ಬೆಂಗಳೂರು: 2021ನೇ ಸಾಲಿನ ಸಾಮಾನ್ಯ ವರ್ಗಾವಣೆ ಆರಂಭಗೊಳ್ಳುವವರೆಗೆ ಇಲಾಖಾ ಹಂತದಲ್ಲಿ ಯಾವುದೇ ವರ್ಗಾವಣೆ ಮಾಡಲೇಬೇಕಾಗಿದ್ದಲ್ಲಿ ಮುಖ್ಯಮಂತ್ರಿ ಅನುಮೋದನೆ ಅಗತ್ಯ ಎಂದು ರಾಜ್ಯ ಸರ್ಕಾರ ಷರತ್ತು ವಿಧಿಸಿದೆ. ವರ್ಗಾವಣೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಮುಖ್ಯಮಂತ್ರಿ @BSYBJP ನಿರ್ಧರಿಸಿದ್ದಾರೆ ಎಂದು ವಿಧಾನಪರಿಷತ್ ನಾಯಕ ಎಸ್.ಆರ್.ಪಾಟೀಲ್ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರ್ಕಾರ ವರ್ಗಾವಣೆ ಸಂಬಂಧ ಇತ್ತೀಚೆಗೆ ಮಾರ್ಗಸೂಚಿಯೊಂದನ್ನು ಹೊರಡಿಸಿತ್ತು. ಇದರ ಪ್ರಕಾರ ಯಾವುದೇ ವರ್ಗಾವಣೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅನುಮೋದನೆ ಅಗತ್ಯವೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಎಸ್.ಆರ್.ಪಾಟೀಲ್, ವರ್ಗಾವಣೆಗೆ ಶಿಫಾರಸು ಮಾಡುವ ಸಚಿವರು, ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳುವ & ಎಲ್ಲ ವರ್ಗಾವಣೆಗಳನ್ನು ಕೇಂದ್ರೀಕೃತಗೊಳಿಸುವ ಉದ್ದೇಶದಿಂದ @BSYBJPರವರು ಈ ಆದೇಶ ಹೊರಡಿಸಿದ್ದಾರೆ. ಸರ್ಕಾರದ ವಿರುದ್ಧ ಮತ್ತು ಬಿಜೆಪಿ ಶಾಸಕರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ @BSYBJPರವರಿಗೆ ರಾಜ್ಯದ ಅಭಿವೃದ್ಧಿಗಿಂತ ಕುರ್ಚಿ ಉಳಿಸಿಕೊಳ್ಳುವುದು ಮತ್ತು ಸ್ವಪ್ರತಿಷ್ಠೆಯೇ ಹೆಚ್ಚಾಗಿದೆ. ಯಡಿಯೂರಪ್ಪನವರು ರಾಜ್ಯದ ಅಭಿವೃದ್ಧಿಯನ್ನೇ ಮರೆತುಬಿಟ್ಟಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.




