ಬೆಂಗಳೂರು: ಜಮಖಂಡಿ ಮತ್ತು ಅಥಣಿ ನಡುವೆ ಕೃಷ್ಣಾ ನದಿ ಸೇತುವೆ ನಿರ್ಮಾಣದ ಯೋಜನೆಯ ವೆಚ್ಚವನ್ನು 60 ಕೋಟಿಯಿಂದ 99 ಕೋಟಿಗೆ ಏರಿಸುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಶೀಘ್ರವೇ ಈ ಸೇತುವೆ ಕಾಮಗಾರಿ ಆರಂಭಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಹನುಮಂತಪ್ಪ ನಿರಾಣಿ ಅವರ ಉತ್ತರಿಸಿದ ಅವರು, ಈ ವಿಚಾರದಲ್ಲಿ ನಮ್ಮ ಇಲಾಖೆಯ ತಪ್ಪಿದೆ. ಕಾರಣ ಅವರು ಸೇತುವೆಯ ಎತ್ತರ ಅಂದಾಜು ಮಾಡುವಾಗ ಸರಿಯಾಗಿ ಮಾಡಿಲ್ಲ. ನೀರಿನ ಪ್ರಮಾಣ ಹೆಚ್ಚಾಗಿ ಹರಿದಾಗ ಅದರ ಎತ್ತರದ ಬಗ್ಗೆ ಸರಿಯಾಗಿ ಲೆಕ್ಕಾಚಾರ ಮಾಡಿಲ್ಲ ಎಂದರು.
ದಾವಣಗೆರೆಯ ಗುತ್ತಿಗೆದಾರರಿಗೆ ಇದರ ಗುತ್ತಿಗೆ ನೀಡಿಲಾಗಿದ್ದು, ಆರಂಭದಲ್ಲಿ 24 ತಿಂಗಳಲ್ಲಿ ಕಾಮಗಾರಿ ಮುಗಿಸಲು ಸೂಚಿಸಲಾಗಿತ್ತು. ಮೊದಲು ಈ ಸೇತುವೆಯನ್ನು 480 ಮೀಟರ್ ನಷ್ಟು ಉದ್ದ, 533 ಮೀ ಎತ್ತರ ಮಾಡಲು ತೀರ್ಮಾನಿಸಲಾಗಿತ್ತು. ಈಗ ಸೇತುವೆ ಗಾತ್ರವನ್ನು ಪರಿಷ್ಕರಿಸಿ ಇದನ್ನು ಕ್ರಮವಾಗಿ 680 ಹಾಗೂ 534 ಮೀ.ಗೆ ಏರಿಕೆ ಮಾಡಲಾಗಿದೆ. ಇದರ ಅಂದಾಜು ವೆಚ್ಚವನ್ನು 60 ಕೋಟಿಯಿಂದ 99 ಕೋಟಿಗೆ ಏರಿಸಲಾಗಿದೆ ಎಂದರು.
ಕೃಷ್ಣಾ ಮೇಲ್ದಂಡೆ 3ನೇ ಹಂತ ಯೋಜನೆ ಕುರಿತಂತೆ ಪ್ರಹ್ಲಾದ್ ಪೂಜಾರ್ ಅವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿವಕುಮಾರ್ 2010ರಲ್ಲಿ ರಾಜ್ಯಕ್ಕೆ 173 ಟಿಎಂಸಿ ಬಂದಿದೆ. ಈ ವಿಚಾರವಾಗಿ ನೋಟಿಫಿಕೇಷನ್ ಆಗುವುದಕ್ಕೆ ನಾವು ಕಾಯುತ್ತಿದ್ದೇವೆ ಎಂದರು.
ಯೋಜನೆ ಕಾಮಗಾರಿಗಳಿಗೆ 2017ರಲ್ಲಿ 52 ಸಾವಿರ ಕೋಟಿ ಅಂದಾಜು ಮಾಡಲಾಗಿತ್ತು. 1,33,867 ಎಕರೆ ಭೂಸ್ವಾಧೀನ ಮಾಡಬೇಕಾಗಿದೆ. ಈವರೆಗೂ 28 ಸಾವಿರ ಎಕರೆ ಭೂಸ್ವಾಧೀನ ಮಾಡಲಾಗಿದೆ. ಭೂಸ್ವಾಧೀನಕ್ಕೆ ಒಣ ಭೂಮಿಗೆ 20 ಲಕ್ಷ ನೀಡಬೇಕು, ನೀರಾವರಿ ಭೂಮಿಗೆ 24 ಲಕ್ಷ ನೀಡಲು ತೀರ್ಮಾನಿಸಲಾಗಿದೆ ಎಂದರು.
ಭೂಸ್ವಾಧೀನಕ್ಕೆ ನಮ್ಮ ಆದ್ಯತೆ ಇದೆ. ಇದನ್ನು ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಇದು ನಮ್ಮ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಕೈಗೊಳ್ಳುತ್ತೇವೆ. ಈ ಭಾಗದಲ್ಲಿ ಪುನರ್ವಸತಿ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದರು.




