ ನೋಡಿರಲಿಲ್ಲ! ಯಾರಿಗೂ ಪಡಿತರ ಆಹಾರ ಪದಾರ್ಥ ನೀಡುತ್ತಿರಲಿಲ್ಲ! ನೀವು ಬಂದ ಮೇಲೆ ಪಡಿತರ ಚೀಟಿ ಪಡಿತರ ಆಹಾರ ಜನರಿಗೆ ದೊರೆಯುತ್ತಿದೆ! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ಮಹಿಳೆಯರಿಗೆ ಮಣಿಪಾಲವಿರಲಿ ಉತ್ತರಪ್ರದೇಶವಿರಲಿ ಗುಜರಾತು ಇರಲಿ ಎಲ್ಲಿಯೂ ರಕ್ಷಣೆಗೆ ಇರಲಿಲ್ಲ! ನೀವು ಬಂದ ಮೇಲೆ ಮಹಿಳೆಯರಿಗೆ ದೇಶದಲ್ಲಿ ರಕ್ಷಣೆ ದೊರೆಯುತ್ತಿದೆ! ಮಹಿಳೆಯರ ಬದುಕು ಬಂಗಾರವಾಗಿದೆ! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ಸಂಶೋಧನಾ ಸಂಸ್ಥೆಗಳು ಎಂದರೆ ಏನು ಎಂಬುದೇ ಗೊತ್ತಿರಲಿಲ್ಲ! ಶಾಲೆಗಳು ನೋಡಿರಲಿಲ್ಲ! ಕಾಲೇಜುಗಳೇ ಗೊತ್ತಿರಲಿಲ್ಲ! ವಿದ್ಯಾಭ್ಯಾಸವೆಂಬುದು ಯಾರಿಗೂ ಇರಲಿಲ್ಲ! ನೀವು ಬಂದ ಮೇಲೆ ಇವೆಲ್ಲವನ್ನೂ ಕೊಟ್ಟಿದ್ದೀರಿ! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ಪೋಲಿಯೋ ರೋಗಕ್ಕೆ ಇಲ್ಲವೇ ದಡಾರ ಕಾಯಿಲೆಗೆ ಚುಚ್ಚುಮದ್ದೆ ಯಾರು ಕೊಟ್ಟಿರಲಿಲ್ಲ! ನೀವು ಬಂದ ಮೇಲೆ ಎಲ್ಲ ಕಾಯಿಲೆಗಳಿಗೆ ಕೊರೋನ ಕಾಯಿಲೆಗೂ ಸಹ ಚುಚ್ಚುಮದ್ದುಗಳನ್ನ ಸಂಶೋಧನೆ ಮಾಡಿ ಕೊಟ್ಟಿರುತ್ತೀರಿ! ಅದಕ್ಕೆ ಮೊದಲು ಜನರಿಗೆ ಆಸ್ಪತ್ರೆಯೆಂದರೆ ಗೊತ್ತಿರಲಿಲ್ಲ! ಚಿಕಿತ್ಸೆ ಸಿಗುತ್ತಿರಲಿಲ್ಲ! ಈಗ ನೋಡಿ ದೇಶದಲ್ಲಿ ಯಾರಿಗೂ ಯಾವ ಕಾಯಿಲೆ ಇಲ್ಲ! ಹೀಗಿದ್ದ ಮೇಲೆ ಊರೂರು ಸುತ್ತಬೇಕು ಏಕೆ?

ಕಳೆದ 70 ವರ್ಷದಲ್ಲಿ ಯಾವ ಸರ್ಕಾರವು ಯಾವ ಸಾಧನೆಯನ್ನು ಮಾಡಿರಲಿಲ್ಲ! ಇನ್ನೂ ರಾಜ್ಯ ಸರ್ಕಾರಗಳು ಏನೂ ಮಾಡಿರಲಿಲ್ಲ! ಎಲ್ಲವೂ ನಿಮ್ಮಿಂದಲೇ ಆಗುತ್ತಿರುವುದು! ನೀವು ಕೊಡುವ ಹಣದಿಂದಲೇ ರಾಜ್ಯ ಸರ್ಕಾರಗಳು ನಡೆಯುತ್ತಿರುವುದು! ನೀವು ಇಲ್ಲದಿದ್ದರೆ ದೇಶವೇ ಇಲ್ಲ! ಹೀಗಿದ್ದ ಮೇಲು ಊರೂರು ಸುತ್ತುವುದು ಏಕೆ?

ಈಗ ಅರ್ಥವಾಯಿತು ನಿಮ್ಮ ಸಾಧನೆಗಳು ಮಾಧ್ಯಮಗಳಲ್ಲಿ 24 ಗಂಟೆ ತೋರಿಸಿದರೂ ಸಹ ನಿಮ್ಮವರು ಲಕ್ಷಾಂತರ ಮಂದಿ ಪ್ರಚಾರ ಸಭೆಗಳನ್ನ ಮಾಡಿ ಪ್ರಚಾರ ಮಾಡಿದರು ಸಹ ಜನರು ಯಾಕೋ ಇನ್ನೂ ನಿಮ್ಮ ಸಾಧನೆಯನ್ನು ತಿಳಿದುಕೊಂಡೆ ಇಲ್ಲ. ಅದಕ್ಕಾಗಿಯೇ ಪಾಪ ಸ್ವತಃ ಪ್ರಧಾನಮಂತ್ರಿಗಳೆ ಇಡೀ ದೇಶದಾದ್ಯಂತ ಎಲ್ಲ ಚುನಾವಣೆಗಳಲ್ಲಿ ಅದು ವಿಧಾನಸಭೆ ಇರಲಿ ಲೋಕಸಭೆ ಇರಲಿ ಸ್ಥಳೀಯ ಸಂಸ್ಥೆ ಚುನಾವಣೆ ಇರಲಿ ಅವರೇ ಖುದ್ದಾಗಿ ಬಂದು ಜನರಿಗೆ ಸಾಧನೆಯನ್ನ ಹೇಳಿ ಮನದಟ್ಟು ಮಾಡುತ್ತಿದ್ದಾರೆ. ಎಂತಹ ವಿಪರ್ಯಾಸ ನೋಡಿ ಇಷ್ಟು ಸಾಧನೆಯನ್ನು ಜನ ಅರ್ಥ ಮಾಡಿಕೊಂಡಿಲ್ಲ ಜನ ತಿಳಿದುಕೊಂಡಿಲ್ಲ!

  • ಕೆ ಎಸ್ ನಾಗರಾಜ್, ಬೆಂಗಳೂರು

Leave a Reply